ADVERTISEMENT

ವಿಡಿಯೊ ನೋಡಿ: ಪೊಲೀಸರೊಂದಿಗೆ ಕಾಳಗ ನಡೆಸಿದ ಚಿರತೆ!

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 9 ಮೇ 2022, 5:53 IST
Last Updated 9 ಮೇ 2022, 5:53 IST
ಚಿರತೆ ಪೊಲೀಸರ ಮೇಲೆ ದಾಳಿ ಮಾಡಿದ ಸಂದರ್ಭ, ಫೋಟೊ ಕೃಪೆ– ಪಾಣಿಪತ್ ಜಿಲ್ಲಾ ಪೊಲೀಸ್
ಚಿರತೆ ಪೊಲೀಸರ ಮೇಲೆ ದಾಳಿ ಮಾಡಿದ ಸಂದರ್ಭ, ಫೋಟೊ ಕೃಪೆ– ಪಾಣಿಪತ್ ಜಿಲ್ಲಾ ಪೊಲೀಸ್   

ಪಾಣಿಪತ್: ಇತ್ತೀಚೆಗಂತೂ ಚಿರತೆಗಳು ಗ್ರಾಮಗಳ ಬಳಿ, ಜನರ ಮಧ್ಯೆ ಕಾಣಿಸಿಕೊಳ್ಳುತ್ತಿರುವ ಘಟನೆ ಸಾಕಷ್ಟು ವರದಿಯಾಗುತ್ತಿವೆ. ಅವುಗಳು ಕೆಲ ಸಲ ಮನುಷ್ಯರ ಮೇಲೆ ಆಕ್ರಮಣ ಮಾಡಿರುವುದನ್ನು ನೋಡುತ್ತಿದ್ದೇವೆ.

ಇದೇ ರೀತಿ ಹರಿಯಾಣದಲ್ಲಿ ಚಿರತೆ ಹಾಗೂ ಪೊಲೀಸರ ನಡುವೆ ದೊಡ್ಡ ಕಾಳಗವೇ ನಡೆದಿರುವುದು ಬೆಳಕಿಗೆ ಬಂದಿದೆ.

ಕಳೆದ ಶನಿವಾರ ರಾತ್ರಿ ಹರಿಯಾಣದ ಪಾಣಿಪತ್ ಜಿಲ್ಲೆಯ ಕಾಡಂಚಿನ ಗ್ರಾಮ ಒಂದರಲ್ಲಿ ಕಾಣಿಸಿಕೊಂಡಿದ್ದ ದೊಡ್ಡ ಚಿರತೆಯನ್ನು ಹಿಡಿಯಲು ಅರಣ್ಯ ಇಲಾಖೆ ಹಾಗೂ ಸ್ಥಳೀಯ ಪೊಲೀಸರು ಹೊಂಚು ಹಾಕಿದ್ದರು.

ADVERTISEMENT

ಹಾಳು ಕಟ್ಟಡವೊಂದರಲ್ಲಿ ಅವಿತು ಕುಳಿತಿದ್ದ ಚಿರತೆ ಪೊಲೀಸರನ್ನು ಕಂಡು ಓಡಿ ಹೋಗಲು ಯತ್ನಿಸಿದೆ. ಈ ವೇಳೆ ಆತಂಕಗೊಂಡ ಚಿರತೆ ಸ್ಥಳದಲ್ಲಿ ಗುಂಪುಗೂಡಿದ್ದ ಪೊಲೀಸರ ಮೇಲೆ ಎರಗಿದೆ. ಅಕ್ಷರಶಃ ಚಿರತೆ ಹಾಗೂ ಪೊಲೀಸರ ನಡುವೆ ಕಾಳಗ ನಡೆದು ಹೋಗಿದೆ.

ಘಟನೆ ಬಗ್ಗೆ ವಿಡಿಯೊ ಹಂಚಿಕೊಂಡಿರುವ ಪಾಣಿಪತ್ ಎಸ್‌ಪಿ ಶಶಾಂಕ್ ಕುಮಾರ್ ಸಾವನ್ ಅವರು, ‘ಬಲಿಷ್ಠ ಚಿರತೆಯನ್ನು ಹಿಡಿಯಲು ಅರಣ್ಯ ಇಲಾಖೆ ಸಿಬ್ಬಂದಿ ಹಾಗೂ ನಮ್ಮ ಪೊಲೀಸರು ತೋರಿಸದ ಸಾಹಸ ಇಲ್ಲಿದೆ ನೋಡಿ. ಅದೃಷ್ಟವಶಾತ್ ಚಿರತೆ ಹಾಗೂ ಸಿಬ್ಬಂದಿ ಸುರಕ್ಷಿತವಾಗಿದ್ದಾರೆ’ ಎಂದಿದ್ದಾರೆ.

ಘಟನೆಯಲ್ಲಿ ಹೆಡ್‌ ಕಾನ್ಸ್‌ಟೇಬಲ್ ಒಬ್ಬರು ಹಾಗೂ ಇಬ್ಬರು ಅರಣ್ಯ ಇಲಾಖೆ ಸಿಬ್ಬಂದಿ ಗಾಯಗೊಂಡಿದ್ದಾರೆ ಎಂದು ಅವರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.