ADVERTISEMENT

LAHDC–ಕಾರ್ಗಿಲ್ ಫಲಿತಾಂಶ ಕೇಂದ್ರ ಸರ್ಕಾರದ ನಿರ್ಧಾರದ ವಿರುದ್ಧದ ಜನಮತಗಣನೆ: NC

ಪಿಟಿಐ
Published 9 ಅಕ್ಟೋಬರ್ 2023, 14:52 IST
Last Updated 9 ಅಕ್ಟೋಬರ್ 2023, 14:52 IST
<div class="paragraphs"><p>ಲಡಾಕ್‌ನ ಗುಡ್ಡಗಾಡು ಪ್ರದೇಶ ಅಭಿವೃದ್ಧಿ ಸ್ವಾಯತ್ತ ಮಂಡಳಿಯ ಚುನಾವಣಾ ಫಲಿತಾಂಶ ಪ್ರಕಟವಾದ ಬಳಿಕ ಕಾಂಗ್ರೆಸ್‌ ಕಾರ್ಯಕರ್ತರು ಸಂಭ್ರಮಿಸಿದ್ದು ಹೀಗೆ...</p></div>

ಲಡಾಕ್‌ನ ಗುಡ್ಡಗಾಡು ಪ್ರದೇಶ ಅಭಿವೃದ್ಧಿ ಸ್ವಾಯತ್ತ ಮಂಡಳಿಯ ಚುನಾವಣಾ ಫಲಿತಾಂಶ ಪ್ರಕಟವಾದ ಬಳಿಕ ಕಾಂಗ್ರೆಸ್‌ ಕಾರ್ಯಕರ್ತರು ಸಂಭ್ರಮಿಸಿದ್ದು ಹೀಗೆ...

   

–ಪಿಟಿಐ ಚಿತ್ರ

ಕಾರ್ಗಿಲ್‌ (ಲಡಾಕ್‌): ಲಡಾಕ್‌ನ ಗುಡ್ಡಗಾಡು ಪ್ರದೇಶ ಅಭಿವೃದ್ಧಿ ಸ್ವಾಯತ್ತ ಮಂಡಳಿಯ (ಎಲ್‌ಎಎಚ್‌ಡಿಸಿ– ಕಾರ್ಗಿಲ್‌) ಚುನಾವಣಾ ಫಲಿತಾಂಶವು, ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನ ರದ್ದುಪಡಿಸಿದ ನಿರ್ಧಾರದ ವಿರುದ್ಧದ ಜನಮತಗಣನೆ ಎಂದು ನ್ಯಾಷನಲ್‌ ಕಾನ್ಫರೆನ್ಸ್‌ (ಎನ್‌ಸಿ) ಮತ್ತು ಕಾಂಗ್ರೆಸ್‌ ಮೈತ್ರಿಕೂಟ ಸೋಮವಾರ ಬಣ್ಣಿಸಿದೆ.

ADVERTISEMENT

‘ಜಮ್ಮು ಮತ್ತು ಕಾಶ್ಮೀರವನ್ನು ವಿಭಜಿಸುವ ಕೇಂದ್ರ ಸರ್ಕಾರದ ನಿರ್ಧಾರದ ವಿರುದ್ಧದ ಜನಮತಗಣನೆಯೇ ಈ ಫಲಿತಾಂಶ. ಲಡಾಕ್‌ನಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಪುನರ್‌ ಸ್ಥಾಪಿಸಬೇಕು ಎಂಬುದು ನಮ್ಮ ಮೊದಲ ಆಗ್ರಹ. ಲಡಾಕ್‌ಗೆ ಸಂಪೂರ್ಣ ರಾಜ್ಯದ ಸ್ಥಾನಮಾನ ನೀಡಬೇಕೋ ಅಥವಾ ವಿಶೇಷ ಸ್ಥಾನವನ್ನು ಮರು ಸ್ಥಾಪಿಸಬೇಕೋ ಎಂಬುದು ಕೇಂದ್ರಕ್ಕೆ ಬಿಟ್ಟದ್ದು’ ಎಂದು ಕಾರ್ಗಿಲ್‌ನ ಎನ್‌ಸಿ ಪಕ್ಷದ ಜಿಲ್ಲಾಧ್ಯಕ್ಷ ಹನಿಫಾ ಜಾನ್‌ ತಿಳಿಸಿದ್ದಾರೆ.

‘ಲೆಫ್ಟಿನೆಂಟ್‌ ಗವರ್ನರ್‌ ಅವರ ಆಡಳಿತ ಅಡಿಯ ಅಧಿಕಾರಶಾಹಿ ಗುಲಾಮಗಿರಿಯಿಂದ ಹೊರಬರಲು ಹೊರಬರಲು ಕಾರ್ಗಿಲ್‌ನ ಜನ ಬಯಸಿದ್ದಾರೆ. ಕೇಂದ್ರ ಸರ್ಕಾರ ತಪ್ಪು ನಿರ್ಧಾರ ಕೈಗೊಂಡು, ನಮಗೆ ದ್ರೋಹ ಬಗೆದಿದೆ’ ಎಂದು ಟೀಕಿಸಿದ್ದಾರೆ.

ಲಡಾಕ್‌ನ ಗುಡ್ಡಗಾಡು ಪ್ರದೇಶ ಅಭಿವೃದ್ಧಿ ಸ್ವಾಯತ್ತ ಮಂಡಳಿಯ ಚುನಾವಣಾ ಫಲಿತಾಂಶ ಪ್ರಕಟವಾದ ಬಳಿಕ ನ್ಯಾಷನಲ್‌ ಕಾನ್ಫರೆನ್ಸ್‌ ಪಕ್ಷದ ಕಾರ್ಯಕರ್ತರು ಸಿಹಿ ಹಂಚಿದರು.

‘ಎನ್‌ಸಿ– ಕಾಂಗ್ರೆಸ್‌ ಮೈತ್ರಿಕೂಟ 22 ಸ್ಥಾನ ಗೆದ್ದಿದೆ. ನಮ್ಮ ಸಿದ್ಧಾಂತದ ಕುರಿತು ಒಲವಿರುವ ಇಬ್ಬರು ಪಕ್ಷೇತರರು ಜಯ ಗಳಿಸಿದ್ದಾರೆ. ಹಾಗಾಗಿ ನಾವು 24 ಕ್ಷೇತ್ರಗಳಲ್ಲಿ ಗೆದ್ದಂತಾಗಿದೆ. ಬಿಜೆಪಿ ಕೇವಲ ಎರಡು ಸ್ಥಾನಗಳಲ್ಲಿ ಜಯ ದಾಖಲಿಸಿದೆ’ ಎಂದು ಜಾನ್‌ ವಿವರಿಸಿದ್ದಾರೆ.

ಎಲ್‌ಎಎಚ್‌ಡಿಸಿ–ಕಾರ್ಗಿಲ್‌ನ 26 ಸ್ಥಾನಗಳಿಗೆ ಅಕ್ಟೋಬರ್‌ 4ರಂದು ಮತದಾನ ನಡೆದಿತ್ತು. ನ್ಯಾಷನಲ್‌ ಕಾನ್ಫರೆನ್ಸ್‌ 12 ಸ್ಥಾನಗಳಲ್ಲಿ ಗೆಲ್ಲುವ ಮೂಲಕ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದರೆ, ಕಾಂಗ್ರೆಸ್‌ 10 ಸ್ಥಾನಗಳಲ್ಲಿ ವಿಜಯ ಪತಾಕೆ ಹಾರಿಸಿದೆ.

ಒಟ್ಟು 95,388 ಮತದಾರರ ಪೈಕಿ 74,026 ಮಂದಿ ಮತ ಚಲಾಯಿಸುವ ಮೂಲಕ ಶೇ 77.61ರಷ್ಟು ಮತದಾನವಾಗಿತ್ತು. ಲಡಾಕ್‌ನ ಗುಡ್ಡಗಾಡು ಪ್ರದೇಶ ಅಭಿವೃದ್ಧಿ ಸ್ವಾಯತ್ತ ಮಂಡಳಿಯ ಅಧ್ಯಕ್ಷರಾಗಿದ್ದ ನ್ಯಾಷನಲ್‌ ಕಾನ್ಫರೆನ್ಸ್‌ನ ಫಿರೋಜ್ ಅಹ್ಮದ್ ಖಾನ್ ಅವರ ಐದು ವರ್ಷದ ಅಧಿಕಾರಾವಧಿಯು ಈಗಾಗಲೇ ಪೂರ್ಣಗೊಂಡಿದೆ. ಅ. 11ರೊಳಗೆ ಹೊಸ ಮಂಡಳಿ ಅಸ್ತಿತ್ವಕ್ಕೆ ಬರಲಿದೆ.

ಲಡಾಕ್‌ನ ಗುಡ್ಡಗಾಡು ಪ್ರದೇಶ ಅಭಿವೃದ್ಧಿ ಸ್ವಾಯತ್ತ ಮಂಡಳಿಯ ಚುನಾವಣಾ ಫಲಿತಾಂಶ ಪ್ರಕಟವಾದ ಬಳಿಕ ನ್ಯಾಷನಲ್‌ ಕಾನ್ಫರೆನ್ಸ್‌ ಪಕ್ಷದ ಕಾರ್ಯಕರ್ತರು ಸಂಭ್ರಮಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.