ADVERTISEMENT

ರಾಜಸ್ಥಾನದ ಹನುಮಾನ್‌ಗಢದಲ್ಲಿ ರೈತರ ಮೇಲೆ ಲಾಠಿಚಾರ್ಜ್‌

​ಪ್ರಜಾವಾಣಿ ವಾರ್ತೆ
Published 16 ಫೆಬ್ರುವರಿ 2024, 13:15 IST
Last Updated 16 ಫೆಬ್ರುವರಿ 2024, 13:15 IST
<div class="paragraphs"><p>ಸಾಂದರ್ಭಿಕ ಚಿತ್ರ</p></div>

ಸಾಂದರ್ಭಿಕ ಚಿತ್ರ

   

ಜೈಪುರ: ರಾಜಸ್ಥಾನದ ಹನುಮಾನ್‌ಗಢ ಜಿಲ್ಲೆಯಲ್ಲಿ ಪ್ರತಿಭಟನೆಯಲ್ಲಿ ತೊಡಗಿದ್ದ ರೈತರ ಮೇಲೆ ಪೊಲೀಸರು ಲಾಠಿಚಾರ್ಜ್‌ ನಡೆಸಿದರು. ಪ್ರಧಾನಿ ನರೇಂದ್ರ ಮೋದಿ ಅವರು ವರ್ಚುವಲ್‌ ಆಗಿ ಭಾಷಣ ಮಾಡಬೇಕಿದ್ದ ಕಾರ್ಯಕ್ರಮದ ಸ್ಥಳದಲ್ಲಿ ರೈತರು ಜಮಾಯಿಸಿ, ಬ್ಯಾರಿಕೇಡ್‌ ಮುರಿದಾಗ ಪೊಲೀಸರು ಕ್ರಮಕ್ಕೆ ಮುಂದಾದರು.

ಕಾರ್ಯಕ್ರಮಕ್ಕೆ ಅಡ್ಡಿ ಉಂಟಾಗಬಾರದು ಎಂಬ ಉದ್ದೇಶದಿಂದ ಪೊಲೀಸರು ಲಾಠಿಚಾರ್ಜ್‌ ನಡೆಸಿದರು. ಈ ಸಂದರ್ಭದಲ್ಲಿ ರೈತರೊಬ್ಬರ ತಲೆಗೆ ಪೆಟ್ಟಾಗಿದೆ ಎಂದು ರಾಜಸ್ಥಾನದ ಕಿಸಾನ್‌ ಮಹಾಪಂಚಾಯತ್‌ನ ರಾಷ್ಟ್ರೀಯ ಅಧ್ಯಕ್ಷ ರಾಮಪಾಲ್ ಜಾಟ್ ತಿಳಿಸಿದ್ದಾರೆ.

ADVERTISEMENT

ಶ್ರೀಗಂಗಾನಗರ ಜಿಲ್ಲೆಯಲ್ಲಿಯೂ ರೈತರು ಪ್ರತಿಭಟನೆ ನಡೆಸಿದ್ದಾರೆ. ಪಂಜಾಬ್ ಮತ್ತು ಹರಿಯಾಣ ಜೊತೆ ಗಡಿ ಹಂಚಿಕೊಂಡಿರುವ ಹನುಮಾನ್‌ಗಢ ಹಾಗೂ ಶ್ರೀಗಂಗಾನಗರ ಜಿಲ್ಲೆಗಳಲ್ಲಿ ರೈತರು ಗ್ರಾಮೀಣ ಬಂದ್ ಆಚರಿಸಿದ್ದಾರೆ. 

ರಾಜಸ್ಥಾನದ ಬುಂಡಿ ಜಿಲ್ಲೆಯ ಕರವಾರ್‌ನಲ್ಲಿ 39 ರೈತ ಸಂಘಟನೆಗಳು ಗುರುವಾರದಿಂದ ನಡೆಸುತ್ತಿರುವ ಸಭೆಯು ಶುಕ್ರವಾರ ಕೊನೆಗೊಂಡಿದೆ. ಈ ಪ್ರದೇಶದಲ್ಲಿ 14 ಗ್ರಾಮ ಪಂಚಾಯಿತಿಗಳಿಗೆ ಕರವಾರ್‌ ಗ್ರಾಮವು ಕೇಂದ್ರದಂತೆ ಇದೆ. ಫೆಬ್ರುವರಿ 21ರ ಟ್ರ್ಯಾಕ್ಟರ್ ರ್‍ಯಾಲಿ ಕುರಿತು ಸಭೆಯಲ್ಲಿ ಚರ್ಚಿಸಲಾಗಿದೆ.

‘ನಮಗೆ ಕನಿಷ್ಠ 650 ಟ್ರ್ಯಾಕ್ಟರ್‌ ಮಾಲೀಕರ ಬೆಂಬಲ ಸಿಕ್ಕಿದೆ. ನಾವು ಮೊದಲು ಜೈಪುರದಲ್ಲಿ ಒಟ್ಟಾಗಿ ಸೇರುತ್ತೇವೆ. ನಂತರ ದೆಹಲಿಯತ್ತ ತೆರಳುತ್ತೇವೆ. 500 ಟ್ರ್ಯಾಕ್ಟರ್‌ಗಳನ್ನು ಒಗ್ಗೂಡಿಸುವ ಉದ್ದೇಶ ಇತ್ತು. ಅದಕ್ಕಿಂತ ಹೆಚ್ಚಿನ ಸಂಖ್ಯೆಯಲ್ಲಿ ಟ್ರ್ಯಾಕ್ಟರ್‌ಗಳು ಬರಲಿವೆ’ ಎಂದು ಜಾಟ್ ತಿಳಿಸಿದರು.

ಕನಿಷ್ಠ ಬೆಂಬಲ ಬೆಲೆ ವಿಚಾರವಾಗಿ ಕಾನೂನು ರೂಪಿಸುವ ಅಧಿಕಾರವು ರಾಜ್ಯ ಸರ್ಕಾರಕ್ಕೂ ಇರುವ ಕಾರಣ, ರಾಜಸ್ಥಾನದ ಮುಖ್ಯಮಂತ್ರಿ ಭಜನ್‌ಲಾಲ್ ಶರ್ಮ ಅವರನ್ನೂ ರೈತರ ಜೊತೆ ದೆಹಲಿಗೆ ರ್‍ಯಾಲಿಯಲ್ಲಿ ಬರುವಂತೆ ಕೋರಲಾಗುವುದು ಎಂದು ಅವರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.