ADVERTISEMENT

ಲೇಹ್‌ನಲ್ಲಿ ಹಿಂಸಾಚಾರಕ್ಕೆ ಪ್ರಚೋದನೆ ನೀಡಿದ ಆರೋಪ: ಸೋನಮ್ ವಾಂಗ್ಚುಕ್‌ ಬಂಧನ

ಪಿಟಿಐ
Published 26 ಸೆಪ್ಟೆಂಬರ್ 2025, 11:21 IST
Last Updated 26 ಸೆಪ್ಟೆಂಬರ್ 2025, 11:21 IST
<div class="paragraphs"><p>ಸೋನಮ್‌ ವಾಂಗ್ಚುಕ್‌</p></div>

ಸೋನಮ್‌ ವಾಂಗ್ಚುಕ್‌

   

(ಪಿಟಿಐ ಚಿತ್ರ)

ಲೇಹ್: ಲೇಹ್‌ನಲ್ಲಿ ಬುಧವಾರ ನಡೆದ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಪರಿಸರ ಹೋರಾಟಗಾರ ಸೋನಮ್‌ ವಾಂಗ್ಚುಕ್‌ ಅವರನ್ನು ಪೊಲೀಸರು ಶುಕ್ರವಾರ ಇಲ್ಲಿ ಬಂಧಿಸಿದ್ದಾರೆ.

ADVERTISEMENT

ಲಡಾಕ್‌ ಡಿಜಿಪಿ ಎಸ್‌.ಡಿ.ಸಿಂಗ್‌ ಜಮ್ವಾಲ್‌ ನೇತೃತ್ವದಲ್ಲಿ ಪೊಲೀಸರ ತಂಡವು ಮಧ್ಯಾಹ್ನ 2.30ಕ್ಕೆ ವಾಂಗ್ಚುಕ್‌ ಅವರನ್ನು ವಶಕ್ಕೆ ಪಡೆದಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.‌ ಅವರ ವಿರುದ್ಧ ಯಾವ ಆರೋಪ ಹೊರಿಸಲಾಗಿದೆ ಎಂಬುದನ್ನು ಸ್ಪಷ್ಟಪಡಿಸಲಾಗಿಲ್ಲ.

ಪರಿಸರ ಹೋರಾಟಗಾರ ಸೋನಮ್ ವಾಂಗ್ಚುಕ್‌ ನಡೆಸುತ್ತಿರುವ ಉಪವಾಸ ಸತ್ಯಾಗ್ರಹ ಬೆಂಬಲಿಸಿ ಲೇಹ್‌ ಅಪೆಕ್ಸ್‌ ಬಾಡಿ (ಎಲ್‌ಎಬಿ) ಬುಧವಾರ ಬಂದ್‌ಗೆ ಕರೆ ನೀಡಿತ್ತು. ಈ ವೇಳೆ ಪೊಲೀಸರು ಮತ್ತು ಪ್ರತಿಭಟನಕಾರರ ಮಧ್ಯೆ ಸಂಘರ್ಷ ಉಲ್ಬಣಗೊಂಡು, ನಾಲ್ವರು ಮೃತಪಟ್ಟು, 80ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದರು. 

ಬುಧವಾರ ಲೇಹ್‌ನಲ್ಲಿ ನಡೆದ ಹಿಂಸಾಚಾರಕ್ಕೆ ಸೋನಮ್‌ ವಾಂಗ್ಚುಕ್‌, ಎಲ್‌ಎಬಿ ಹಾಗೂ ಕೆಡಿಎನ ಹಿರಿಯ ಸದಸ್ಯರು ಪ್ರಚೋದಿಸಿದ್ದೇ ಕಾರಣ ಎಂದು ಗೃಹ ಸಚಿವಾಲಯವು ಆರೋಪಿಸಿತ್ತು. 

ತಮ್ಮ ಮೇಲಿನ ಆರೋಪವನ್ನು ತಳ್ಳಿಹಾಕಿದ್ದ ವಾಂಗ್ಚುಕ್‌ ಹಿಂಸಾಚಾರವನ್ನು ಖಂಡಿಸಿದ್ದರು. ಅಲ್ಲದೇ, ಹದಿನೈದು ದಿನಗಳಿಂದ ನಡೆಸುತ್ತಿದ್ದ ಉಪವಾಸವನ್ನು ಬುಧವಾರ ಕೊನೆಗೊಳಿಸಿದ್ದರು.

ಮೂರನೇ ದಿನವೂ ಕರ್ಫ್ಯೂ ಮುಂದುವರಿಕೆ: ಲಡಾಕ್‌ಗೆ ರಾಜ್ಯದ ಸ್ಥಾನಮಾನ ನೀಡುವಂತೆ ಆಗ್ರಹಿಸಿ ಲೇಹ್‌ನಲ್ಲಿ ನಡೆದ ಪ್ರತಿಭಟನೆಯೂ ಹಿಂಸಾಚಾರಕ್ಕೆ ತಿರುಗಿದ ಬೆನ್ನಲ್ಲೇ, ಪಟ್ಟಣದಲ್ಲಿ ಜಾರಿಗೊಳಿಸಲಾಗಿದ್ದ ಕರ್ಫ್ಯೂ ಶುಕ್ರವಾರ ಮೂರನೇ ದಿನಕ್ಕೆ ಕಾಲಿಟ್ಟಿತು. ಇದರ ಬೆನ್ನಲ್ಲೇ, ಗೃಹ ಸಚಿವಾಲಯದ ಹಿರಿಯ ಅಧಿಕಾರಿಗಳ ತಂಡವು ಒಟ್ಟಾರೆ ಭದ್ರತಾ ಪರಿಸ್ಥಿತಿ ಕುರಿತಂತೆ ನಿರಂತರ ಸಭೆಗಳನ್ನು ನಡೆಸಿತು.

‘ಲಡಾಕ್‌ನಲ್ಲಿ ಒಟ್ಟಾರೆ ಪರಿಸ್ಥಿತಿಯೂ ಶಾಂತಿಯುತವಾಗಿದೆ. ಅಗತ್ಯ ವಸ್ತುಗಳ ಖರೀದಿಸಲು ನಿರ್ಬಂಧವನ್ನು ಸಡಿಲಿಸಲಾಗುವುದು’ ಎಂದು ಪೊಲೀಸ್‌ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಕಳೆದ ಐದು ವರ್ಷಗಳಿಂದ ಹಲವು ಬೇಡಿಕೆಗಳನ್ನು ಮುಂದಿಟ್ಟುಕೊಂಡು ಹೋರಾಟ ನಡೆಸುತ್ತಿರುವ ಲೇಹ್‌ ಅಪೆಕ್ಸ್‌ ಬಾಡಿ (ಎಲ್‌ಎಬಿ) ಮತ್ತು ಕಾರ್ಗಿಲ್ ಡೆಮಾಕ್ರಟಿಕ್ ಅಲಯನ್ಸ್‌ (ಕೆಡಿಎ) ಸಂಘಟನೆಯ ಪ್ರಮುಖ ಸದಸ್ಯರಾಗಿರುವ ವಾಂಗ್ಚುಕ್‌ ಅವರು ಹಿಂಸೆಗೆ ಪ್ರಚೋದನೆ ನೀಡಿದ್ದಾರೆ ಎಂದು ಗೃಹ ಸಚಿವಾಲಯ ಆರೋಪ ಮಾಡಿತ್ತು.

ಲಡಾಕ್‌ನಲ್ಲಿ ಒಟ್ಟಾರೆ ಪರಿಸ್ಥಿತಿಯೂ ಶಾಂತಿಯುತವಾಗಿದೆ. ಅಗತ್ಯ ವಸ್ತುಗಳ ಖರೀದಿಸಲು ನಿರ್ಬಂಧವನ್ನು ಸಡಿಲಿಸಲಾಗುವುದು ಎಂದು ಪೊಲೀಸ್‌ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಇದುವರೆಗೂ 50 ಮಂದಿಯನ್ನು ವಶಕ್ಕೆ ಪಡೆಯಲಾಗಿದ್ದು, ಕಾರ್ಗಿಲ್‌ ಸೇರಿದಂತೆ ಪ್ರಮುಖ ಪಟ್ಟಣಗಳಲ್ಲಿ ಐದಕ್ಕಿಂತಲೂ ಹೆಚ್ಚು ಮಂದಿ ಸೇರುವುದಕ್ಕೆ ನಿಷೇಧ ಮುಂದುವರಿಸಲಾಗಿದೆ. ಪೊಲೀಸರು ಹಾಗೂ ಅರೆಸೇನಾ ಪಡೆಯ ಯೋಧರು ನಗರದ ಪ್ರಮುಖ ಸ್ಥಳಗಳಲ್ಲಿ ಗಸ್ತು ಕಾಯುತ್ತಿದ್ದು, ಪ್ರಮುಖ ರಸ್ತೆಗಳಲ್ಲಿ ವಾಹನಗಳ ಸಂಚಾರವಿಲ್ಲದೇ ಖಾಲಿ ಖಾಲಿಯಾಗಿತ್ತು.

ಶಾಲಾ– ಕಾಲೇಜುಗಳು ಬಂದ್‌:

ಶುಕ್ರವಾರದಿಂದ ಮುಂದಿನ ಎರಡು ದಿನಗಳವರೆಗೂ ಸರ್ಕಾರಿ, ಖಾಸಗಿ ಶಾಲೆಗಳು, ಕಾಲೇಜುಗಳು ಹಾಗೂ ಇತರೆ ಶಿಕ್ಷಣ ಸಂಸ್ಥೆಗಳನ್ನು ಮುಚ್ಚುವಂತೆ ಲೇಹ್‌ ಜಿಲ್ಲಾ ಮ್ಯಾಜಿಸ್ಟ್ರೇಟ್‌ ರೊಮಿಲ್‌ ಸಿಂಗ್‌ ಡೊಂಕ್‌ ಆದೇಶ ಹೊರಡಿಸಿದ್ದಾರೆ. ಅಂಗನವಾಡಿ ಕೇಂದ್ರಗಳು ಕೂಡ ತೆರೆಯುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಉನ್ನತ ಮಟ್ಟದ ಸಭೆ:

ಜಿಲ್ಲೆಯ ಭದ್ರತಾ ಸ್ಥಿತಿಗತಿ ಕುರಿತಂತೆ ಕೇಂದ್ರ ಗೃಹ ಸಚಿವಾಲಯದ ಉನ್ನತ ಮಟ್ಟದ ಅಧಿಕಾರಿಗಳು ತಂಡವು ಗುರುವಾರವೇ ಲೇಹ್‌ಗೆ ತಲುಪಿದೆ. ಈ ತಂಡವು ಲೆಫ್ಟಿನೆಂಟ್‌ ಗವರ್ನರ್‌, ಪೊಲೀಸ್‌ ಅಧಿಕಾರಿಗಳು ಲೇಪಹ್‌ ಅಪೆಕ್ಸ್‌ ಬಾಡಿ (ಎಲ್‌ಎಬಿ) ಪ್ರತಿನಿಧಿಗಳ ಜೊತೆ ಸಭೆ ನಡೆಸಿತು.

ಸೆ.27 ಅಥವಾ 28ರಂದು ನವದೆಹಲಿಯಲ್ಲಿ ಗೃಹ ಸಚಿವಾಲಯದ ಪೂರ್ವಸಿದ್ಧತಾ ಸಭೆ ನಡೆಸಲು ಶುಕ್ರವಾರ ತೀರ್ಮಾನಿಸಿತು. ಈ ಸಭೆಗೆ ಎಲ್‌ಎಬಿ, ಕಾರ್ಗಿಲ್ ಡೆಮಾಕ್ರಟಿಕ್‌ ಅಲಯನ್ಸ್‌ (ಕೆಡಿಎ) ಪ್ರತಿನಿಧಿಗಳು ಹಾಗೂ ಲಡಾಕ್‌ ಸಂಸದ ಮೊಹಮ್ಮದ್‌ ಹನೀಫಾ ಜಾನ್‌ ಕೂಡ ಭಾಗವಹಿಸಲು ತೀರ್ಮಾನ ತೆಗೆದುಕೊಂಡಿದೆ.

ಸೋನಮ್‌ ವಾಂಗ್ಚುಕ್‌ ಅವರ ಬಂಧನವು ದುರದೃಷ್ಟಕರ. ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರವು ತಾನು ನೀಡಿದ್ದ ಭರವಸೆಗಳಿಂದ ಹಿಂದೆ ಸರಿಯುತ್ತಿದೆ
ಒಮರ್‌ ಅಬ್ದುಲ್ಲಾ ಮುಖ್ಯಮಂತ್ರಿ ಜಮ್ಮು ಮತ್ತು ಕಾಶ್ಮೀರ
ವಿನಾಕಾರಣ ವಾಂಗ್ಚುಕ್‌ ಅವರನ್ನು ಅಪರಾಧಿಯಂತೆ ನಡೆಸಿಕೊಳ್ಳಲಾಯಿತು. ಪೊಲೀಸರು ಮನೆಯನ್ನು ಲೂಟಿ ಮಾಡಿದ್ದು ಅವರನ್ನು (ವಾಂಗ್ಚುಕ್‌) ದೇಶವಿರೋಧಿ ಎಂಬಂತೆ ಬಿಂಬಿಸಲಾಗುತ್ತಿದೆ
ಗೀತಾಂಜಲಿ ಅಂಗ್ಮೊ ಸೋನಮ್‌ ವಾಂಗ್ಚುಕ್‌ ಪತ್ನಿ
ಬೇಡಿಕೆಗಳು ಏನು
ಲಡಾಕ್‌ಗೆ ಪ‍್ರತ್ಯೇಕ ರಾಜ್ಯದ ಸ್ಥಾನಮಾನ, ಸಂವಿಧಾನದ 6ನೇ ಪರಿಚ್ಛೇದಕ್ಕೆ ಸೇರಿಸಲು ಒತ್ತಾಯ, ಲೇಹ್‌, ಕಾರ್ಗಿಲ್‌ಗೆ ಪ್ರತ್ಯೇಕ ಲೋಕಸಭಾ ಕ್ಷೇತ್ರ, ರಾಜ್ಯ ಲೋಕಸೇವಾ ಆಯೋಗ ಸ್ಥಾಪಿಸುವುದು ಪ್ರಮುಖ ಬೇಡಿಕೆಗಳಾಗಿವೆ ಎಂದು ಎಲ್‌ಎಬಿ ಹಾಗೂ ಕೆಡಿಎ ಪ್ರತಿಪಾದಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.