
ಬ್ಯಾಂಕ್
ನವದೆಹಲಿ: ಉಳಿತಾಯ ಖಾತೆಯಲ್ಲಿ ಕನಿಷ್ಠ ಮೊತ್ತ ಕಾಯ್ದುಕೊಳ್ಳದ ಕಾರಣಕ್ಕಾಗಿ ಸರ್ಕಾರಿ ಸ್ವಾಮ್ಯದ ಹಾಗೂ ಖಾಸಗಿ ವಲಯದ ಬ್ಯಾಂಕ್‌ಗಳು 2024–25ನೇ ಸಾಲಿನಲ್ಲಿ ₹4,817.96 ಕೋಟಿ ದಂಡ ವಿಧಿಸಿವೆ. ಬ್ಯಾಂಕ್‌ಗಳು ದಂಡ ವಸೂಲಿ ಮಾಡುವುದನ್ನು ಕೂಡಲೇ ನಿಲ್ಲಿಸಬೇಕು. ಈ ಸಂಬಂಧ ಆರ್‌ಬಿಐ ಹಾಗೂ ಹಣಕಾಸು ಸೇವಾ ಇಲಾಖೆಯು ಅಗತ್ಯ ಮಾರ್ಗಸೂಚಿ ಹೊರಡಿಸಬೇಕು ಎಂದು ಲೋಕಸಭೆಯ ಅರ್ಜಿಗಳ ಸಮಿತಿ ಶಿಫಾರಸು ಮಾಡಿದೆ.
‘ಬ್ಯಾಂಕ್‌ಗಳು ಗ್ರಾಹಕರಿಗೆ ದಂಡ ವಿಧಿಸುವ ಬದಲು ರಿವಾರ್ಡ್ ಪಾಯಿಂಟ್, ಶುಲ್ಕ ವಿನಾಯಿತಿ ನೀಡುವ ಮೂಲಕ ಕನಿಷ್ಠ ಮೊತ್ತ ಕಾಯ್ದುಕೊಳ್ಳುವಂತೆ ಪ್ರೋತ್ಸಾಹಿಸಬಹುದು. ಜತೆಗೆ, ಸ್ಥಿರ ಠೇವಣಿ ನಿರ್ವಹಣೆ ಮಾಡುವವರಿಗೆ ಹೆಚ್ಚಿನ ಬಡ್ಡಿದರ ನೀಡಬಹುದು’ ಎಂದು ಬಿಜೆಪಿ ಸಂಸದ ಚಂದ್ರಪ್ರಕಾಶ್ ಜೋಶಿ ನೇತೃತ್ವದ 15 ಸದಸ್ಯರ ಸಮಿತಿ ಸಲಹೆ ನೀಡಿದೆ.
‘ಸರ್ಕಾರಿ ಸ್ವಾಮ್ಯದ ಬಹುತೇಕ ಬ್ಯಾಂಕ್‌ಗಳು ಈ ದಂಡವನ್ನು ಕೈಬಿಡಲು ನಿರ್ಧರಿಸಿದ್ದರೂ, ಆರ್‌ಬಿಐ ಈ ಬಗ್ಗೆ ಯಾವುದೇ ನಿರ್ದೇಶನ ಅಥವಾ ಮಾರ್ಗಸೂಚಿ ಹೊರಡಿಸಿಲ್ಲ. ಖಾಸಗಿ ವಲಯದ ಬ್ಯಾಂಕ್‌ಗಳು ಇನ್ನೂ ದಂಡ ವಿಧಿಸುತ್ತಿವೆ. ಹೀಗಾಗಿ, ಎಲ್ಲ ಬ್ಯಾಂಕ್‌ಗಳು ಏಕರೂಪದ ನೀತಿಯನ್ನು ಅಳವಡಿಸಿಕೊಳ್ಳಬೇಕು. ಸಹಕಾರ ಬ್ಯಾಂಕ್ ಹಾಗೂ ಪ್ರಾದೇಶಿಕ ಗ್ರಾಮೀಣ ಬ್ಯಾಂಕ್ ಸೇರಿದಂತೆ ಎಲ್ಲ ಬ್ಯಾಂಕ್‌ಗಳಿಗೆ ಅಗತ್ಯ ಮಾರ್ಗಸೂಚಿ ರೂಪಿಸಬೇಕು’ ಎಂದು ಹೇಳಿದೆ.
ಬೆಂಗಳೂರಿನ ಬಂಬೂಪೆಕರ್ ಕಂಪನಿ ಮಾಲೀಕ ಪರಮೇಶ್ವರನ್ ಕೃಷ್ಣ ಅಯ್ಯರ್ ಅವರು ಸಲ್ಲಿಸಿದ್ದ ದೂರಿನ ಮೇರೆಗೆ ಈ ಶಿಫಾರಸು ಮಾಡಲಾಗಿದೆ.
‘ಉಳಿತಾಯ ಖಾತೆಯಲ್ಲಿ ಕನಿಷ್ಠ ಮೊತ್ತ ಕಾಯ್ದುಕೊಂಡ ಗ್ರಾಹಕರಿಗೆ ಸಿಗುವುದು ಅಲ್ಪ ಬಡ್ಡಿ ದರ ಮಾತ್ರ. ಒಂದು ವೇಳೆ, ಕನಿಷ್ಠ ಮೊತ್ತ ಕಾಯ್ದುಕೊಳ್ಳಲು ವಿಫಲವಾದರೆ ಬ್ಯಾಂಕ್ ವಿಧಿಸುವ ದಂಡವು ಬಡ್ಡಿಗಿಂತ 15ರಿಂದ 20 ಪಟ್ಟು ಹೆಚ್ಚಾಗಿರುತ್ತದೆ. ಬಡ್ಡಿ ಮತ್ತು ದಂಡದ ನಡುವಿನ ಈ ಭಾರಿ ವ್ಯತ್ಯಾಸವು ನ್ಯಾಯಸಮ್ಮತವಲ್ಲ. ಇದರಿಂದ ಗ್ರಾಹಕರ ಮೇಲೆ ಆರ್ಥಿಕ ಹೊರೆ ಬೀಳುತ್ತದೆ’ ಎಂದು ಅಯ್ಯರ್ ಅರ್ಜಿಯಲ್ಲಿ ತಿಳಿಸಿದ್ದರು.
ಈ ದೂರನ್ನು ಪರಿಶೀಲಿಸಿದ ಸಮಿತಿಯು ಲೋಕಸಭೆಯಲ್ಲಿ ಗುರುವಾರ ವರದಿಯನ್ನು ಮಂಡಿಸಿದೆ. ಬಿಹಾರದ ಮಹಿಳೆಯೊಬ್ಬರಿಗೆ ಮನರೇಗಾ (ಈಗ ವಿಬಿ–ಜಿ ರಾಮ್ ಜಿ) ಯೋಜನೆಯಡಿ ಬಂದಿದ್ದ ₹500 ಪೈಕಿ ₹440 ಮೊತ್ತವನ್ನು ಬ್ಯಾಂಕ್ ಕಡಿತಗೊಳಿಸಿರುವ ಹಾಗೂ ವ್ಯಕ್ತಿಯೊಬ್ಬರು ತನ್ನ ಮಗನ ಖಾತೆಯಲ್ಲಿ ಠೇವಣಿ ಇಟ್ಟಿದ್ದ ₹5 ಸಾವಿರ ಪೈಕಿ ₹2,500 ಮೊತ್ತವನ್ನು ಮತ್ತೊಂದು ಬ್ಯಾಂಕ್ ಕಡಿತಗೊಳಿಸಿರುವುದನ್ನು ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.