ADVERTISEMENT

ಅದಾನಿಗೆ ಎಲ್‌ಐಸಿ ಹಣ | ಮೊಬೈಲ್‌ ಫೋನ್‌ ಬ್ಯಾಂಕಿಂಗ್‌: ಕಾಂಗ್ರೆಸ್‌ ವಾಗ್ದಾಳಿ

​ಪ್ರಜಾವಾಣಿ ವಾರ್ತೆ
Published 25 ಅಕ್ಟೋಬರ್ 2025, 16:15 IST
Last Updated 25 ಅಕ್ಟೋಬರ್ 2025, 16:15 IST
   

ನವದೆಹಲಿ: ಅದಾನಿ ಸಮೂಹದಲ್ಲಿ ಎಲ್‌ಐಸಿಯ ಸುಮಾರು ₹33 ಸಾವಿರ ಕೋಟಿ ಹೂಡಿಕೆ ಇದ್ದು, ಇದು ಮೋದಿ ಸರ್ಕಾರದ ‘ಮೊಬೈಲ್‌ ಫೋನ್‌ ಬ್ಯಾಂಕಿಂಗ್‌’ ಎಂದು ಕಾಂಗ್ರೆಸ್‌ ಆರೋಪಿಸಿದೆ. 

‘ಹಣಕಾಸಿನ ಗಂಭೀರ ಸಮಸ್ಯೆ ಎದುರಿಸುತ್ತಿರುವ ಅದಾನಿ ಸಮೂಹಕ್ಕೆ ಅನುಕೂಲ ಮಾಡಿಕೊಡಲು ಸರ್ಕಾರ  ಈ ಮಾರ್ಗ ಅನುಸರಿಸಿದೆ. ಈ ಕುರಿತು ಸಂಸತ್ತಿನ ಸಾರ್ವಜನಿಕ ಲೆಕ್ಕಪತ್ರ ಸಮಿತಿಯಿಂದ (ಪಿಎಸಿ) ತನಿಖೆ ನಡೆಸಬೇಕು’ ಎಂದೂ ಒತ್ತಾಯಿಸಿದೆ. 

‘ಮೋದಿ ಸರ್ಕಾರದಲ್ಲಿ ನೇರ ನಗದು ಪಾವತಿಯ (ಡಿಬಿಟಿ) ನೈಜ ಫಲಾನುಭವಿಗಳು ಜನಸಾಮಾನ್ಯರಲ್ಲ, ಅವರು ಮೋದಿಯ ಆಪ್ತ ಸ್ನೇಹಿತರಷ್ಟೇ’ ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ. 

ADVERTISEMENT

ಅದಾನಿ ಸಮೂಹದಲ್ಲಿ ಎಲ್‌ಐಸಿಯ ಹೂಡಿಕೆ ಮಾತ್ರವಲ್ಲ, 2023ರಲ್ಲಿ ಅದಾನಿ ಎಫ್‌ಪಿಒದಲ್ಲಿ ಎಸ್‌ಬಿಐ ₹525 ಕೋಟಿ ಹೂಡಿಕೆ ಮಾಡಲು ಮುಂದಾದ ಬಗ್ಗೆಯೂ ಕೇಂದ್ರ ಸರ್ಕಾರ ಉತ್ತರಿಸಬೇಕು ಎಂದು ಕಾಂಗ್ರೆಸ್‌ ಆಗ್ರಹಿಸಿದೆ. 

‘ಅಕ್ಷರಶಃ ಬಲವಂತದ ಕ್ರಮ’ದ ಮೂಲಕ ಅದಾನಿ ಸಮೂಹದಲ್ಲಿ ಹೂಡಿಕೆ ಮಾಡುವಂತೆ ಎಲ್‌ಐಸಿಗೆ ಅಧಿಕಾರಿಗಳು ಒತ್ತಡ ಹೇರಿದ್ದರು. ಈ ಬಗ್ಗೆ ತನಿಖೆ ನಡೆಯಬೇಕು ಎಂದು ಕಾಂಗ್ರೆಸ್‌ ಮುಖಂಡರು ಒತ್ತಾಯಿಸಿದ್ದಾರೆ. 

ಎಲ್‌ಐಸಿಯಿಂದ ಅದಾನಿ ಸಮೂಹದ ಕಂಪನಿಗಳಿಗೆ ಹಣ ವರ್ಗಾಯಿಸಲು ಅಧಿಕಾರಿಗಳು ಆರು ತಿಂಗಳ ಹಿಂದೆಯೇ (ಮೇ ತಿಂಗಳಲ್ಲಿ)  ಮಾರ್ಗಸೂಚಿ ಸಿದ್ಧಪಡಿಸಿದ್ದರು ಎಂದು ಕಾಂಗ್ರೆಸ್‌ ಆರೋಪಿಸಿದೆ. 

ಲೂಟಿ ಅಲ್ಲದೆ ಮತ್ತೇನು? 

‘ಈ ದೇಶದ ಮಧ್ಯಮವರ್ಗದ ಜನರು ತಮ್ಮ ದುಡಿಮೆಯ ಹಣದಲ್ಲಿ ಒಂದೊಂದು ಪೈಸೆಯನ್ನೂ ಕೂಡಿಟ್ಟು ಎಲ್‌ಐಸಿ ಕಂತು ತುಂಬಿದ್ದಾರೆ.  ಆದರೆ, ಮೋದಿ ಅವರು ಈ ಹಣವನ್ನು ಅದಾನಿ ಸಮೂಹ ರಕ್ಷಿಸಲು ವರ್ಗಾಯಿಸಿದ್ದಾರೆ. ಇದು ಸುಮಾರು 30 ಕೋಟಿಯಷ್ಟು ಎಲ್‌ಐಸಿ ಪಾಲಿಸಿದಾರರಿಗೆ ಸರ್ಕಾರ ಮಾಡಿರುವ ವಿಶ್ವಾಸದ್ರೋಹ. ಇದು ಲೂಟಿ ಅಲ್ಲದೆ ಮತ್ತೇನು ಎಂದು ಖರ್ಗೆ ‘ಎಕ್ಸ್‌’ನಲ್ಲಿ ಪೋಸ್ಟ್‌ ಮಾಡಿದ್ದಾರೆ.

ಮೋದಿ ಸರ್ಕಾರ ಮತ್ತು ಅದಾನಿ ಸಮೂಹ ’ಅತ್ಯಂತ ವ್ಯವಸ್ಥಿತವಾಗಿ’ ಎಲ್‌ಐಸಿ ಮತ್ತು 30 ಕೋಟಿ ಪಾಲಿಸಿದಾರರ ಉಳಿತಾಯವನ್ನು ದುರ್ಬಳಕೆ ಮಾಡಿಕೊಂಡಿದೆ’ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಂ ರಮೇಶ್‌ ಆರೋಪಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.