ADVERTISEMENT

ಪಟ್ನಾ: ಊರು ಸೇರಲು 1 ಸಾವಿರ ಕಿ.ಮೀ. ಕಾಲ್ನಡಿಗೆ

​ಪ್ರಜಾವಾಣಿ ವಾರ್ತೆ
Published 26 ಮಾರ್ಚ್ 2020, 20:30 IST
Last Updated 26 ಮಾರ್ಚ್ 2020, 20:30 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಪಟ್ನಾ: ದೇಶವೇ ಲಾಕ್‌ಡೌನ್‌ ಆಗಿರುವುದರಿಂದ ಸಾರಿಗೆ ಸಂಪರ್ಕಗಳ ವ್ಯವಸ್ಥೆಗಳಿಲ್ಲದೇ,ಶೀತಲೀಕರಣ ಘಟಕದ (ಕೋಲ್ಡ್‌ ಸ್ಟೋರೇಜ್‌) ಹದಿನಾಲ್ಕು ಕಾರ್ಮಿಕರು ತಮ್ಮ ಊರು ತಲುಪಲು 1,000 ಕಿ.ಮೀ. ಕಾಲ್ನಡಿಗೆ ಪ್ರಯಾಣ ಆರಂಭಿಸಿದ್ದಾರೆ.

ಬಿಹಾರ ಮೂಲದವರಾದ ಈ ಕಾರ್ಮಿಕರು ಇಪ್ಪತ್ತೈದು ದಿನಗಳ ಹಿಂದೆ ಜೈಪುರದಲ್ಲಿ ಕೆಲಸಕ್ಕೆ ಸೇರಿದ್ದರು. ಮಾಲೀಕರು ಇವರ ಕೈಗೆ ₹ 2 ಸಾವಿರ ನೀಡಿ ಊರಿಗೆ ಹೋಗುವಂತೆ ತಿಳಿಸಿದ್ದಾರೆ.

‘ಮಾರ್ಚ್‌ 21ರಿಂದಲೇ ರಾಜ್ಯ ಸರ್ಕಾರ ಸಂಪೂರ್ಣ ಲಾಕ್‌ಡೌನ್‌ ಘೋಷಣೆ ಮಾಡಿದ್ದರಿಂದ ಯಾವುದೇ ಸಾರಿಗೆ ಸಂಪರ್ಕಗಳ ವ್ಯವಸ್ಥೆ ಇಲ್ಲ. ಕಾಲ್ನಡಿಗೆಯಲ್ಲಿ ಊರು ಸೇರುವುದು ಹೊರತುಪಡಿಸಿ ನಮಗೆ ಬೇರೆ ಆಯ್ಕೆ ಇಲ್ಲ. ಡಾಬಾಗಳೆಲ್ಲ ಮುಚ್ಚಿದ್ದು,ಊಟ ಸಿಗುವುದು ಕಷ್ಟವಾಗಿದೆ. ಸಿಕ್ಕಿದ್ದನ್ನು ತಿಂದು ಹೊಟ್ಟೆ ತುಂಬಿಸಿಕೊಳ್ಳುತ್ತಿದ್ದೇವೆ. ಐದು ದಿನಗಳವರೆಗೆ ನಡೆದು, ಈಗ ಉತ್ತರಪ್ರದೇಶ ತಲುಪುತ್ತಿದ್ದೇವೆ’ ಎಂದು ಕಾರ್ಮಿಕ ಸುಧೀರ್‌ ತಿಳಿಸಿದರು.

ADVERTISEMENT

ಪ್ರತ್ಯೇಕವಾಗಿರುವಂತೆ ಗ್ರಾಮಸ್ಥರ ಸೂಚನೆ: ತಮಿಳುನಾಡಿನಲ್ಲಿ ಕೆಲಸ ಮಾಡುತ್ತಿದ್ದ 45 ಯುವಕರು ಬಿಹಾರದ ಔರಂಗಾಬಾದ್‌ಗೆ ವಾಪಸ್‌ ಆಗಿದ್ದು, ಮುನ್ನೆಚ್ಚರಿಕೆ ಕ್ರಮವಾಗಿ ಅವರನ್ನು ಪ್ರಾಥಮಿಕ ಶಾಲೆಯಲ್ಲಿಗ್ರಾಮ ಅಭಿವೃದ್ಧಿ ಸಮಿತಿ ಸಿದ್ಧಪಡಿಸಿರುವ ಐಸೊಲೇಟೆಡ್‌ ವಾರ್ಡ್‌ನಲ್ಲಿ ಇರಿಸುವಂತೆ ಗ್ರಾಮಸ್ಥರು ಮನವಿ ಮಾಡಿದ್ದಾರೆ.

ಕಾರ್ಮಿಕರ ಪರದಾಟ: 200ಕ್ಕೂ ಹೆಚ್ಚು ವಲಸೆ ಕಾರ್ಮಿಕರು ಬಸ್‌ ಸಿಗಬಹುದೆಂಬ ನಿರೀಕ್ಷೆಯಲ್ಲಿ ಪಟ್ನಾದ ಮಿಥಾಪುರ ಬಸ್‌ ನಿಲ್ದಾಣದಲ್ಲಿ ಕಾಯುತ್ತಿದ್ದರು. ಜನರು ಒಂದೆಡೆ ಗುಂಪು ಸೇರಿರುವುದನ್ನು ಕಂಡು ಗ್ರಾಮಸ್ಥರು ಪೊಲೀಸರಿಗೆ ಮಾಹಿತಿ ನೀಡಿದರು. ಸ್ಥಳಕ್ಕೆ ಬಂದ ಪೊಲೀಸರು ಗುಂಪನ್ನು ಚದುರಿಸಿದರು. ನಂತರ, ಹಲವು ಕಾರ್ಮಿಕರು ಕಾಲ್ನಡಿಗೆಯಲ್ಲಿಯೇ ಉತ್ತರ ಬಿಹಾರದಲ್ಲಿರುವ ತಮ್ಮ ಸಂಬಂಧಿಕರ ಮನೆಗೆ ಹೋಗುವುದಾಗಿ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.