ಪಟ್ನಾ: ಬಿಹಾರ ವಿಧಾನಸಭೆಯ ಆವರಣದಲ್ಲಿ ಮಂಗಳವಾರ ಮದ್ಯದ ಬಾಟಲಿಗಳು ಪತ್ತೆಯಾಗಿವೆ. ಅದರ ಮೇಲಿನ ಹಸ್ತದ ಗುರುತುಗಳನ್ನು ಪತ್ತೆ ಮಾಡಲು ಬಾಟಲಿಗಳನ್ನು ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ ಎಂದು ಡಿಜಿಪಿ ಎಸ್.ಕೆ ಸಿಂಘಾಲ್ ಹೇಳಿದ್ದಾರೆ.
ಬಿಹಾರದಲ್ಲಿ 2016ರಿಂದ ಮದ್ಯವನ್ನು ನಿಷೇಧ ಮಾಡಲಾಗಿದೆ. ಪರಿಸ್ಥಿತಿ ಹೀಗಿರುವಾಗ ವಿಧಾನಸಭೆ ಆವರಣದಲ್ಲೇ ಮದ್ಯದ ಬಾಟಲಿ ಪತ್ತೆಯಾಗಿರುವುದು ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ.
ವಿಧಾನಸಭೆ ಆವರಣದಲ್ಲೇ ಮದ್ಯದ ಬಾಟಲಿ ಪತ್ತೆಯಾಗಿರುವ ವಿಚಾರವನ್ನು ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಅಂತ್ಯಂತ ಗಂಭೀರವಾಗಿ ಪರಿಗಣಿಸಿದ್ದಾರೆ. ಡಿಜಿಪಿ ಮತ್ತು ಮುಖ್ಯ ಕಾರ್ಯದರ್ಶಿ ತ್ರಿಪುರಾರಿ ಶರಣ್ ಅವರನ್ನು ತಮ್ಮ ಕಚೇರಿಗೆ ಕರೆಸಿಕೊಂಡ ನಿತೀಶ್, ಮದ್ಯ ಸೇವಿಸಿದವರನ್ನು ಪತ್ತೆ ಮಾಡುವಂತೆ ಸೂಚನೆ ನೀಡಿದ್ದರು. ಇದರ ಬೆನ್ನಿಗೇ ಬಾಟಲಿಗಳನ್ನು ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ.
ಬಿಹಾರದ ವಿಧಾನಸಭೆ ಒಳಗೆ ಇರುವ ಮುಖ್ಯಮಂತ್ರಿಗಳ ಕಚೇರಿಯಿಂದ ಕೇವಲ 50 ಮೀಟರ್ ದೂರದಲ್ಲಿ ಬಾಟಲಿಗಳು ಪತ್ತೆಯಾಗಿವೆ. ಹೀಗಾಗಿ ರಾಜ್ಯದಲ್ಲಿ ಜಾರಿಯಲ್ಲಿರುವ ಪಾನ ನಿಷೇಧದ ಮೇಲೆ ಶಂಕೆ ಮೂಡುವಂತೆ ಆಗಿದೆ.
‘ಖಾಲಿ ಬಾಟಲಿಗಳು ಸಿಕ್ಕಿರುವುದು ಭದ್ರತಾ ಲೋಪವಲ್ಲ. ನಿರ್ದಿಷ್ಟ ಉದ್ದೇಶದಿಂದ ಬಾಟಲಿಗಳನ್ನು ಆ ಸ್ಥಳದಲ್ಲಿ ಹಾಕಲಾಗಿದೆ. ಇದು ಸಾಮಾನ್ಯ ಘಟನೆಯಲ್ಲ. ನಾವು ಕೂಲಂಕಷ ತನಿಖೆ ನಡೆಸುತ್ತೇವೆ,’ ಎಂದು ಮುಖ್ಯ ಕಾರ್ಯದರ್ಶಿ ತ್ರಿಪುರಾರಿ ಶರಣ್ ಹೇಳಿದರು.
ರಾಜ್ಯದಲ್ಲಿ ಮದ್ಯ ಎಲ್ಲೆಡೆ ಲಭ್ಯವಾಗುತ್ತಿದೆ. ಮದ್ಯ ನಿಷೇಧ ಎಂಬುದು ಕೇವಲ ತೋರಿಕೆಯಷ್ಟೇ ಎಂದು ವಿರೋಧ ಪಕ್ಷ ಆರ್‌ಜೆಡಿ ಆರೋಪಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.