ADVERTISEMENT

ಕರ್ನಾಟಕದ ಸಚಿವ ಕೆ.ಎಸ್.ಈಶ್ವರಪ್ಪ ದೇಶದ್ರೋಹಿ: ಜೆಡಿಯು ನಾಯಕ ಉಪೇಂದ್ರ ಕುಶ್ವಾಹ

ರಾಷ್ಟ್ರಧ್ವಜ ಕುರಿತ ವಿವಾದಾತ್ಮಕ ಹೇಳಿಕೆ

ಪಿಟಿಐ
Published 11 ಫೆಬ್ರುವರಿ 2022, 14:20 IST
Last Updated 11 ಫೆಬ್ರುವರಿ 2022, 14:20 IST
ಉಪೇಂದ್ರ ಕುಶ್ವಾಹ
ಉಪೇಂದ್ರ ಕುಶ್ವಾಹ   

ಪಟ್ನಾ: ರಾಷ್ಟ್ರಧ್ವಜದ ಕುರಿತು ವಿವಾದಾತ್ಮಕ ಹೇಳಿಕೆ ನೀಡಿರುವ ಕರ್ನಾಟಕದ ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್. ಈಶ್ವರಪ್ಪ ಅವರು ‘ದೇಶದ್ರೋಹಿ’ ಎಂದು ಜೆಡಿಯು ಸಂಸದೀಯ ಮಂಡಳಿಯ ಮುಖ್ಯಸ್ಥ ಉಪೇಂದ್ರ ಕುಶ್ವಾಹ ಹೇಳಿದ್ದಾರೆ.

‘ಮೊದಲು ಚಕ್ರವರ್ತಿ ಅಶೋಕನನ್ನು ಅವಮಾನಿಸಲಾಯಿತು. ಈಗ ತ್ರಿವರ್ಣ ಧ್ವಜದ ವಿರುದ್ಧ ಆಂದೋಲನವೇ ನಡೆಯುವಂತೆ ಕಾಣುತ್ತಿದೆ. ಭಾರತವು ಇದನ್ನೆಲ್ಲ ಹೇಗೆ ಸಹಿಸಿಕೊಳ್ಳಬೇಕು?’ ಎಂದು ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರ ರಾಜಕೀಯ ಸಹಾಯಕರೂ ಆಗಿರುವ ಕುಶ್ವಾಹ ಹಿಂದಿಯಲ್ಲಿ ಟ್ವೀಟ್ ಮಾಡಿದ್ದಾರೆ.

ತಮ್ಮ ಟ್ವೀಟ್ ಅನ್ನು ಪ್ರಧಾನಿ ನರೇಂದ್ರ ಮೋದಿ ಹಾಗೂ ಕರ್ನಾಟಕದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಟ್ಯಾಗ್ ಮಾಡಿರುವ ಕುಶ್ವಾಹ, ಈಶ್ವರಪ್ಪ ಅವರನ್ನು ‘ದೇಶದ್ರೋಹಿ’ ಎಂದು ಕರೆದಿದ್ದು, ಅವರ ವಿರುದ್ಧ ತ್ವರಿತ ಕ್ರಮ ಕೈಗೊಳ್ಳಬೇಕು ಎಂದೂ ಆಗ್ರಹಿಸಿದ್ದಾರೆ.

ADVERTISEMENT

‘... ಭವಿಷ್ಯದಲ್ಲಿ, 100– 200 ಅಥವಾ 500 ವರ್ಷಗಳ ನಂತರ, ಕೇಸರಿ ಧ್ವಜವು ರಾಷ್ಟ್ರಧ್ವಜವಾಗಬಹುದು’ ಎಂದು ಸಚಿವ ಕೆ.ಎಸ್. ಈಶ್ವರಪ್ಪ ಬುಧವಾರ ಹೇಳಿದ್ದರು. ಅಲ್ಲದೇ, ತ್ರಿವರ್ಣ ಧ್ವಜವು ಈಗ ರಾಷ್ಟ್ರಧ್ವಜವಾಗಿದೆ ಮತ್ತು ಅದನ್ನು ಎಲ್ಲರೂ ಗೌರವಿಸಬೇಕು ಎಂದೂ ಹೇಳಿದ್ದರು.

ಇದಕ್ಕೂ ಮುನ್ನ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ನಾಟಕಕಾರ ದಯಾಪ್ರಕಾಶ್ ಸಿನ್ಹಾ ಅವರು ಅಶೋಕ ಚಕ್ರವರ್ತಿಯನ್ನು ಮೊಘಲ್ ಚಕ್ರವರ್ತಿ ಔರಂಗಜೇಬ್‌ಗೆ ಹೋಲಿಕೆ ಮಾಡಿದ್ದರು. ಇದು ವಿವಾದಕ್ಕೀಡಾಗಿತ್ತು.

ಈ ಹೇಳಿಕೆ ಖಂಡಿಸಿದ್ದ ಕುಶ್ವಾಹ, ಸಿನ್ಹಾ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಬಿಜೆಪಿಯನ್ನು ಕೋರಿದ್ದರು. ಬಳಿಕ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಸಂಜಯ್ ಜೈಸ್ವಾಲ್ ಅವರು, ‘ಬಿಜೆಪಿಯ ಸಾಂಸ್ಕೃತಿಕ ಕೋಶದ ರಾಷ್ಟ್ರೀಯ ಸಂಚಾಲಕರಾಗಿರುವ ದಯಾಪ್ರಕಾಶ್ ಸಿನ್ಹಾ ಅವರು ಅಶೋಕನ ಕುರಿತು ತಪ್ಪು ಮಾಹಿತಿ ಹರಡಿದ್ದಾರೆ’ ಎಂದು ದೂರಿ ಅವರ ವಿರುದ್ಧ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.