ADVERTISEMENT

ದೆಹಲಿ ಎಲ್.ಜಿ ಸಕ್ಸೇನಾರಿಂದ ಅಕ್ರಮ: ಎಎಪಿ ಆರೋಪ

ಕೆವಿಐಸಿ ಅಧ್ಯಕ್ಷರಾಗಿದ್ದಾಗ ನಡೆದ ಪ್ರಕರಣ

ಪಿಟಿಐ
Published 2 ಸೆಪ್ಟೆಂಬರ್ 2022, 19:49 IST
Last Updated 2 ಸೆಪ್ಟೆಂಬರ್ 2022, 19:49 IST

ನವದೆಹಲಿ: ದೆಹಲಿಯ ಲೆಫ್ಟಿನೆಂಟ್‌ ಗವರ್ನರ್‌ (ಎಲ್‌.ಜಿ) ವಿ.ಕೆ. ಸಕ್ಸೇನಾ ಅವರು ಖಾದಿ ಮತ್ತು ಗ್ರಾಮೀಣ ಕೈಗಾರಿಕೆಗಳ ಆಯೋಗದ (ಕೆವಿಐಸಿ) ಅಧ್ಯಕ್ಷರಾಗಿದ್ದಾಗ ಮುಂಬೈನಲ್ಲಿ ನಿರ್ಮಿ ಸಿದ್ದ ಖಾದಿ ಲಾಂಜ್‌ನ ಒಳಾಂಗಣ ವಿನ್ಯಾಸದ ಗುತ್ತಿಗೆಯನ್ನು ತಮ್ಮ ಮಗಳಿಗೆ ನೀಡಿದ್ದರು ಎಂದು ಎಎಪಿ ಶುಕ್ರವಾರ ಆರೋಪಿಸಿದೆ. ಅಧಿಕಾರ ದುರ್ಬಳಕೆ ಮಾಡಿಕೊಂಡಿರುವ ಸಕ್ಸೇನಾ ಅವರನ್ನು ತಕ್ಷಣವೇ ವಜಾ ಮಾಡಬೇಕು ಎಂದು ಪ್ರಧಾನಿಯನ್ನು ಅಗ್ರಹಿಸಿದೆ.

ಗುತ್ತಿಗೆಯನ್ನು ಮಗಳು ಶಿವಾಂಗಿ ಸಕ್ಸೇನಾ ಅವರಿಗೆ ನೀಡಿದ್ದಕ್ಕಾಗಿ ವಿ.ಕೆ. ಸಕ್ಸೇನಾ ಅವರ ವಿರುದ್ಧ ಕಾನೂನು ಕ್ರಮ ಆರಂಭಿಸುವಂತೆಯೂ ಎಎಪಿ ವಕ್ತಾರ ಸಂಜಯ ಸಿಂಗ್‌ ಒತ್ತಾಯಿಸಿದ್ದಾರೆ.

ಹಿರಿಯ ವಕೀಲರ ಜತೆಗೆ ಎಎಪಿ ಸಮಾಲೋಚನೆ ನಡೆಸುತ್ತಿದೆ. ನಿಯಮ ಉಲ್ಲಂಘನೆಯ ವಿಚಾರದಲ್ಲಿ ನ್ಯಾಯಾಲಯದಲ್ಲಿ ದೂರು ದಾಖಲಿಸುವ ಕುರಿತಂತೆಯೂ ಚಿಂತನೆ ನಡೆದಿದೆ ಎಂದು ಸಿಂಗ್‌ ತಿಳಿಸಿದ್ದಾರೆ.

ADVERTISEMENT

‘ಸಕ್ಸೇನಾ ಅವರು ತಾವು ಮಾಡಿದ ತಪ್ಪುಗಳಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ಒಳಾಂಗಣ ವಿನ್ಯಾಸ ಗುತ್ತಿಗೆ ನೀಡಿಕೆಯಲ್ಲಿ ಸರಿಯಾದ ಪ್ರಕ್ರಿಯೆ ಪಾಲಿಸಲಾಗಿಲ್ಲ. ಕೆವಿಐಸಿ ಅಧ್ಯಕ್ಷರು ತಮ್ಮ ಸಂಬಂಧಿಗೆ ಗುತ್ತಿಗೆ ನೀಡುವುದು ಹೇಗೆ ಸಾಧ್ಯ’ ಎಂದು ಸಿಂಗ್ ಪ್ರಶ್ನಿಸಿದ್ದಾರೆ.

‘ವಿ.ಕೆ. ಸಕ್ಸೇನಾ ಅವರು ಕೆವಿಐಸಿ ಅಧ್ಯಕ್ಷರಾಗಿದ್ದಾಗ ಮುಂಬೈ ಖಾದಿ ಲಾಂಜ್‌ನ ಒಳಾಂಗಣವನ್ನು ತಮ್ಮ ಮಗಳಿಂದ ವಿನ್ಯಾಸ ಮಾಡಿಸಿದ್ದು ನಿಜವೇ’ ಎಂದು ಸಿಂಗ್ ಅವರು ಗುರುವಾರ ಟ್ವೀಟ್‌ ಮಾಡಿ ಪ್ರಶ್ನಿಸಿದ್ದರು.

ಎಎಪಿ ಆರೋಪಕ್ಕೆ ಲೆಫ್ಟಿನೆಂಟ್‌ ಗವರ್ನರ್‌ ಕಚೇರಿಯು ಟ್ವೀಟ್‌ ಮೂಲಕವೇ ಸ್ಪಷ್ಟನೆ ನೀಡಿದೆ.

‘ಲೆಫ್ಟಿನೆಂಟ್‌ ಗವರ್ನರ್ ಅವರು ಕೆವಿಐಸಿ ಅಧ್ಯಕ್ಷರಾಗಿದ್ದಾಗ ಮುಂಬೈ ಖಾದಿ ಲಾಂಜ್‌ನ ಒಳಾಂಗಣವನ್ನು ವಿನ್ಯಾಸಕಾರ್ತಿಯಾಗಿರುವ ತಮ್ಮ ಮಗಳಿಂದ ಉಚಿತವಾಗಿ ವಿನ್ಯಾಸ ಮಾಡಿಸಿದ್ದರು. ಒಳಾಂಗಣ ವಿನ್ಯಾಸಕ್ಕೆ ಟೆಂಡರ್ ಕರೆದಿರಲಿಲ್ಲ. ಯಾರಿಗೂ ಗುತ್ತಿಗೆ ನೀಡಿಯೂ ಇಲ್ಲ. ಬದಲಿಗೆ, ಉಚಿತವಾಗಿ ಮಾಡಿಸಿ ಕೆವಿಐಸಿಗೆ ಲಕ್ಷಾಂತರ ರೂಪಾಯಿ ಉಳಿಸಲಾಗಿದೆ’ ಎಂದು ಎಲ್‌.ಜಿ ಕಚೇರಿಯು ಹೇಳಿದೆ.

ಇದಕ್ಕೆ ಪ್ರತಿಕ್ರಿಯೆ ನೀಡಿರುವ ಸಿಂಗ್‌, ಕೆವಿಐಸಿ ಕಾಯ್ದೆಯ ಪ್ರಕಾರ, ಕೆವಿಐಸಿಯ ಅಧಿಕಾರಿಗಳು ತಮ್ಮ ಕುಟುಂಬದ ಸದಸ್ಯರಿಗೆ ಗುತ್ತಿಗೆ ಅಥವಾ ಯಾವುದೇ ಕೆಲಸ ನೀಡುವಂತಿಲ್ಲ ಎಂದಿದ್ದಾರೆ.

‘ಇದು ಎಂತಹ ತರ್ಕ? ಕಂಪ್ಯೂಟರ್‌ ಎಂಜಿನಿಯರ್‌ ಆಗಿರುವ ಸೌರಭ್‌ ಭಾರ ದ್ವಾಜ್‌ ಅವರು (ಎಎಪಿ ಮುಖಂಡ) ಸೆಂಟ್ರಲ್‌ ವಿಸ್ತಾದ ಮಾಹಿತಿ ತಂತ್ರಜ್ಞಾನಕ್ಕೆ ಸಂಬಂಧಿಸಿದ ಎಲ್ಲ ಕೆಲಸಗಳನ್ನು ಉಚಿತವಾಗಿ ಮಾಡಲು ಬಯಸಿದ್ದಾರೆ. ನಮ್ಮ ಪ್ರವೀಣ್‌ ದೇಶಮುಖ್‌ ಅವರು (ಎಎಪಿ ಶಾಸಕ) ಎಂಬಿಎ ಓದಿದ್ದಾರೆ. ಪ್ರಧಾನಿ ಕಚೇರಿಯ ಎಲ್ಲ ವ್ಯವಹಾರಗಳನ್ನು ಅವರು ಉಚಿತವಾಗಿ ನಿರ್ವಹಿಸಲು ಬಯಸಿದ್ದಾರೆ. ಅವರಿಗೆ ಈ ಕೆಲಸಗಳನ್ನು ಕೊಡಲಾಗುವುದೇ’ ಎಂದು ಸಿಂಗ್
ಪ್ರಶ್ನಿಸಿದ್ದಾರೆ.

ಒಳಾಂಗಣ ವಿನ್ಯಾಸದ ಗುತ್ತಿಗೆ ನೀಡಿಕೆಯನ್ನು ನಿಯಮ ಪ್ರಕಾರವೇ ಮಾಡಬೇಕಿತ್ತು. ಅದನ್ನು ಉಚಿತವಾಗಿಯೇ ಮಾಡಿಸಲು ಕೆವಿಐಸಿ ಬಯಸಿದ್ದಿದ್ದರೆ ಅದಕ್ಕೂ ಬಹಿರಂಗ ಆಹ್ವಾನ ನೀಡಬೇಕಿತ್ತು. ಅತ್ಯುತ್ತಮ ಒಳಾಂಗಣ ವಿನ್ಯಾಸಕಾರರನ್ನು ಆಯ್ಕೆ ಮಾಡಿಕೊಳ್ಳಬೇಕಿತ್ತು ಎಂದು ಸಿಂಗ್‌ ಹೇಳಿದ್ದಾರೆ.

ವಿ.ಕೆ. ಸಕ್ಸೇನಾ ಅವರು ಮುಂಬೈ ಖಾದಿ ಲಾಂಜ್‌ನ ಉದ್ಘಾಟನಾ ಫಲಕದಲ್ಲಿ ತಮ್ಮ ಮಗಳ ಹೆಸರನ್ನೂ ಸೇರಿಸಿದ್ದಾರೆ ಎಂದೂ ಸಿಂಗ್ ಹೇಳಿದ್ದಾರೆ.

ಎಲ್.ಜಿ ಕಚೇರಿ ಸ್ಪಷ್ಟನೆಗೆ ಆಕ್ಷೇಪ
ವಿ.ಕೆ. ಸಕ್ಸೇನಾ ಅವರ ವಿರುದ್ಧದ ಆರೋಪಗಳಿಗೆ ಎಲ್‌.ಜಿ ಕಚೇರಿಯು ಸ್ಪಷ್ಟನೆ ನೀಡಿರುವುದಕ್ಕೆ ಎಎಪಿ ವಕ್ತಾರ ಸೌರಭ್ ಭಾರದ್ವಾಜ್‌ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಇದು ಸರಿಯಾದ ಕ್ರಮ ಅಲ್ಲ ಎಂದಿದ್ದಾರೆ.

ಸಕ್ಸೇನಾ ಅವರು ವೈಯಕ್ತಿಕವಾಗಿ ಸ್ಪಷ್ಟನೆ ಕೊಡಬೇಕು. ಸಾಂವಿಧಾನಿಕ ಹುದ್ದೆಯೊಂದರ ಅಧಿಕೃತ ಟ್ವಿಟರ್‌ ಖಾತೆಯಿಂದ ಇಂತಹ ಸ್ಪಷ್ಟನೆ ನೀಡಬಾರದು ಎಂದು ಅವರು ಹೇಳಿದ್ದಾರೆ.

*
ವಿ.ಕೆ. ಸಕ್ಸೇನಾ ಅವರನ್ನು ತಕ್ಷಣವೇ ವಜಾ ಮಾಡಿ ತನಿಖೆಗೆ ಆದೇಶಿಸದೇ ಇದ್ದರೆ, ವಂಶಾಡಳಿತದ ಬಗ್ಗೆ ಮಾತನಾಡಲು ಪ್ರಧಾನಿಗೆ ಹಕ್ಕು ಇರುವುದಿಲ್ಲ
-ಸಂಜಯ ಸಿಂಗ್‌, ಎಎಪಿ ವಕ್ತಾರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.