ಫಾರೂಕ್ ಅಬ್ದುಲ್ಲಾ
– ಪಿಟಿಐ ಚಿತ್ರ
ನವದೆಹಲಿ: ‘ಜಮ್ಮು ಮತ್ತು ಕಾಶ್ಮೀರ ನರಕಕ್ಕೆ ಹೋಗಲಿ’
ಜಮ್ಮು ಮತ್ತು ಕಾಶ್ಮೀರಕ್ಕೆ ಸಂವಿಧಾನದ 370ನೇ ವಿಧಿಯಡಿ ಇದ್ದ ವಿಶೇಷ ಸ್ಥಾನಮಾನ ಹಿಂಪಡೆದ ಕೇಂದ್ರ ಸರ್ಕಾರದ ನಿರ್ಧಾರವನ್ನು ಎತ್ತಿ ಹಿಡಿದ ಸುಪ್ರಿಂ ಕೋರ್ಟ್‌ನ ತೀರ್ಪಿನ ಕುರಿತು ನ್ಯಾಷನಲ್ ಕಾನ್ಫರೆನ್ಸ್ ಮುಖ್ಯಸ್ಥ ಫಾರೂಕ್ ಅಬ್ದುಲ್ಲಾ ಅವರು ಎಎನ್‌ಐ ಸುದ್ದಿ ಸಂಸ್ಥೆಗೆ ಪ್ರತಿಕ್ರಿಯಿಸಿದ ಪರಿ ಇದು.
‘ಜಮ್ಮು ಕಾಶ್ಮೀರ ನರಕಕ್ಕೆ ಹೋಗಲಿ. ಅವರು (ಕೇಂದ್ರ ಸರ್ಕಾರ) ಜನರಿಗೆ ಮೋಸ ಮಾಡಿದರು. ಅವರು ಜನರ ಹೃದಯ ಗೆಲ್ಲುವುದಾಗಿ ಹೇಳಿದ್ದಾರೆ. ಆದರೆ ಜನರನ್ನು ದೂರ ಮಾಡುವ ಈ ಥರದ ಕೆಲಸ ಮಾಡಿದರೆ ಅವರ ಮನ ಗೆಲ್ಲುವುದಾದರೂ ಹೇಗೆ? ಎಂದು ಅವರು ಪ್ರಶ್ನಿಸಿದ್ದಾರೆ.
ಬಳಿಕ ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಂಡ ಅವರು, ‘ಹೌದು, ಅವರು ಜಮ್ಮು ಮತ್ತು ಕಾಶ್ಮೀರವನ್ನು ನರಕಕ್ಕೆ ತಳ್ಳುತ್ತಿದ್ದಾರೆ. ‘ಸ್ವರ್ಗ’ಕ್ಕಾಗಿ ಏನೂ ಮಾಡಿಲ್ಲ. ಎಲ್ಲಾ ಸ್ಥಳಗಳಲ್ಲಿ ಚುನಾವಣೆ ನಡೆಯುತ್ತಿದೆ. ಆದರೆ ಜಮ್ಮು ಕಾಶ್ಮೀರದಲ್ಲಿ ನಡೆಯದಿರಲು ಕಾರಣ ಏನು‘ ಎಂದು ಹೇಳಿದ್ದಾರೆ.
‘ಭಯೋತ್ಪಾದನೆಯನ್ನು ಬೇರು ಸಮೇತ ಕಿತ್ತು ಹಾಕಿದ್ದೇವೆ ಎಂದು ನೀವು ಹೇಳುತ್ತೀರಿ. ಆದರೆ ಹಾಗೆ ಇದೆಯೇ? ನೀವು ಜನರ ಹೃದಯ ಗೆಲ್ಲುತ್ತಿಲ್ಲ. ನೀವು ನಮ್ಮನ್ನು ನಂಬುವುದಿಲ್ಲ. ನಿಮ್ಮನ್ನು ನಾವು ನಂಬುವುದಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿಯವರಿಗೇ ನಾನು ಹೇಳಿದ್ದೇನೆ’ ಎಂದಿದ್ದಾರೆ.
‘ನಾವು ಈ ದೇಶದೊಂದಿಗೆ ಇದ್ದೇವೆ. ನಮ್ಮ ಕೊನೆಯುಸಿರು ಇರುವವರೆಗೂ ಈ ದೇಶದೊಂದಿಗೆ ಇರುತ್ತೇವೆ. ನಾವು ಬೇರೆ ದೇಶದ ಪರ ನಿಲ್ಲುವುದಿಲ್ಲ. ನಮ್ಮನ್ನೂ ಗೌರವಿಸಿ. ನಮ್ಮ ಹೃದಯವನ್ನೂ ಗೆಲ್ಲಿ’ ಎಂದು ಅಬ್ದುಲ್ಲಾ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.