ADVERTISEMENT

ಲಡ್ಕಿ ಬಹೀನ್‌ ಯೋಜನೆ | 26 ಲಕ್ಷ ಅನರ್ಹ ಫಲಾನುಭವಿಗಳ ಪತ್ತೆ: ಮಹಾರಾಷ್ಟ್ರ ಸಚಿವೆ

ಪಿಟಿಐ
Published 25 ಆಗಸ್ಟ್ 2025, 15:21 IST
Last Updated 25 ಆಗಸ್ಟ್ 2025, 15:21 IST
ಅದಿತಿ ತಟಕರೆ
ಅದಿತಿ ತಟಕರೆ   

ಮುಂಬೈ: ‘ಮಹಾರಾಷ್ಟ್ರದಲ್ಲಿ ಮಹಿಳೆಯರಿಗಾಗಿ ಜಾರಿಗೊಳಿಸಲಾದ ‘ಲಡ್ಕಿ ಬಹೀನ್‌’ ಯೋಜನೆಯಡಿಯಲ್ಲಿ ರಾಜ್ಯದಾದ್ಯಂತ 26 ಲಕ್ಷ ಅನರ್ಹ ಫಲಾನುಭವಿಗಳು ಇರುವುದನ್ನು ಪ್ರಾಥಮಿಕ ಹಂತದಲ್ಲಿ ಪತ್ತೆ ಮಾಡಲಾಗಿದೆ’ ಎಂದು ಮಹಿಳಾ ಹಾಗೂ ಮಕ್ಕಳ ಕಲ್ಯಾಣ ಸಚಿವೆ ಅದಿತಿ ತಟಕರೆ ತಿಳಿಸಿದ್ದಾರೆ.

‘ಅನರ್ಹ ಫಲಾನುಭವಿಗಳ ಮಾಹಿತಿಯನ್ನು ಈಗಾಗಲೇ ಸಂಗ್ರಹಿಸಿ ಭೌತಿಕ ಪರಿಶೀಲನೆ ನಡೆಸಲು ಜಿಲ್ಲಾಡಳಿತಕ್ಕೆ ಸೂಚನೆ ನೀಡಲಾಗಿದೆ. ಪರಿಶೀಲನೆ ಮುಗಿದ ಬಳಿಕ ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು. ಅರ್ಹ ಫಲಾನುಭವಿಗಳಿಗೆ ಸೌಲಭ್ಯವನ್ನು ಯಾವುದೇ ಅಡೆತಡೆಯಿಲ್ಲದೇ ಮುಂದುವರಿಸಲಾಗುವುದು’ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

‘ಮಾಹಿತಿ ಹಾಗೂ ತಂತ್ರಜ್ಞಾನ ಇಲಾಖೆಯು ಪ್ರಾಥಮಿಕ ಹಂತದ ಮಾಹಿತಿಯನ್ನು ನೀಡಿದ್ದು, ಅದರಂತೆ ಮುಖ್ಯಮಂತ್ರಿ ಲಡ್ಕಿ ಬಹೀನ್‌ ಯೋಜನೆ ಅಡಿಯಲ್ಲಿ 26 ಲಕ್ಷ ಮಂದಿ ಅನರ್ಹರು ಸೇರ್ಪಡೆಯಾಗಿರುವುದು ಕಂಡುಬಂದಿದೆ. ಇವರೆಲ್ಲರೂ ಮೇಲ್ನೋಟಕ್ಕೆ ಯೋಜನೆಯ ಮಾನದಂಡದ ವ್ಯಾಪ್ತಿಗೆ ಒಳಪಡುವುದಿಲ್ಲ’ ಎಂದು ಅವರು ತಿಳಿಸಿದ್ದಾರೆ.

ADVERTISEMENT

‘ಅನರ್ಹ ಫಲಾನುಭವಿಗಳು ರಾಜ್ಯದ ಎಲ್ಲ ಜಿಲ್ಲೆಗಳಲ್ಲಿದ್ದಾರೆ. ಈ ಮಾಹಿತಿಯನ್ನು ಜಿಲ್ಲಾಡಳಿತಕ್ಕೆ ಕಳುಹಿಸಿ, ಭೌತಿಕ ಪರಿಶೀಲನೆ ನಡೆಸಿದ ಬಳಿಕವೇ ನೈಜ ಫಲಾನುಭವಿಗಳ ಮಾಹಿತಿ ದೊರೆಯಲಿದೆ’ ಎಂದು ವಿವರಿಸಿದ್ದಾರೆ.

ವಾರ್ಷಿಕ ₹2.5 ಲಕ್ಷಗಿಂತಲೂ ಕಡಿಮೆ ಆದಾಯ ಹೊಂದಿರುವ 21 ರಿಂದ 65 ವರ್ಷದ ಮಹಿಳೆಯರಿಗೆ ಮಾಸಿಕ ₹1,500 ಒದಗಿಸುವ ‘ಲಡ್ಕಿ ಬಹೀನ್‌’ ಯೋಜನೆಗೆ ಈ ವರ್ಷ ಜುಲೈನಲ್ಲಿ ಚಾಲನೆ ನೀಡಲಾಗಿತ್ತು. ಇದರ ಲಾಭ ಪಡೆಯುವವರು ಸರ್ಕಾರದ ಉಳಿದ ಯೋಜನೆಯ ಲಾಭ ಪಡೆಯುವಂತಿಲ್ಲ. ಅಂದಾಜಿನಂತೆ, ರಾಜ್ಯದಾದ್ಯಂತ 2.5 ಕೋಟಿ ಮಹಿಳೆಯರು ಇದರ ಲಾಭ ಪಡೆದುಕೊಳ್ಳುತ್ತಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.