ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಬಿ.ಆರ್. ಗವಾಯಿ
ಪಿಟಿಐ ಚಿತ್ರ
ಪಣಜಿ: ವೃತ್ತಿ ಬದುಕಿನಲ್ಲಿ ಯಶಸ್ಸು ದೊರೆಯುವುದು ಪರೀಕ್ಷೆಗಳ ಫಲಿತಾಂಶದಿಂದಲ್ಲ. ಬದಲಾಗಿ, ದೃಢ ನಿಶ್ಚಯ, ಕಠಿಣ ಪರಿಶ್ರಮ, ಸಮರ್ಪಣೆ ಮತ್ತು ಕೆಲಸದ ಬದ್ಧತೆಯಿಂದ ಎಂದು ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಭೂಷಣ್ ರಾಮಕೃಷ್ಣ ಗವಾಯಿ ಹೇಳಿದ್ದಾರೆ.
ಪಣಜಿ ಸಮೀಪದ ಮಿರಮಾರ್‌ನಲ್ಲಿರುವ ವಿ.ಎಂ. ಸಲಗಾಂವ್ಕರ್ ಕಾನೂನು ಕಾಲೇಜಿನ ಸುವರ್ಣ ಮಹೋತ್ಸವದಲ್ಲಿ ಭಾಗವಹಿಸಿದ್ದ ವೇಳೆ ಅವರು, ಕಾನೂನು ಶಿಕ್ಷಣ ವ್ಯವಯಸ್ಥೆಯಲ್ಲಿ ಸಾಕಷ್ಟು ಬದಲಾವಣೆಗಳಾಗಿವೆ ಎಂದು ಅಭಿಪ್ರಾಯಪಟ್ಟಿದ್ದಾರೆ.
'ಪರೀಕ್ಷೆಯಲ್ಲಿ ನೀವು ಎಷ್ಟು ಅಂಕ ಗಳಿಸಿದ್ದೀರಿ ಎಂಬುದಕ್ಕೆ ಪ್ರಾಶಸ್ತ್ಯ ನೀಡಬೇಡಿ. ಏಕೆಂದರೆ, ಫಲಿತಾಂಶಗಳು ನೀವು ಯಾವ ಮಟ್ಟದ ಯಶಸ್ಸು ಗಳಿಸುವಿರಿ ಎಂಬುದನ್ನು ನಿರ್ಧರಿಸುವುದಿಲ್ಲ. ಯಶಸ್ಸನ್ನು ಗಳಿಸಲು ನಿಮ್ಮಲ್ಲಿನ ದೃಢನಿಶ್ಚಯ, ಕಠಿಣ ಪರಿಶ್ರಮ, ಸಮರ್ಪಣೆ ಮತ್ತು ವೃತ್ತಿಯ ಬಗೆಗಿನ ಬದ್ಧತೆ ಎಲ್ಲವೂ ಮುಖ್ಯವಾಗುತ್ತವೆ' ಎಂದು ಕಿವಿಮಾತು ಹೇಳಿದ್ದಾರೆ.
ಮುಂಬೈನ ಸರ್ಕಾರಿ ಕಾನೂನು ಕಾಲೇಜಿನಲ್ಲಿ ಓದುತ್ತಿದ್ದ ದಿನಗಳನ್ನು ನೆನಪಿಸಿಕೊಂಡ ಸಿಜೆಐ, ತಾವು ಪ್ರತಿಭಾವಂತ ವಿದ್ಯಾರ್ಥಿಯಾಗಿದ್ದರೂ, ತರಗತಿಗಳನ್ನು ತಪ್ಪಿಸಿಕೊಳ್ಳುತ್ತಿದ್ದುದಾಗಿ, ಸ್ನೇಹಿತರೊಂದಿಗೆ ಕಾಲೇಜಿನ ಕಾಂಪೌಂಡ್ ಮೇಲೆ ಕುಳಿತು ಕಾಲಹರಣ ಮಾಡುತ್ತಿದ್ದುದಾಗಿ ಹೇಳಿಕೊಂಡಿದ್ದಾರೆ. ಆದರೆ, ಯಾರೊಬ್ಬರೂ ತಮ್ಮನ್ನು ಅನುಕರಿಸದಂತೆ ಸಲಹೆಯನ್ನೂ ನೀಡಿದ್ದಾರೆ.
'ನಾನು ಕಾನೂನು ಪದವಿಯ ಕೊನೇ ವರ್ಷದಲ್ಲಿ ವ್ಯಾಸಂಗ ಮಾಡುತ್ತಿದ್ದಾಗ ನನ್ನ ತಂದೆ ಮಹಾರಾಷ್ಟ್ರ ವಿಧಾನ ಪರಿಷತ್ ಸಭಾಪತಿಯಾದರು. ಹೀಗಾಗಿ, ನಾವು ಅಮರಾವತಿಗೆ ವಾಸ ಬದಲಿಸಬೇಕಾಯಿತು. ನಮಗೆ ಮುಂಬೈನಲ್ಲಿ ಮನೆ ಇರಲಿಲ್ಲ. ಅಮರಾವತಿಯಲ್ಲಿದ್ದಾಗ ನಾನು ಆರೇಳು ಸಲವಷ್ಟೇ ಕಾಲೇಜಿಗೆ ಹೋಗಿರಬಹುದು. ನನ್ನ ಒಬ್ಬ ಸ್ನೇಹಿತ ತರಗತಿಯಲ್ಲಿ ನನ್ನ ಹಾಜರಿ ಹಾಕುತ್ತಿದ್ದ. ಮುಂದೆ ಆತ ಹೈಕೋರ್ಟ್ ನ್ಯಾಯಮೂರ್ತಿಯಾದ' ಎಂದಿದ್ದಾರೆ.
'ಕಾಲೇಜಿನಲ್ಲಿ ಪ್ರಥಮ ರ‍್ಯಾಂಕ್ ಪಡೆದ ವಿದ್ಯಾರ್ಥಿ ಕ್ರಿಮಿನಲ್ ಲಾಯರ್ ಆದ. ಎರಡನೇ ರ‍್ಯಾಂಕ್ ಪಡೆದವ ಹೈಕೋರ್ಟ್ ನ್ಯಾಯಮೂರ್ತಿಯಾದ. ನಾನು ಮೂರನೇಯವ; ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಯಾಗಿದ್ದೇನೆ' ಎಂದು ಅಭಿಮಾನದಿಂದ ಹೇಳಿಕೊಂಡಿದ್ದಾರೆ. ಆ ಮೂಲಕ, ವಿದ್ಯಾರ್ಥಿಗಳು ಅಂಕ ಗಳಿಸುವುದಕ್ಕೆ ಹೆಚ್ಚು ತಲೆ ಕೆಡಿಸಿಕೊಳ್ಳದಂತೆ ಸ್ಫೂರ್ತಿಯ ಮಾತುಗಳನ್ನಾಡಿದ್ದಾರೆ.
ಇದೇ ವೇಳೆ ಅವರು, ಕಾಲೇಜಿಗೆ ಹೋಗದಿದ್ದರೂ ನಿರಂತರವಾಗಿ ಪುಸ್ತಕಗಳನ್ನು ಓದುತ್ತಿದ್ದುದಾಗಿ ಮತ್ತು ಹಿಂದಿನ ಐದು ವರ್ಷಗಳ ಪ್ರಶ್ನೆ ಪತ್ರಿಕೆಗಳನ್ನು ಇಟ್ಟುಕೊಂಡು ತಯಾರಿ ನಡೆಸುತ್ತಿದ್ದುದಾಗಿ ಯಶಸ್ಸಿನ ಗುಟ್ಟು ಬಿಚ್ಚಿಟ್ಟಿದ್ದಾರೆ. ಅದರೊಂದಿಗೆ, ಓದನ್ನು ಕಡೆಗಣಿಸದಂತೆಯೂ ವಿದ್ಯಾರ್ಥಿಗಳನ್ನು ಎಚ್ಚರಿಸಿದ್ದಾರೆ.
ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ (ಗವಾಯಿ) ಪಕ್ಷ ಸ್ಥಾಪಿಸಿದ್ದ ಗವಾಯಿ ಅವರ ತಂದೆ ದಿವಂಗತ ಆರ್.ಎಸ್. ಗವಾಯಿ, 1978–1982ರ ಅವಧಿಯಲ್ಲಿ ಮಹಾರಾಷ್ಟ್ರ ವಿಧಾನಪರಿಷತ್ ಸಭಾಪತಿಯಾಗಿದ್ದರು. ನಂತರ ಅವರು ಬಿಹಾರ, ಸಿಕ್ಕಿಂ ಮತ್ತು ಕೇರಳದ ರಾಜ್ಯಪಾಲರಾಗಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.