
ಬಂಧನ
ನವದೆಹಲಿ: ರಕ್ಷಣಾ ಸಚಿವಾಲಯದ, ರಕ್ಷಣಾ ಉತ್ಪಾದನಾ ಇಲಾಖೆಗೆ ನಿಯೋಜನೆಗೊಂಡಿದ್ದ ಅಧಿಕಾರಿ ಲೆಫ್ಟಿನೆಂಟ್ ಕರ್ನಲ್ ದೀಪಕ್ ಕುಮಾರ್ ಶರ್ಮಾ ಅವರನ್ನು ಭ್ರಷ್ಟಾಚಾರ ಪ್ರಕರಣದಲ್ಲಿ ಸಿಬಿಐ ಬಂಧಿಸಿದೆ.
ಶರ್ಮಾ ಅವರು, ರಕ್ಷಣಾ ಉಪಕರಣಗಳ ತಯಾರಿಕೆ ಮತ್ತು ರಫ್ತಿಗೆ ಸಂಬಂಧಿಸಿದಂತೆ ಬೆಂಗಳೂರಿನ ಕಂಪನಿಯೊಂದರಿಂದ ₹3 ಲಕ್ಷ ಲಂಚಕ್ಕೆ ಬೇಡಿಕೆ ಇರಿಸಿದ್ದರು. ಸಿಬಿಐ ಶನಿವಾರ ಶರ್ಮಾ ಅವರಿಗೆ ಸಂಬಂಧಿಸಿದ ದೆಹಲಿ ನಿವಾಸದಲ್ಲಿ ಕೈಗೊಂಡ ಶೋಧ ಕಾರ್ಯಾಚರಣೆಯಲ್ಲಿ ₹2.23 ಕೋಟಿ ನಗದು ಪತ್ತೆಯಾಗಿದೆ.
ಶರ್ಮಾ ಅವರು ರಕ್ಷಣಾ ಸಚಿವಾಲಯದ ಉತ್ಪಾದನಾ ಇಲಾಖೆಯ ಸಹಾಯಕ ಯೋಜನಾ ಅಧಿಕಾರಿಯಾಗಿ (ಅಂತರರಾಷ್ಟ್ರೀಯ ಸಹಕಾರ ಮತ್ತು ರಫ್ತು) ಕಾರ್ಯನಿರ್ವಹಿಸುತ್ತಿದ್ದಾರೆ. ಅವರ ಪತ್ನಿ ಕರ್ನಲ್ ಕಾಜಲ್ ಬಾಲಿ ರಾಜಸ್ಥಾನದ ಗಂಗಾನಗರದಲ್ಲಿ 16ನೇ ಪದಾತಿ ದಳದ ಅಧಿಕಾರಿ ಆಗಿದ್ದಾರೆ. ಇಬ್ಬರ ವಿರುದ್ಧವೂ ಸಿಬಿಐ ಪ್ರಕರಣ ದಾಖಲಿಸಿದೆ.
‘ಶರ್ಮಾ ಅವರು ರಕ್ಷಣಾ ಉಪಕರಣಗಳ ತಯಾರಿಕೆ, ರಫ್ತಿಗೆ ಸಂಬಂಧಿಸಿದಂತೆ ವಿವಿಧ ಖಾಸಗಿ ಕಂಪನಿಗಳ ಪ್ರತಿನಿಧಿಗಳೊಂದಿಗೆ ಕ್ರಿಮಿನಲ್ ಪಿತೂರಿ, ಭ್ರಷ್ಟಾಚಾರ ಮತ್ತು ಕಾನೂನು ಬಾಹಿರ ಚಟುವಟಿಕೆಗಳಲ್ಲೂ ತೊಡಗಿಸಿಕೊಂಡಿದ್ದರು’ಎಂದು ಸಿಬಿಐ ವಕ್ತಾರ ತಿಳಿದ್ದಾರೆ.
ಬೆಂಗಳೂರಿನ ಕಂಪನಿಯೊಂದರ ರಾಜೀವ್ ಯಾದವ್ ಮತ್ತು ರವಜೀತ್ ಸಿಂಗ್ ಯಾದವ್ ಎಂಬುವರು ದೀಪಕ್ ಅವರಿಗೆ ₹ 3 ಲಕ್ಷ ಲಂಚದ ಹಣ ತಲುಪಿಸಲಿದ್ದಾರೆ ಎಂಬ ಮಾಹಿತಿ ಲಭಿಸಿತ್ತು. ಸಿಂಗ್ ಮತ್ತು ಯಾದವ್ ನಿರಂತರವಾಗಿ ಲೆಫ್ಟಿನೆಂಟ್ ಕರ್ನಲ್ ಶರ್ಮಾ ಹಾಗೂ ಇತರರ ಜೊತೆ ಸಂಪರ್ಕದಲ್ಲಿದ್ದರು. ದೀಪಕ್ ಮೂಲಕ ಕೇಂದ್ರ ಸರ್ಕಾರದ ವಿವಿಧ ಇಲಾಖೆಗಳು, ಸಚಿವಾಲಯಗಳಲ್ಲಿ ತಮ್ಮ ಕಂಪನಿಗಾಗಿ ಅನುಕೂಲ ಪಡೆದಿದ್ದರು. ಆ ಕಂಪನಿಯ ಪರವಾಗಿ ವಿನೋದ್ ಕುಮಾರ್ ಎಂಬ ವ್ಯಕ್ತಿಯು ಡಿ.18ರಂದು ₹ 3 ಲಕ್ಷ ಲಂಚವನ್ನು ಶರ್ಮಾ ಅವರಿಗೆ ತಲುಪಿಸಿದ್ದ’ ಎಂದು ಸಿಬಿಐ ಪ್ರಕಟಣೆ ತಿಳಿಸಿದೆ.
ಕಾರ್ಯಾಚರಣೆ ವೇಳೆ ಶರ್ಮಾ ಅವರಿಂದ ₹ 3 ಲಕ್ಷ ಲಂಚದ ಹಣದ ಜೊತೆಗೆ ₹ 2.23 ಕೋಟಿಯಷ್ಟು ಬೃಹತ್ ಮೊತ್ತದ ನಗದನ್ನೂ ವಶಕ್ಕೆ ಪಡೆಯಲಾಯಿತು. ಗಂಗಾನಗರದಲ್ಲಿರುವ ಅವರ ಪತ್ನಿಯ ಮನೆಯಲ್ಲಿ ₹ 10 ಲಕ್ಷ ನಗದು ವಶಕ್ಕೆ ಪಡೆಯಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.
ಬಂಧಿತರಾಗಿರುವ ಶರ್ಮಾ ಮತ್ತು ವಿನೋದ್ ಕುಮಾರ್ ಇಬ್ಬರನ್ನೂ ಸಿಬಿಐ ಪ್ರಕರಣಗಳ ವಿಶೇಷ ನ್ಯಾಯಾಲಯದ ಎದುರು ಹಾಜರುಪಡಿಸಲಾಯಿತು. ಇಬ್ಬರೂ ಆರೋಪಿಗಳನ್ನು ಡಿ.23ರವರೆಗೆ ಸಿಬಿಐ ವಶಕ್ಕೆ ನೀಡಿ ನ್ಯಾಯಾಲಯ ಆದೇಶ ಹೊರಡಿಸಿದೆ ಎಂದು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.