ADVERTISEMENT

ಬೋಸ್‌ರಿಂದ ಪವಾರ್‌ವರೆಗೆ.. ವೈಮಾನಿಕ ಅವಘಡಗಳಲ್ಲಿ ಮೃತಪಟ್ಟ ಗಣ್ಯರ ಪಟ್ಟಿ

ಮೃತ್ಯುಂಜಯ ಬೋಸ್
Published 28 ಜನವರಿ 2026, 6:43 IST
Last Updated 28 ಜನವರಿ 2026, 6:43 IST
   

ಮುಂಬೈ: ಮಹಾರಾಷ್ಟ್ರದ ಉಪ ಮುಖ್ಯಮಂತ್ರಿ ಮತ್ತು ಎನ್‌ಸಿಪಿ ಅಧ್ಯಕ್ಷ ಅಜಿತ್ ಪವಾರ್ ಅವರು ಪುಣೆ ಜಿಲ್ಲೆಯ ಬಾರಾಮತಿಯಲ್ಲಿ ಸಂಭವಿಸಿದ ವಿಮಾನ ಅಪಘಾತದಲ್ಲಿ ಸಾವಿಗೀಡಾಗಿದ್ದಾರೆ. ಈ ಮೂಲಕ ವಿಮಾನ, ಹೆಲಿಕಾಪ್ಟರ್ ಅವಘಡಗಳಲ್ಲಿ ಮೃತಪಟ್ಟ ಭಾರತದ ರಾಜಕಾರಣಿಗಳು ಮತ್ತು ಗಣ್ಯ ವ್ಯಕ್ತಿಗಳ ಪಟ್ಟಿಗೆ ಸೇರಿದ್ದಾರೆ.

1945ರ ಆಗಸ್ಟ್ 18ರಂದು ತೈವಾನ್‌ನಲ್ಲಿ ನಡೆದ ವಿಮಾನ ಅಪಘಾತದಲ್ಲಿ ಸಾವಿಗೀಡಾದ ನೇತಾಜಿ ಸುಭಾಷ್ ಚಂದ್ರ ಬೋಸ್ ವಿಮಾನ ಅಪಘಾತದಲ್ಲಿ ಮೃತಪಟ್ಟ ಮೊದಲ ಭಾರತೀಯ ರಾಜಕಾರಣಿ ಎನ್ನಬಹುದು.

2011ರಲ್ಲಿ ಅರುಣಾಚಲ ಪ್ರದೇಶದ ಅಂದಿನ ಮುಖ್ಯಮಂತ್ರಿಯಾಗಿದ್ದ ದೋರ್ಜಿ ಖಂಡು ಮತ್ತು 2009ರಲ್ಲಿ ಅವಿಭಜಿತ ಆಂಧ್ರಪ್ರದೇಶದ ಮುಖ್ಯಮಂತ್ರಿಯಾಗಿದ್ದ ವೈ,ಎಸ್, ರಾಜಶೇಖರ ರೆಡ್ಡಿ ಹೆಲಿಕಾಪ್ಟರ್ ದುರಂತದಲ್ಲಿ ಮೃತಪಟ್ಟ ಹಾಲಿ ಮುಖ್ಯಮಂತ್ರಿಗಳಾಗಿದ್ದಾರೆ.

ADVERTISEMENT

ಇಂದಿರಾ ಗಾಂಧಿಯ ಕಿರಿಯ ಮಗ, ಕಾಂಗ್ರೆಸ್ ನಾಯಕ ಸಂಜಯ್ ಗಾಂಧಿ. ವರ್ಚಸ್ವಿ ರಾಜಕಾರಣಿ ಮತ್ತು ಕ್ರಿಕೆಟ್ ಆಡಳಿತಾಧಿಕಾರಿ ಮಾಧವರಾವ್ ಸಿಂಧಿಯಾ, ಮಾಜಿ ಲೋಕಸಭಾ ಸ್ಪೀಕರ್ ಜಿ. ಎಂ. ಸಿ ಬಾಲಯೋಗಿ, ಎಸ್. ಮೋಹನ್ ಕುಮಾರಮಂಗಲಂ ಮತ್ತು ಆಗಿನ ರಕ್ಷಣಾ ಖಾತೆ ರಾಜ್ಯ ಸಚಿವ ಎನ್. ವಿ. ಎನ್. ಸೋಮು ವಿಮಾನ ಅಪಘಾತಗಳಲ್ಲಿ ಸಾವಿಗೀಡಾದ ಪ್ರಮುಖ ರಾಜಕಾರಣಿಗಳಾಗಿದ್ದಾರೆ.

1980ರ ಜೂನ್ 23ರಂದು 34 ವರ್ಷದ ಸಂಜಯ್ ಗಾಂಧಿ ಅವರು ಚಲಾಯಿಸುತ್ತಿದ್ದ ಲಘು ವಿಮಾನ ದೆಹಲಿಯ ಸಫ್ದರ್‌ಜಂಗ್ ವಿಮಾನ ನಿಲ್ದಾಣದಿಂದ ಟೇಕ್ ಆಫ್ ಆದ ಸ್ವಲ್ಪ ಸಮಯದ ನಂತರ ಅಪಘಾತಕ್ಕೀಡಾಗಿತ್ತು. ಡೈವಿಂಗ್ ಮತ್ತು ಲೂಪಿಂಗ್ ಮಾಡುವಾಗ ಸಂಜಯ್ ಗಾಂಧಿ ನಿಯಂತ್ರಣ ಕಳೆದುಕೊಂಡಿದ್ದರು. ವಿಮಾನವು ತೀನ್ ಮೂರ್ತಿ ಹೌಸ್ ಬಳಿ ಅಪಘಾತಕ್ಕೀಡಾಗಿತ್ತು.

ನಾಗರಿಕ ವಿಮಾನಯಾನ ಖಾತೆಯ ಮಾಜಿ ಸಚಿವ, ಹಿರಿಯ ಕಾಂಗ್ರೆಸ್ ನಾಯಕ ಮಾಧವರಾವ್ ಸಿಂಧಿಯಾ ಅವರು 2001ರ ಸೆಪ್ಟೆಂಬರ್ 30ರಂದು ಉತ್ತರ ಪ್ರದೇಶದ ಕಾನ್ಪುರಕ್ಕೆ ಸಾರ್ವಜನಿಕ ರ್‍ಯಾಲಿಯಲ್ಲಿ ಭಾಗವಹಿಸಲು ಪ್ರಯಾಣಿಸುತ್ತಿದ್ದಾಗ ಸೆಸ್ನಾ ವಿಮಾನ ಅಪಘಾತದಲ್ಲಿ ಸಾವಿಗೀಡಾಗಿದ್ದರು.

2002ರ ಮಾರ್ಚ್ 3ರಂದು ಆಂಧ್ರ ಪ್ರದೇಶದಲ್ಲಿ ಸಂಭವಿಸಿದ ಹೆಲಿಕಾಪ್ಟರ್ ಅವಘಡದಲ್ಲಿ ಅಂದಿನ ಲೋಕಸಭಾ ಅಧ್ಯಕ್ಷರಾಗಿದ್ದ ತೆಲುಗು ದೇಶಂ ಪಕ್ಷದ ನಾಯಕ ಜಿ.ಎಂ.ಸಿ ಬಾಲಯೋಗಿ ಸಾವಿಗೀಡಾಗಿದ್ದರು.

2025ರ ಆಗಸ್ಟ್ 12ರಂದು ಅಹಮದಾಬಾದ್‌ನ ಸರ್ದಾರ್ ವಲ್ಲಭಭಾಯ್ ಪಟೇಲ್ ಅಂತರರಾಷ್ಟ್ರೀಯ ವಿಮಾನನಿಲ್ದಾಣದಲ್ಲಿ ಟೇಕಾಫ್ ಆದ ಸ್ವಲ್ಪ ಸಮಯದಲ್ಲೇ ಏರ್ ಇಂಡಿಯಾದ 171 ವಿಮಾನ ಪತನಗೊಂಡು ಗುಜರಾತ್‌ನ ಮಾಜಿ ಮುಖ್ಯಮಂತ್ರಿ ಮತ್ತು ಬಿಜೆಪಿ ನಾಯಕ ವಿಜಯ್ ರೂಪಾನಿ ಮೃತಪಟ್ಟರು.

ವಿಮಾನ ಅವಘಡಗಳಲ್ಲಿ ಮೃತಪಟ್ಟ ಗಣ್ಯ ವ್ಯಕ್ತಿಗಳು

ಭಾರತದ ಮೊದಲ ಸೇನಾ ಪಡೆಗಳ ಮುಖ್ಯಸ್ಥ ಬಿಪಿನ್ ರಾವತ್, 2021ರ ಡಿಸೆಂಬರ್ 8ರಂದು ಸಂಭವಿಸಿದ ಹೆಲಿಕಾಪ್ಟರ್ ಅವಘಡದಲ್ಲಿ ಮೃತಪಟ್ಟರು. ರಾವತ್ ಪತ್ನಿ ಮತ್ತು ಇತರೆ 11 ಜನರ ಜೊತೆ ಸುಲೂರ್ನಿಂದ ವೆಲ್ಲಿಂಗ್ಟನ್‌ಗೆ ತೆರಳುತ್ತಿದ್ದಾಗ ಕೂನೂರು ಬಳಿ ಹೆಲಿಕಾಪ್ಟರ್ ಪತನಗೊಂಡಿತ್ತು.

ಭಾರತದ ಪರಮಾಣು ಯೋಜನೆಯ ಪಿತಾಮಹ, ಖ್ಯಾತ ವಿಜ್ಞಾನಿ ಡಾ. ಹೊಮಿ ಜಹಾಂಗೀರ್ ಭಾಭಾ ಅವರು 1966ರ ಜನವರಿ 24ರಂದು ಸ್ವಿಟ್ಜರ್‌ಲೆಂಡ್‌ನಲ್ಲಿ ಸಂಭವಿಸಿದ ವಿಮಾನ ಅವಘಡದಲ್ಲಿ ಮೃತಪಟ್ಟರು. ಜಿನೆವಾ ವಾಯು ಸಂಚಾರ ನಿಯಂತ್ರಣ ಕೇಂದ್ರದ ಜೊತೆಗಿನ ಸಂವಹನ ದೋಷದಿಂದ ವಿಮಾನವು ಸ್ವಿಸ್ ಆಲ್ಪ್ಸ್‌ನ ಮಾಂಟ್ ಬ್ಲಂಕ್‌ನಲ್ಲಿ ವಿಮಾನ ಅಪಘಾತಕ್ಕೀಡಾಗಿತ್ತು.

ಕೈಗಾರಿಕೋದ್ಯಮಿ ಮತ್ತು ಹರಿಯಾಣ ಸಚಿವ ಓಂ ಪ್ರಕಾಶ್ ಜಿಂದಾಲ್ ಅವರು 2005ರಲ್ಲಿ ಹೆಲಿಕಾಪ್ಟರ್ ಅಪಘಾತದಲ್ಲಿ ಮೃತಪಟ್ಟರು.

1994ರ ಜುಲೈ 9ರಂದು ಹಿಮಾಚಲ ಪ್ರದೇಶದಲ್ಲಿ ಸಂಚರಿಸುತ್ತಿದ್ದ ಅಂದಿನ ಪಂಜಾಬ್ ರಾಜ್ಯಪಾಲ ಸುರೇಂದ್ರ ನಾಥ್ ಮತ್ತು ಇತರೆ 9 ಮಂದಿ ಪ್ರಯಾಣಿಸುತ್ತಿದ್ದ ಸರ್ಕಾರದ ಸೂಪರ್ ಕಿಂಗ್ ವಿಮಾನ ಪತನಗೊಂಡು ಎಲ್ಲರೂ ಅಸುನೀಗಿದ್ದರು.

2004ರ ಏಪ್ರಿಲ್ 17ರಂದು ಆಂಧ್ರ ಪ್ರದೇಶದ ಚುನಾವಣಾ ಪ್ರಚಾರಕ್ಕೆ ತೆರಳುತ್ತಿದ್ದ ವೇಳೆ ಬೆಂಗಳೂರಿನ ಜಿಕೆವಿಕೆ ಬಳಿ ಹೆಲಿಕಾಪ್ಟರ್ ಪತನಗೊಂಡು ದಕ್ಷಿಣ ಭಾರತದ ಖ್ಯಾತ ನಟಿ ಸೌದರ್ಯ ಮೃತಪಟ್ಟಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.