ADVERTISEMENT

ಕೇಂದ್ರ ಸಚಿವ ಅಜಯ್‌ ಮಿಶ್ರಾ ವಜಾಕ್ಕೆ ಕಾಂಗ್ರೆಸ್ ನಾಯಕರಿಂದ ‘ಮೌನವ್ರತ’

ಪಿಟಿಐ
Published 11 ಅಕ್ಟೋಬರ್ 2021, 19:31 IST
Last Updated 11 ಅಕ್ಟೋಬರ್ 2021, 19:31 IST
ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಸೋಮವಾರ ಲಖನೌನಲ್ಲಿ ಮೌನವ್ರತ ನಡೆಸಿದರು – ಪಿಟಿಐ ಚಿತ್ರ
ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಸೋಮವಾರ ಲಖನೌನಲ್ಲಿ ಮೌನವ್ರತ ನಡೆಸಿದರು – ಪಿಟಿಐ ಚಿತ್ರ   

ಲಖನೌ: ಆಶಿಶ್‌ ತಂದೆ, ಕೇಂದ್ರ ಗೃಹ ಖಾತೆಯ ರಾಜ್ಯ ಸಚಿವ ಅಜಯ್‌ ಮಿಶ್ರಾ ಅವರನ್ನು ವಜಾ ಮಾಡಬೇಕು ಎಂದು ಆಗ್ರಹಿಸಿ ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರ ನೇತೃತ್ವದಲ್ಲಿ ಕಾಂಗ್ರೆಸ್‌ ಕಾರ್ಯಕರ್ತರು
ಮತ್ತು ಮುಖಂಡರು ಸೋಮವಾರ ಮೌನವ್ರತ ನಡೆಸಿದ್ದಾರೆ.

ಉತ್ತರ ಪ್ರದೇಶ ಕಾಂಗ್ರೆಸ್‌ ಘಟಕದ ಅಧ್ಯಕ್ಷ ಅಜಯ್‌ ಕುಮಾರ್‌ ಲಲ್ಲು, ವಿಧಾನಸಭೆ ಮತ್ತು ವಿಧಾನ ಪರಿಷತ್‌ನ ಕಾಂಗ್ರೆಸ್‌ ಶಾಸಕಾಂಗ ಪಕ್ಷದ ನಾಯಕರು ಹಾಗೂ ಇತರರು ಜಿಪಿಒ ಪಾರ್ಕ್‌ನಲ್ಲಿರುವ ಮಹಾತ್ಮ ಗಾಂಧಿ ಪ್ರತಿಮೆಯ ಎದುರು ಧರಣಿ ನಡೆಸಿದರು.

ಮೌನವ್ರತಕ್ಕೆ ಪ್ರತಿಕ್ರಿಯೆ ನೀಡಿರುವ ಉತ್ತರ ಪ್ರದೇಶದ ಸಚಿವ ಸಿದ್ದಾರ್ಥನಾಥ್‌ ಸಿಂಗ್‌ ಅವರು, ಯಾವುದೇ ಒತ್ತಡಕ್ಕೆ ಮಣಿಯುವುದಿಲ್ಲ. ಕಾನೂನು ಪ್ರಕಾರವೇ ಕ್ರಮ ಕೈಗೊಳ್ಳಲಾಗುವುದು ಎಂದಿದ್ದಾರೆ. ಮೌನವ್ರತ ಅಥವಾ ಪ್ರತಿಭಟನೆ ನಡೆಸುವುದು ಕಾಂಗ್ರೆಸ್‌ ನಾಯಕರ ಪ್ರಜಾಸತ್ತಾತ್ಮಕ ಹಕ್ಕು ಎಂದಿದ್ದಾರೆ.

ADVERTISEMENT

ರಾಜಸ್ಥಾನ ಮತ್ತು ಛತ್ತೀಸಗಡದಲ್ಲಿ ದಲಿತರು ಮತ್ತು ರೈತರ ಮೇಲೆ ನಡೆದ ದೌರ್ಜನ್ಯದ ವಿರುದ್ಧ ಕಾಂಗ್ರೆಸ್ಸಿಗರು ಏಕೆ ಪ್ರತಿಭಟನೆ ನಡೆಸಿಲ್ಲ ಎಂದು ಅವರು ಪ್ರಶ್ನಿಸಿದ್ದಾರೆ.

ಮಾಜಿ ಪ್ರಧಾನಿ ಮನಮೋಹನ್‌ ಸಿಂಗ್‌ ಅವರನ್ನು ಲೇವಡಿ ಮಾಡಿರುವ ಉತ್ತರ ಪ್ರದೇಶ ಸರ್ಕಾರದ ವಕ್ತಾರ, ಈ ದೇಶದಲ್ಲಿ 10 ವರ್ಷ ಮೌನವ್ರತ ಆಚರಿಸಿದ ಪ್ರಧಾನಿ ಇದ್ದರು ಎಂದಿದ್ದಾರೆ.

ದೆಹಲಿ, ಹರಿಯಾಣ, ಪಂಜಾಬ್‌, ಗೋವಾ ಸೇರಿದಂತೆ ದೇಶದ ಎಲ್ಲೆಡೆಯೂ ಕಾಂಗ್ರೆಸ್‌ ಮುಖಂಡರು ಮೌನವ್ರತ ನಡೆಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.