ADVERTISEMENT

ರೈತರ ತಡೆಯಲು ಬಲಪ್ರಯೋಗ: ಬಿಜೆಪಿ ವಿರುದ್ಧ ಹರಿಹಾಯ್ದ ಎಡಪಕ್ಷಗಳು

ಪಿಟಿಐ
Published 26 ನವೆಂಬರ್ 2020, 15:19 IST
Last Updated 26 ನವೆಂಬರ್ 2020, 15:19 IST
ದೆಹಲಿಯತ್ತ ಹೊರಟಿದ್ದ ರೈತರ ಮೇಲೆ ಪಂಜಾಬ್‌ ಮತ್ತು ಹರಿಯಾಣ ಗಡಿಯಲ್ಲಿ ಅಶ್ರುವಾಯು ಪ್ರಯೋಗಿಸಿರುವುದು (ರಾಯಿಟರ್ಸ್‌f)
ದೆಹಲಿಯತ್ತ ಹೊರಟಿದ್ದ ರೈತರ ಮೇಲೆ ಪಂಜಾಬ್‌ ಮತ್ತು ಹರಿಯಾಣ ಗಡಿಯಲ್ಲಿ ಅಶ್ರುವಾಯು ಪ್ರಯೋಗಿಸಿರುವುದು (ರಾಯಿಟರ್ಸ್‌f)   

ನವದೆಹಲಿ: ಕೇಂದ್ರದ ಕೃಷಿ ಕಾನೂನುಗಳ ವಿರುದ್ಧ ಪ್ರತಿಭಟಿಸಲು ರಾಷ್ಟ್ರ ರಾಜಧಾನಿಯತ್ತ ತೆರಳುತ್ತಿದ್ದ ರೈತರ ಮೇಲೆ ಜಲಫಿರಂಗಿ, ಅಶ್ರುವಾಯು ಬಳಸಿದ ಬಿಜೆಪಿ ನೇತೃತ್ವದ ಹರಿಯಾಣ ಸರ್ಕಾರಕ್ಕೆ ಎಡ ಪಕ್ಷಗಳು ಗುರುವಾರ ಛಾಟಿ ಬೀಸಿವೆ. ಇದು ಬಿಜೆಪಿಯ 'ರೈತ ವಿರೋಧಿ ಮುಖ'ವನ್ನು ಬಹಿರಂಗಪಡಿಸಿದೆ ಎಂದು ಆರೋಪಿಸಿವೆ.

ಕೇಂದ್ರದ ಕೃಷಿ ಕಾನೂನು ವಿರೋಧಿಸಿ ಪ್ರತಿಭಟಿಸಲು 'ದೆಹಲಿ ಚಲೊ' ಕೈಗೊಂಡಿದ್ದ ಪಂಜಾಬ್‌ ರೈತರು, ಹರಿಯಾಣ ಮತ್ತು ದೆಹಲಿ ಗಡಿಯಲ್ಲಿ ಪೊಲೀಸರ ಜಲಫಿರಂಗಿಗಳನ್ನು, ಅಶ್ರುವಾಯುವನ್ನು ಎದುರಿಸಬೇಕಾಯಿತು.

'ಇದು ಬಿಜೆಪಿ ಸರ್ಕಾರ ರೈತರ ಮೇಲೆ ನಡೆಸಿದ ದಾಳಿಯಾಗಿದೆ. ಸಿಪಿಐ ಯಾವಾಗಲೂ ರೈತರಿಗೆ ಬೆಂಬಲವಾಗಿ ನಿಂತಿದೆ ಮತ್ತು ಅವರ ಮೇಲಿನ ದೌರ್ಜನ್ಯ ಅತ್ಯಂತ ಖಂಡನೀಯ. ಇದು ಬಿಜೆಪಿಯ ನಿಜವಾದ ರೈತ ವಿರೋಧಿ ಮುಖವನ್ನು ತೋರಿಸುತ್ತದೆ' ಎಂದು ಸಿಪಿಐ ಪ್ರಧಾನ ಕಾರ್ಯದರ್ಶಿ ಡಿ. ರಾಜಾ ಹೇಳಿದ್ದಾರೆ.

ADVERTISEMENT

ಸಿಪಿಐಎಂ ಪ್ರಧಾನ ಕಾರ್ಯದರ್ಶಿ ಸೀತಾರಾಮ್ ಯೆಚೂರಿ ಪಂಜಾಬ್‌ ರೈತರು ಸೇರಿದಂತೆ ದೇಶದಾದ್ಯಂತ ನಡೆದ ಪ್ರತಿಭಟನೆಗಳ ಚಿತ್ರಗಳನ್ನು ಟ್ವಿಟರ್‌ನಲ್ಲಿ ಶೇರ್‌ ಮಾಡಿದ್ದಾರೆ. ಇದು 'ನಿಜವಾದ ಭಾರತ' ಎಂದು ಹೇಳಿದ್ದಾರೆ.

'ಇದು ನಿಜವಾದ ಭಾರತ ಪ್ರಧಾನಿ (ನರೇಂದ್ರ) ಮೋದಿ ಅವರೇ. ನೀವು ನಮ್ಮ ಮಾತನ್ನು ಕೇಳುವಂತೆ ಮಾಡುತ್ತೇವೆ. ನಿಮ್ಮ ರಾಷ್ಟ್ರ ವಿರೋಧಿ, ಜನ ವಿರೋಧಿ ನೀತಿಗಳನ್ನು ಹಿಂತೆಗೆದುಕೊಳ್ಳಿ' ಎಂದು ಅವರು ಟ್ವೀಟ್‌ನಲ್ಲಿ ತಿಳಿಸಿದ್ದಾರೆ.

ದೆಹಲಿಗೆ ಹೋಗುವ ದಾರಿಯಲ್ಲಿ ರೈತರು, ರಾಜ್ಯ ಪ್ರವೇಶಿಸುವುದನ್ನು ತಡೆಯಲು ಹರಿಯಾಣ ಸರ್ಕಾರವು ಪಂಜಾಬ್‌ನ ಗಡಿಯನ್ನು ಸಂಪೂರ್ಣವಾಗಿ ಮುಚ್ಚಿತ್ತು. ಹಲವು ಸ್ಥಳಗಳಲ್ಲಿ ಬಹು ಹಂತದ ಬ್ಯಾರಿಕೇಡ್‌ ವ್ಯವಸ್ಥೆ ಮಾಡಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.