ADVERTISEMENT

ನ್ಯಾಯಾಲಯದ ಕಲಾಪಗಳಿಗೆ ಅಡ್ಡಿಪಡಿಸಲು ವಕೀಲರಿಗೆ ಅವಕಾಶವಿಲ್ಲ: ಸುಪ್ರೀಂಕೋರ್ಟ್‌

ಸುಪ್ರೀಂಕೋರ್ಟ್‌ ಅಭಿಪ್ರಾಯ

​ಪ್ರಜಾವಾಣಿ ವಾರ್ತೆ
Published 12 ಅಕ್ಟೋಬರ್ 2021, 12:52 IST
Last Updated 12 ಅಕ್ಟೋಬರ್ 2021, 12:52 IST
Supreme Court
Supreme Court   

ನವದೆಹಲಿ (ಪಿಟಿಐ): ‘ವಕೀಲರ ಸಂಘಗಳು ಕರೆಕೊಡುವ ಮುಷ್ಕರ ಅಥವಾ ಬಹಿಷ್ಕಾರದಿಂದಾಗಿ ವಕೀಲರು ನ್ಯಾಯಾಲಯಕ್ಕೆ ಹಾಜರಾಗಲು ನಿರಾಕರಿಸುವುದು ವೃತ್ತಿಪರತೆ ಅಲ್ಲ ಮತ್ತು ಇದೊಂದು ಅಸಹಜ ನಡವಳಿಕೆ’ ಎಂದು ಸುಪ್ರೀಂ ಕೋರ್ಟ್ ಹೇಳಿದೆ.

ವಕೀಲರು ನ್ಯಾಯಾಲಯದ ಅಧಿಕಾರಿಯಾಗಿದ್ದಾರೆ. ಸಮಾಜದಲ್ಲಿ ವಿಶೇಷ ಸ್ಥಾನಮಾನವನ್ನೂ ಹೊಂದಿದ್ದಾರೆ. ವಕೀಲರಿಗೆ ನ್ಯಾಯಾಲಯದ ವಿಚಾರಣೆಗೆ ಅಡ್ಡಿಪಡಿಸಲು ಮತ್ತು ತಮ್ಮ ಕಕ್ಷಿದಾರರ ಹಿತಾಸಕ್ತಿಯನ್ನು ಬಲಿಕೊಡಲು ಅವಕಾಶವಿಲ್ಲ ಎಂದು ಸುಪ್ರೀಂ ಕೋರ್ಟ್‌ ಹೇಳಿದೆ.

ರಾಜಸ್ಥಾನ ಹೈಕೋರ್ಟ್‌ನಲ್ಲಿ ವಕೀಲರು ಇದೇ ವರ್ಷದ ಸೆಪ್ಟೆಂಬರ್ 27 ರಂದು ಮುಷ್ಕರ ಹೂಡಿದ ಪ್ರಕರಣ ಆಲಿಸುವಾಗ ನ್ಯಾಯಮೂರ್ತಿಗಳಾದ ಎಂ.ಆರ್. ಶಾ ಮತ್ತು ಎ.ಎಸ್. ಬೋಪಣ್ಣ ಅವರಿರುವ ಪೀಠ ಈ ಅಭಿಪ್ರಾಯ ವ್ಯಕ್ತಪಡಿಸಿದೆ.

ADVERTISEMENT

ಜೈಪುರದಲ್ಲಿ ರಾಜಸ್ಥಾನದ ಹೈಕೋರ್ಟ್‌ನ ವಕೀಲರ ಸಂಘಕ್ಕೆ ಬಿಸಿಐ ನೋಟಿಸ್ ನೀಡಿದೆ ಎಂದು ಸುಪ್ರೀಂ ಕೋರ್ಟ್ ಬಾರ್ ಕೌನ್ಸಿಲ್ ಆಫ್ ಇಂಡಿಯಾ ಅಧ್ಯಕ್ಷ ಮನನ್ ಕುಮಾರ್ ಮಿಶ್ರಾ ಸಲ್ಲಿಸಿರುವ ಅರ್ಜಿಯನ್ನು ಪೀಠ ಆಲಿಸಿತು.

ಕೇವಲ ಒಂದು ನ್ಯಾಯಾಲಯವನ್ನು ಬಹಿಷ್ಕರಿಸುವ ಕರೆ ಕೊಡಲಾಗಿತ್ತು ಎಂದು ಹಿರಿಯ ವಕೀಲರು ಪೀಠದ ಗಮನಕ್ಕೆ ತಂದರು.

ಆಗ ನ್ಯಾಯಪೀಠ, ‘ಅದನ್ನೂ ಸಹಿಸಲು ಸಾಧ್ಯವಿಲ್ಲ. ಒಂದು ನ್ಯಾಯಾಲಯವನ್ನು ಬಹಿಷ್ಕರಿಸುವುದೂ ನ್ಯಾಯಾಂಗದ ಸ್ವಾತಂತ್ರ್ಯಕ್ಕೆ ಅಡ್ಡಿಪಡಿಸಿದಂತೆ. ನ್ಯಾಯಾಲಯವನ್ನು ಬಹಿಷ್ಕರಿಸಿದರೆ ನಿರ್ದಿಷ್ಟ ನ್ಯಾಯಾಧೀಶರ ಮೇಲೆ ಒತ್ತಡ ಹೆಚ್ಚುತ್ತದೆ, ಇದು ನ್ಯಾಯಾಂಗದ ನಿರುತ್ಸಾಹಕ್ಕೆ ಕಾರಣವಾಗಬಹುದು’ ಎಂದು ಅಭಿಪ್ರಾಯಪಟ್ಟಿತು.

ಸುಪ್ರೀಂ ಕೋರ್ಟ್‌ ನೀಡಿರುವ ಹಿಂದಿನ ತೀರ್ಪುಗಳನ್ನು ಉಲ್ಲೇಖಿಸಿದ ನ್ಯಾಯಪೀಠ, ವಕೀಲರ ಸಂಘ ಮತ್ತು ವಕೀಲರು ಮುಷ್ಕರ ನಡೆಸುವುದು ನ್ಯಾಯಾಂಗ ನಿಂದನೆಯಾಗುತ್ತದೆ. ರಾಜಸ್ಥಾನದ ಹೈಕೋರ್ಟ್‌ನ ವಕೀಲರ ಸಂಘದ ಅಧ್ಯಕ್ಷರು, ಕಾರ್ಯದರ್ಶಿಗಳಿಗೆ, ಸಂಘದ ಪದಾಧಿಕಾರಿಗಳಿಗೆ ನ್ಯಾಯಾಂಗ ನಿಂದನೆಯ ನೋಟಿಸ್‌ ಜಾರಿ ಮಾಡುವಂತೆ ರಾಜಸ್ಥಾನದ ಹೈಕೋರ್ಟ್‌ನ ರಿಜಿಸ್ಟ್ರಾರ್ ಜನರಲ್‌ಗೆ ನಿರ್ದೇಶಿಸಿತು. ಮುಂದಿನ ವಿಚಾರಣೆಯನ್ನು ಅ.25ಕ್ಕೆ ನಿಗದಿಪಡಿಸಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.