ಲೆಫ್ಟಿನೆಂಟ್ ಗವರ್ನರ್ ವಿ.ಕೆ ಸಕ್ಸೇನಾ ಮತ್ತು ಮುಖ್ಯಮಂತ್ರಿ ಆತಿಶಿ
ನವದೆಹಲಿ: ಕಳೆದ ವರ್ಷ ಒಂಬತ್ತು ದೇವಾಲಯಗಳನ್ನು ಕೆಡವಲು ಎಎಪಿ (ಆಮ್ ಆದ್ಮಿ ಪಕ್ಷ) ಸರ್ಕಾರ ಅನುಮೋದನೆ ನೀಡಿತ್ತು ಎಂದು ಲೆಫ್ಟಿನೆಂಟ್ ಗವರ್ನರ್ ವಿ.ಕೆ ಸಕ್ಸೇನಾ ಅವರ ಕಚೇರಿ ಪ್ರಕಟಣೆ ತಿಳಿಸಿದೆ.
ದೆಹಲಿ ಮುಖ್ಯಮಂತ್ರಿ ಆತಿಶಿ, ಲೆಫ್ಟಿನೆಂಟ್ ಗವರ್ನರ್‌ಗೆ ಪತ್ರ ಬರೆದ ಬೆನ್ನಲ್ಲೇ ಈ ಆರೋಪ ಬಂದಿದೆ. ಆತಿಶಿ ಬರೆದ ಪತ್ರದಲ್ಲಿ ತಮ್ಮ ಪರಿಧಿಯ 'ಧಾರ್ಮಿಕ ಸಮಿತಿ' ನವೆಂಬರ್ 22ರಂದು ನಡೆದ ಸಭೆಯಲ್ಲಿ ಹಿಂದೂ ದೇವಾಲಯಗಳು, ಬೌದ್ಧ ಪೂಜಾ ಸ್ಥಳಗಳು ಸೇರಿದಂತೆ ನಗರದ ವಿವಿಧೆಡೆ ಇರುವ ಆರು ಧಾರ್ಮಿಕ ಕಟ್ಟಡಗಳನ್ನು ಕೆಡವಲು ನಿರ್ಧರಿಸಲಾಗಿದೆ ಎಂದು ಉಲ್ಲೇಖಿಸಿದ್ದರು.
ಇದಕ್ಕೆ ಪ್ರತಿಯಾಗಿ ಉತ್ತರ ನೀಡಿರುವ ಗವರ್ನರ್ ಕಚೇರಿ,, ಮಾಜಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರು ಕಳೆದ ವರ್ಷ ಫೆಬ್ರುವರಿ 8ರಂದು ದೆಹಲಿಯ ವಿವಿಧ ಭಾಗಗಳಲ್ಲಿರುವ ಒಂಬತ್ತು ದೇವಾಲಯಗಳನ್ನು ಕೆಡವಲು ಶಿಫಾರಸು ಮಾಡಿದ್ದರು ಎಂದು ಪ್ರಕಟಣೆಯಲ್ಲಿ ತಿಳಿಸಿದೆ.
ಕೇಜ್ರಿವಾಲ್ ಮತ್ತು ಆಗಿನ ಗೃಹ ಸಚಿವರಾಗಿದ್ದ ಮನೀಶ್ ಸಿಸೋಡಿಯಾ ಅವರು ದೇವಾಲಯಗಳನ್ನು ಕೆಡವಲು ಸಮಿತಿಯ ಶಿಫಾರಸುಗಳನ್ನು ಅನುಮೋದಿಸಿದ್ದರು. ಕರವಾಲ್ ನಗರದ ಏಳು ದೇವಾಲಯಗಳು ಮತ್ತು ಉಸ್ಮಾನ್‌ಪುರದಲ್ಲಿದ್ದ ಎರಡು ದೇವಾಲಯಗಳನ್ನು ಕೆಡವಲು ಅನುಮೋದಿಸಲಾಗಿತ್ತು ಎಂದು ದಾಖಲೆಗಳನ್ನು ಲಗತ್ತಿಸಿದೆ.
2016ರಲ್ಲಿ ದೆಹಲಿಯ ವಿವಿಧ ಭಾಗಗಳಲ್ಲಿ ಎಂಟು ದೇವಾಲಯಗಳನ್ನು ಕೆಡವಲು ಅಂದಿನ ಗೃಹ ಸಚಿವ ಸತ್ಯೇಂದ್ರ ಜೈನ್ ಅನುಮೋದನೆ ನೀಡಿದ್ದರು ಎಂದು ಹೇಳಿಕೆಯಲ್ಲಿ ಆರೋಪಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.