ADVERTISEMENT

ಜಮ್ಮು ಕಾಶ್ಮೀರವನ್ನು ಸ್ವರ್ಗವನ್ನಾಗಿಸಲು ಶ್ರಮಿಸೋಣ: ರಾಷ್ಟ್ರಪತಿ ಕೋವಿಂದ್

ಏಜೆನ್ಸೀಸ್
Published 20 ಸೆಪ್ಟೆಂಬರ್ 2020, 10:37 IST
Last Updated 20 ಸೆಪ್ಟೆಂಬರ್ 2020, 10:37 IST
ರಾಷ್ಟ್ರಪತಿ ರಾಮನಾಥ್‌ ಕೋವಿಂದ್
ರಾಷ್ಟ್ರಪತಿ ರಾಮನಾಥ್‌ ಕೋವಿಂದ್   

ನವದೆಹಲಿ: ಜಮ್ಮು ಮತ್ತು ಕಾಶ್ಮೀರವನ್ನು ಜ್ಞಾನ, ಉದ್ಯಮ, ನಾವೀನ್ಯತೆ ಮತ್ತು ಕೌಶಲದ ಕೇಂದ್ರವಾಗಿ ಕಾಣುವ ಕನಸು ನನ್ನದು ಎಂದು ರಾಷ್ಟ್ರಪತಿ ರಾಮನಾಥ್‌ ಕೋವಿಂದ್ ಅವರು ಹೇಳಿದ್ದಾರೆ.ರಾಷ್ಟ್ರೀಯ ಶಿಕ್ಷಣ ನೀತಿಗೆ ಸಂಬಂಧಿಸಿದಂತೆ ಶ್ರೀನಗರದಲ್ಲಿ ನಡೆದ ಕಾರ್ಯಕ್ರಮವನ್ನುದ್ದೇಶಿಸಿ ವಿಡಿಯೊ ಕಾನ್ಫರೆನ್ಸ್‌ನಲ್ಲಿ ಅವರು ಮಾತನಾಡಿದರು.

ಎನ್‌ಇಪಿಯನ್ನು ಜಾರಿಗೊಳಿಸುವ ಮೂಲಕಜಮ್ಮು ಮತ್ತು ಕಾಶ್ಮೀರವನ್ನು ಜ್ಞಾನ, ಉದ್ಯಮ, ನಾವೀನ್ಯತೆ ಮತ್ತು ಕಲಿಕೆಯ ಸ್ವರ್ಗವನ್ನಾಗಿಸುವ ದೃಢ ನಿಶ್ಚಯಗಳನ್ನು ಮಾಡಬೇಕಾಗಿದೆ. ಈ ಕ್ರಮಗಳು ಮಧ್ಯಕಾಲೀನ ಯುಗದಲ್ಲಿ ಉಲ್ಲೇಖಿಸಲಾಗಿರುವಂತೆ ಜಮ್ಮ ಕಾಶ್ಮೀರವನ್ನು ಮತ್ತೊಮ್ಮೆ ಭೂಮಿ ಮೇಲಿನ ಸ್ವರ್ಗ, ಭಾರತ ಮಾತೆಯ ಕಿರೀಟದ ಮೇಲಿನ ಪ್ರಕಾಶಮಾನವಾದ ಆಭರಣವನ್ನಾಗಿ ಮಾಡುತ್ತವೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಇಲ್ಲಿನ ಶಿಕ್ಷಣ ಕ್ಷೇತ್ರದ ಶ್ರೀಮಂತ ಪರಂಪರೆಯ ಬಗ್ಗೆ ಮಾತನಾಡಿದ ಅವರು, ಇದು ಅನಾದಿ ಕಾಲದಿಂದಲೂಸಾಹಿತ್ಯ ಮತ್ತು ಕಲಿಕೆಯ ಕೇಂದ್ರವಾಗಿದೆ ಎಂದು ತಿಳಿಸಿದ್ದಾರೆ. ಕಾಶ್ಮೀರದ ಜನಪ್ರಿಯ ಕವಿ ಕಲ್ಹಣ ಬರೆದ ರಾಜತರಂಗಿಣಿ ಮತ್ತು ಬೌದ್ಧಧರ್ಮದ ಮಹಾಯಾನ ಬೊಧನೆಗಳನ್ನು ಉದಾರಣೆಯನ್ನಾಗಿ ಉಲ್ಲೇಖಿಸಿದ ಅವರು, ಇವುಗಳನ್ನು ಪರಿಗಣಿಸದಿದ್ದರೆ ಭಾರತದ ಸಾಂಸ್ಕೃತಿಕ ಸಂಪ್ರದಾಯಗಳ ಇತಿಹಾಸವೇ ಅಪೂರ್ಣವಾಗಿ ಉಳಿದುಬಿಡುತ್ತದೆ ಎಂದು ಹೇಳಿದ್ದಾರೆ.

ADVERTISEMENT

ಹೊಸ ಶಿಕ್ಷಣ ನೀತಿಯ (ಎನ್‌ಇಪಿ) ಪ್ರಾಮುಖ್ಯತೆಯನ್ನು ಪುನರುಚ್ಚರಿಸಿದ ಕೋವಿಂದ್, ಭಾರತವು ಅಪಾರ ಜನಸಂಖ್ಯೆಯನ್ನುಹೊಂದಿದೆ. ಆದರೆ, ಹೆಚ್ಚಿನ ಸಂಖ್ಯೆಯಲ್ಲಿರುವ ಯುವಕರು ಕೌಶಲ್ಯ, ವೃತ್ತಿಪರವಾಗಿ ಸಮರ್ಥರಾಗಿದ್ದರೆ ಹಾಗೂ ಎಲ್ಲಕ್ಕಿಂತ ಹೆಚ್ಚಾಗಿ ನಿಜವಾದ ಶಿಕ್ಷಣ ಪಡೆದರೆ ಮಾತ್ರ ಅದನ್ನು ಸಕಾರಾತ್ಮಕವಾಗಿ ಬಳಸಿಕೊಳ್ಳಬಹುದಾಗಿದೆ ಎಂದಿದ್ದಾರೆ.

ಮೌಲ್ಯ ಆಧಾರಿತ ಶಿಕ್ಷಣಕ್ಕೆ ಒತ್ತು ನೀಡಲಾಗುವುದು ಎಂದ ಅವರು, ನಮ್ಮ ಸಂಪ್ರದಾಯ ಮತ್ತು ಶ್ರೀಮಂತ ಸಾಂಸ್ಕೃತಿಕ ಪರಂಪರೆಯನ್ನು ಅರ್ಥಮಾಡಿಕೊಳ್ಳುವುದು ಬಹಳ ಮುಖ್ಯ. ಅದು ನಮ್ಮ ಮಾತೃಭಾಷೆಯಿಂದಷ್ಟೇಸಾಧ್ಯವಾಗಲಿದೆ. ದೇಶದ ಸಾಂಸ್ಕೃತಿಕ ನೀತಿಗೆ ಬದ್ಧವಾಗಿರುವ ಮಾತೃಭಾಷೆಯನ್ನು ಹೊಸ ಶಿಕ್ಷಣ ನೀತಿಯಲ್ಲಿ ಪ್ರೋತ್ಸಾಹಿಸಲಾಗುತ್ತಿದೆ. ಎನ್‌ಇಪಿಯಲ್ಲಿ ಅಳವಡಿಸಿರುವ ತ್ರಿಭಾಷಾ ಸೂತ್ರವು ಮಹತ್ವಪೂರ್ಣವಾಗಿದೆ. ಇದು ಬಹುಭಾಷೆ ಮತ್ತು ರಾಷ್ಟ್ರೀಯ ಏಕತೆಯನ್ನು ಉತ್ತೇಜಿಸಲಿದೆ. ಹಾಗೆಯೇ ಯಾವುದೇ ರಾಜ್ಯ ಅಥವಾ ಕೇಂದ್ರಾಡಳಿತ ಪ್ರದೇಶಗಳ ಮೇಲೆ ಮತ್ತೊಂದು ಭಾಷೆಯನ್ನು ಹೇರುವುದಿಲ್ಲ ಎಂದೂ ತಿಳಿಸಿದ್ದಾರೆ.

ಸಮಾವೇಶದಲ್ಲಿ ಲೆಫ್ಟಿನೆಂಟ್‌ ಗೌವರ್ನರ್‌ ಮನೋಜ್‌ ಸಿನ್ಹಾ, ಕಾಶ್ಮೀರದ ವಿಶ್ವವಿದ್ಯಾಲಯಗಳ ಕುಲಪತಿಗಳು ಮತ್ತು ಕಾಲೇಜುಗಳ ಪ್ರಾಂಶುಪಾಲರು ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.