ನ್ಯಾ. ಬಿ.ಆರ್. ಗವಾಯಿ ಮತ್ತು ನ್ಯಾ. ಸಂಜೀವ್ ಖನ್ನಾ
ಪಿಟಿಐ ಚಿತ್ರ
ನವದೆಹಲಿ: ‘ಕಾನೂನು ವೃತ್ತಿಯಲ್ಲಿ ಸತ್ಯದ ಕೊರತೆ ಇದ್ದು, ಸಾರ್ವಜನಿಕರ ನಂಬಿಕೆ ಗಳಿಸುವ ನಿಟ್ಟಿನಲ್ಲಿ ವಕೀಲರ ಸಂಘಗಳು ಹೆಚ್ಚು ಒತ್ತು ನೀಡಬೇಕು’ ಎಂದು ಸುಪ್ರೀಂ ಕೋರ್ಟ್‌ನ ನಿರ್ಗಮಿತ ಮುಖ್ಯ ನ್ಯಾಯಮೂರ್ತಿ ಸಂಜೀವ್ ಖನ್ನಾ ಸಲಹೆ ನೀಡಿದ್ದಾರೆ.
ಮುಖ್ಯ ನ್ಯಾಯಮೂರ್ತಿ ಪೀಠದಲ್ಲಿ ತಮ್ಮ ಕೊನೆಯ ಭಾಷಣ ಮಾಡಿದ ಅವರು, ‘ಮಹಾತ್ಮಾ ಗಾಂಧಿ ಅವರು ಸತ್ಯವೇ ದೇವರು ಎಂದಿದ್ದರು ಮತ್ತು ಅದರಂತೆಯೇ ಬದುಕಿದರು. ಆದರೆ ಸತ್ಯವನ್ನು ಮರೆಮಾಚುವುದು ಮತ್ತು ಉದ್ದೇಶಪೂರ್ವಕವಾಗಿ ಸುಳ್ಳು ಹೇಳುವುದನ್ನು ಇಂದು ಕಾಣುತ್ತಿದ್ದೇವೆ’ ಎಂದರು.
‘ಸಾಕ್ಷಿಗಳು ಪ್ರಬಲವಾಗಿಲ್ಲದಿದ್ದರೆ ಪ್ರಕರಣ ಯಶಸ್ಸು ಕಾಣುವುದಿಲ್ಲ ಎಂಬುದು ನನ್ನ ನಂಬಿಕೆ. ಆದರೆ ಅದನ್ನೇ ತಪ್ಪಾಗಿ ಪ್ರಸ್ತುತಪಡಿಸುವುದರಿಂದ ಏನೂ ಕೆಲಸವಾಗದು. ಇದು ನ್ಯಾಯಾಲಯದ ಕೆಲಸವನ್ನು ಇನ್ನಷ್ಟು ಜಟಿಲಗೊಳಿಸಲಿದೆ. ಅದರಂತೆಯೇ ನ್ಯಾಯಮೂರ್ತಿಗಳ ಕರ್ತವ್ಯವು ನ್ಯಾಯಾಲಯದ ಆವರಣದಲ್ಲಿ ಪ್ರಾಬಲ್ಯ ಮೆರೆಯುವುದೂ ಅಲ್ಲ ಮತ್ತು ಶರಣಾಗುವುದೂ ಅಲ್ಲ’ ಎಂದು ಅವರು ಅಭಿಪ್ರಾಯಪಟ್ಟರು.
‘ನಿವೃತ್ತಿಯ ನಂತರ ಯಾವುದೇ ಹೊಸ ಹುದ್ದೆಗಳನ್ನು ಒಪ್ಪಿಕೊಳ್ಳುವುದಿಲ್ಲ. ಆದರೆ ವಕೀಲಿ ವೃತ್ತಿಯಲ್ಲಿ ಮಧ್ಯಸ್ಥಿಕೆದಾರರಾಗಿ ಮುಂದುವರಿಯುವ ಇಂಗಿತವಿದೆ’ ಎಂದಿದ್ದಾರೆ.
ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಯಾಗಿ ನೇಮಕಗೊಂಡಿರುವ ನ್ಯಾ. ಬಿ.ಆರ್. ಗವಾಯಿ ಅವರು ಮಾತನಾಡಿ, ‘ನ್ಯಾ. ಖನ್ನಾ ಅವರ ಅವಧಿಯು ಎಲ್ಲರ ಗಮನ ಸೆಳೆಯುವ ಉದ್ದೇಶದ್ದಾಗಿರಲಿಲ್ಲ. ಬದಲಿಗೆ ನ್ಯಾಯಾಂಗ ವ್ಯವಸ್ಥೆಯಲ್ಲಿ ಬದಲಾವಣೆ ತರುವ ಪ್ರಯತ್ನವಾಗಿತ್ತು. ಅವರ ಪ್ರಯತ್ನದಿಂದಾಗಿ ವ್ಯವಸ್ಥೆಯು ಬದಲಾಗುವುದಷ್ಟೇ ಅಲ್ಲದೆ, ವಿಕಸನಗೊಳ್ಳುತ್ತಾ ಸಾಗುತ್ತಿದೆ’ ಎಂದರು.
2019ರ ಜ. 18ರಂದು ನ್ಯಾ. ಸಂಜೀವ್ ಖನ್ನಾ ಅವರು ಸುಪ್ರೀಂ ಕೋರ್ಟ್‌ನ ನ್ಯಾಯಮೂರ್ತಿಯಾಗಿ ಬಡ್ತಿ ಪಡೆದರು. 2024ರ ನ. 11ರಂದು ಅವರು ಮುಖ್ಯ ನ್ಯಾಯಮೂರ್ತಿಯಾಗಿ ನೇಮಕಗೊಂಡರು. ವಕೀಲರಾಗಿ ಮತ್ತು ನ್ಯಾಯಮೂರ್ತಿಯಾಗಿ ಒಟ್ಟು 42 ವರ್ಷಗಳ ವೃತ್ತಿ ಬದುಕು ಕಂಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.