ADVERTISEMENT

ಲಡ್ಕಿ ಬಹಿನ್‌ ಯೋಜನೆಯಡಿ 14 ಸಾವಿರಕ್ಕೂ ಅಧಿಕ ಪುರುಷರ ಖಾತೆಗೆ ₹21.44 ಕೋಟಿ ಜಮಾ!

ಡೆಕ್ಕನ್ ಹೆರಾಲ್ಡ್
Published 27 ಜುಲೈ 2025, 10:56 IST
Last Updated 27 ಜುಲೈ 2025, 10:56 IST
<div class="paragraphs"><p>ಎಐ ಚಿತ್ರ</p></div>

ಎಐ ಚಿತ್ರ

   

ಮುಂಬೈ: ಮಹಿಳೆಯರಿಗಾಗಿಯೇ ಮೀಸಲಾಗಿರುವ ‘ಲಡ್ಕಿ ಬಹಿನ್’ ಯೋಜನೆಯಡಿ 14,298 ಪುರುಷರು ಪ್ರಯೋಜನಗಳನ್ನು ಪಡೆದಿರುವ ಬಗ್ಗೆ ವರದಿಯಾಗಿದ್ದು, ಈ ‘ಮಹಾ’ ವಂಚನೆ ಬಗ್ಗೆ ತನಿಖೆ ನಡೆಸುವಂತೆ ವಿರೋಧ ಪಕ್ಷಗಳು ಆಗ್ರಹಿಸಿವೆ.

ಕಳೆದ 10 ತಿಂಗಳಲ್ಲಿ 14,298 ಪುರುಷರ ಖಾತೆಗೆ ₹21.44 ಕೋಟಿ ಜಮೆಯಾಗಿರುವ ಬಗ್ಗೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ನಡೆಸಿದ ಲೆಕ್ಕಪರಿಶೋಧನೆಯಿಂದ ತಿಳಿದುಬಂದಿದೆ. ಫಲಾನುಭವಿಗಳ ಪರಿಶೀಲನಾ ಪ್ರಕ್ರಿಯೆ ವೇಳೆ ಈ ವಂಚನೆ ಬೆಳಕಿಗೆ ಬಂದಿದೆ ಎಂದು ಸರ್ಕಾರ ತಿಳಿಸಿದೆ.

ADVERTISEMENT

ಈ ಯೋಜನೆಯಡಿಯಲ್ಲಿ ವಾರ್ಷಿಕ ₹2.5 ಲಕ್ಷ ಕಡಿಮೆ ಆದಾಯ ಹೊಂದಿರುವ 21ರಿಂದ 65 ವರ್ಷ ವಯಸ್ಸಿನ ಮಹಿಳೆಯರ ಖಾತೆಗೆ ಮಾಸಿಕ ₹1,500 ಜಮಾ ಮಾಡಲಾಗುತ್ತಿದೆ.

ಈ ಕುರಿತು ಮಹಾಯುತಿ ಸರ್ಕಾರವನ್ನು ಟೀಕಿಸಿರುವ ಎನ್‌ಸಿಪಿ(ಎಸ್‌ಪಿ) ಮುಖ್ಯಸ್ಥ ಶರದ್‌ ಪವಾರ್‌, ‘ಹಲವು ತಿಂಗಳುಗಳ ನಂತರ ನಕಲಿ ಫಲಾನುಭವಿಗಳನ್ನು ಪತ್ತೆ ಮಾಡಿರುವುದು ಸರ್ಕಾರದ ಅದಕ್ಷತೆಯನ್ನು ತೋರಿಸುತ್ತದೆ’ ಎಂದಿದ್ದಾರೆ.

ಇನ್ನು, ಈ ಬಗ್ಗೆ ಸುದ್ದಿಗಾರರಿಗೆ ಪ್ರತಿಕ್ರಿಯಿಸಿರುವ ಉಪಮುಖ್ಯಮಂತ್ರಿ ಅಜಿತ್ ಪವಾರ್‌, ಯೋಜನೆಯ ಲಾಭ ಪಡೆದ ಪುರುಷರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.

‘ಬಡ ಮಹಿಳೆಯರಿಗಾಗಿ ಈ ಯೋಜನೆಯನ್ನು ತಂದಿದ್ದು, ಪುರಷರು ಈ ಯೋಜನೆ ಲಾಭ ಪಡೆಯುವುದರಲ್ಲಿ ಅರ್ಥವಿಲ್ಲ. ಅವರಿಂದ ಹಣವನ್ನು ವಸೂಲಿ ಮಾಡಲಾಗುತ್ತದೆ’ ಎಂದಿದ್ದಾರೆ.

26.34 ಲಕ್ಷ ಫಲಾನುಭವಿಗಳು ತಾತ್ಕಾಲಿಕ ಅಮಾನತು:

ಲಡ್ಕಿ ಬಹಿನ್ ಯೋಜನೆಯಡಿ ಅನರ್ಹ ಎಂದು ಗುರುತಿಸಲಾಗಿರುವ 26.34 ಲಕ್ಷ ಫಲಾನುಭವಿಗಳನ್ನು ಜೂನ್ ತಿಂಗಳ ಕಂತಿನಿಂದ ತಾತ್ಕಾಲಿಕವಾಗಿ ಅಮಾನತುಗೊಳಿಸಲಾಗಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಅದಿತಿ ತತ್ಕರೆ ತಿಳಿಸಿದ್ದಾರೆ.

‘ಅನರ್ಹರಾಗಿದ್ದರೂ ಸಹ, ಸುಮಾರು 26.34 ಲಕ್ಷ ಫಲಾನುಭವಿಗಳು ಲಡ್ಕಿ ಬಹಿನ್‌ ಯೋಜನೆಯ ಫಲಾನುಭವಿಗಳಾಗಿದ್ದಾರೆ ಎಂದು ಮಾಹಿತಿ ಮತ್ತು ತಂತ್ರಜ್ಞಾನ ಇಲಾಖೆ ವರದಿ ಮಾಡಿದೆ. ಈ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗಿದೆ’ ಎಂದಿದ್ದಾರೆ.

‘ಪರಿಶೀಲನೆಯ ನಂತರ ಅರ್ಹರೆಂದು ಕಂಡುಬಂದವರಿಗೆ ಯೋಜನೆಯನ್ನು ಪುನರಾರಂಭಿಸಲಾಗುತ್ತದೆ. ಆದರೆ, ಸರ್ಕಾರವನ್ನು ವಂಚಿಸಿ ಅನುಚಿತ ಮಾರ್ಗಗಳ ಮೂಲಕ ಪ್ರಯೋಜನ ಪಡೆದಿರುವ ಫಲಾನುಭವಿಗಳ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು’ ಎಂದು ಎಚ್ಚರಿಸಿದ್ದಾರೆ.

‘ಪುರುಷರು ಈ ಯೋಜನೆಯ ಪ್ರಯೋಜನ ಪಡೆದಿರುವುದು ಪರಿಶೀಲನೆ ವೇಳೆ ಕಂಡುಬಂದಿದೆ. ಕೆಲವು ಕುಟಂಬಗಳಲ್ಲಿ ಇಬ್ಬರಿಗಿಂತ ಹೆಚ್ಚು ಫಲಾನುಭವಿಗಳು ಇರುವುದು ವರದಿಯಾಗಿದೆ. ವಯಸ್ಸಿನ ಮಿತಿ ನಿಗದಿಪಡಿಸಿದ್ದರೂ 65 ವರ್ಷಕ್ಕಿಂತ ಮೇಲ್ಪಟ್ಟವರು ಯೋಜನೆಯ ಪ್ರಯೋಜನ ಪಡೆಯುತ್ತಿದ್ದಾರೆ’ ಎಂದು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.