ನವದೆಹಲಿ: ದೇವಾಲಯಗಳಲ್ಲಿ ಭಕ್ತರಿಗೆ ಪ್ರಸಾದ ನೀಡುವಂತಿಲ್ಲ, ಮಾಲ್‌ಗಳಲ್ಲಿ ಮಕ್ಕಳ ಆಟದ ಪ್ರದೇಶ ಮತ್ತು ಸಿನಿಮಾ ಮಂದಿರಗಳನ್ನು ತೆರೆಯುವಂತಿಲ್ಲ ಎನ್ನುವುದು ಸೇರಿದಂತೆ ಹಲವು ಮಾರ್ಗಸೂಚಿಗಳನ್ನು ಆರೋಗ್ಯ ಸಚಿವಾಲಯ ಗುರುವಾರ ಹೊರಡಿಸಿದೆ.
ಜೂನ್ 8ರಿಂದ ‘ಅನ್‌ಲಾಕ್ 1.0’ ಆರಂಭವಾಗುವುದರಿಂದ ಈ ಮಾರ್ಗಸೂಚಿಗಳನ್ನು ರೂಪಿಸಿದೆ.
ಕಚೇರಿಗಳು, ಧಾರ್ಮಿಕ ಸ್ಥಳಗಳು, ರೆಸ್ಟೊರೆಂಟ್‌ಗಳು, ಶಾಪಿಂಗ್ ಮಾಲ್‌ಗಳು, ಹೋಟೆಲ್‌ಗಳು ಅನುಸರಿಸಬೇಕಾದ ಮಾದರಿ ಕಾರ್ಯವಿಧಾನವನ್ನು (ಎಸ್‌ಒಪಿ) ಆರೋಗ್ಯ ಸಚಿವಾಲಯ ರೂಪಿಸಿದೆ.
ಕಡ್ಡಾಯವಾಗಿ ಅಂತರ ಕಾಪಾಡಬೇಕು ಮತ್ತು ಮುಖಕ್ಕೆ ಮಾಸ್ಕ್ ಧರಿಸಬೇಕು ಎಂದು ಸೂಚಿಸಲಾಗಿದೆ.
ಎಲ್ಲ ಸ್ಥಳಗಳ ಪ್ರವೇಶ ದ್ವಾರದಲ್ಲಿ ಸ್ಯಾನಿಟಿಸರ್ ಇಡಬೇಕು ಮತ್ತು ಥರ್ಮಲ್ ಸ್ಕ್ಯಾನರ್ ಮೂಲಕ ತಪಾಸಣೆ ಕೈಗೊಳ್ಳಬೇಕು. ಕೊರೊನಾ ಸೋಂಕಿನ ಲಕ್ಷಣಗಳಿದ್ದ ನಾಗರಿಕರಿಗೆ ಪ್ರವೇಶ ಕಲ್ಪಿಸಬಾರದು ಎಂದು ತಿಳಿಸಲಾಗಿದೆ.
ಮಾರ್ಗಸೂಚಿಯ ವಿವರಗಳು
*ಹೋಟೆಲ್‌ಗಳು ಮತ್ತು ರೆಸ್ಟೊರೆಂಟ್‌ಗಳಲ್ಲಿ ಡಿಜಿಟಲ್ ಪಾವತಿಗೆ ಉತ್ತೇಜನ ನೀಡಬೇಕು. ರೋಗ ಲಕ್ಷಣ ಇಲ್ಲದ ಸಿಬ್ಬಂದಿಗೆ ಮಾತ್ರ ಕಾರ್ಯನಿರ್ವಹಿಸಲು ಅವಕಾಶ ಕಲ್ಪಿಸಬೇಕು.
*ಆತಿಥ್ಯ ಸೇವೆ ನೀಡುವವರು ಅತಿಥಿಗಳ ಪ್ರವಾಸದ ಇತಿಹಾಸ ಮತ್ತು ವೈದ್ಯಕೀಯ ವಿವರಗಳನ್ನು ಪಡೆಯಬೇಕು. ಗುರುತಿನ ಚೀಟಿಯ ಜತೆಗೆ ಸ್ವಯಂ ದೃಢೀಕೃತ ಅರ್ಜಿಯನ್ನು ಭರ್ತಿ ಮಾಡಿಕೊಳ್ಳಬೇಕು
*ಶಾಪಿಂಗ್ ಮಾಲ್‌ಗಳ ಅಂಗಡಿಗಳಲ್ಲಿ ಸಾಧ್ಯವಾದಷ್ಟು ಕಡಿಮೆ ಗ್ರಾಹಕರಿರಬೇಕು. ಫುಡ್ ಕೋರ್ಟ್‌ಗಳಲ್ಲಿ ಶೇಕಡ 50ರಷ್ಟು ಮಾತ್ರ ಮಂದಿ ಇರಬೇಕು ಮತ್ತು ಸರದಿ ಸಾಲಿನ ವ್ಯವಸ್ಥೆ ಮಾಡಬೇಕು ಎಂದು ಸೂಚಿಸಲಾಗಿದೆ.
*ಮಾಲ್‌ಗಳಲ್ಲಿ ತಾಪಮಾನವನ್ನು 24ರಿಂದ 30ರಷ್ಟು ಮಾತ್ರ ಕಾಪಾಡಬೇಕು.
*ಧಾರ್ಮಿಕ ಸ್ಥಳಗಳಲ್ಲಿ ಶುಭಾಶಯ ಕೋರುವಾಗ ಅಂತರ ಕಾಪಾಡಬೇಕು. ಎಲ್ಲರೂ ಪ್ರತ್ಯೇಕ ನೆಲಹಾಸುಗಳನ್ನು ಬಳಸಬೇಕು. ಸಾಮೂಹಿಕವಾಗಿ ಹಾಡುವುದು ಮತ್ತು ಭಜನೆ ಮಾಡುವುದನ್ನು ನಿಷೇಧಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.