ನವದೆಹಲಿ: ಮಣಿಪುರದಲ್ಲಿ ರಾಷ್ಟ್ರಪತಿ ಆಳ್ವಿಕೆ ಜಾರಿ ಮಾಡಿರುವ ಕೇಂದ್ರ ಸರ್ಕಾರದ ಕ್ರಮಕ್ಕೆ ಲೋಕಸಭೆ ಗುರುವಾರ ಒಪ್ಪಿಗೆ ನೀಡಿತು. ವಕ್ಫ್ ತಿದ್ದುಪಡಿ ಮಸೂದೆಯ ಕುರಿತು ನಡೆದ ಸುಧೀರ್ಘ ಚರ್ಚೆ ಮತ್ತು ಮತದಾನದ ಬಳಿಕ ಮಣಿಪುರ ಕುರಿತ ನಿರ್ಣಯದ ಮೇಲೆ ಚರ್ಚೆ ನಡೆಯಿತು.
ಗುರುವಾರ ಮಧ್ಯರಾತ್ರಿ 2 ಗಂಟೆಗೆ ಮಣಿಪುರದ ಕುರಿತು 41 ನಿಮಿಷಗಳ ಚರ್ಚೆ ನಡೆಯಿತು. ಮಧ್ಯರಾತ್ರಿಯಲ್ಲಿ ಈ ಬಗ್ಗೆ ಚರ್ಚೆ ಕೈಗೆತ್ತಿಕೊಂಡ ಬಗ್ಗೆ ಪ್ರತಿ ಪಕ್ಷಗಳು ವಿರೋಧ ವ್ಯಕ್ತಪಡಿಸಿದವು. ಆದರೆ, ಸ್ಪೀಕರ್ ಅವರು ಚರ್ಚೆ ನಡೆಸಲು ಸೂಚಿಸಿದರು.
ಮಣಿಪುರ ಕುರಿತು ನಿರ್ಣಯವನ್ನು ಸರ್ವಾನುಮತದಿಂದ ಅಂಗೀಕರಿಸಲಾಯಿತು. ‘ಮಣಿಪುರದಲ್ಲಿ ಶಾಂತಿ ನೆಲೆಸಲು ಕೇಂದ್ರ ಸರ್ಕಾರವು ಮುಂದಾಗಬೇಕು. ಆದಷ್ಟು ಬೇಗ ಚುನಾವಣೆ ನಡೆಸಿ ಜನರಿಂದ ಆಯ್ಕೆಯಾದ ಸರ್ಕಾರ ರಚನೆಯಾಗಬೇಕು’ ಎಂದು ವಿರೋಧ ಪಕ್ಷಗಳು ಆಗ್ರಹಿಸಿದವು.
ಮಧ್ಯರಾತ್ರಿ 2 ಗಂಟೆಗೆ ಮಣಿಪುರ ಕುರಿತ ನಿರ್ಣಯವನ್ನು ಹೇರಿದ್ದು ಯಾಕಾಗಿ? ಕೇವಲ ಒಂದು ಗಂಟೆ ಚರ್ಚೆಗೆ ಅವಕಾಶ ನೀಡಲಾಯಿತು. ಆದರೆ ಗೃಹ ಸಚಿವರಿಗೆ ತಮ್ಮ ಸುಳ್ಳುಗಳ ಪ್ರವಾಹ ಹರಿಸಲು ಮಾಹಿತಿ ತಿರುಚಲು ಹೆಚ್ಚಿನ ಕಾಲಾವಕಾಶ ನೀಡಲಾಯಿತುಜೈರಾಮ್ ರಮೇಶ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ
‘ಬಹುಕೇತ ಶಾಂತಿ ಸ್ಥಾಪನೆ’
‘ಮಣಿಪುರದಲ್ಲಿ ಬಹುತೇಕ ಶಾಂತಿ ಸ್ಥಾಪನೆಯಾಗಿದೆ. ನಿರಾಶ್ರಿತರ ಶಿಬಿರಗಳಲ್ಲಿ ಇರುವವರ ಸ್ಥಿತಿ ಅಷ್ಟೇನು ಉತ್ತಮವಾಗಿಲ್ಲ. ರಾಜ್ಯದಲ್ಲಿ ಶಾಂತಿ ಸ್ಥಾಪಿಸಲು ಸರ್ಕಾರವು ಎಲ್ಲಾ ಕ್ರಮಗಳನ್ನು ಕೈಗೊಳ್ಳುತ್ತಿದೆ’ ಎಂದು ಗೃಹ ಸಚಿವ ಅಮಿತ್ ಶಾ ಹೇಳಿದರು. ‘1993ರಿಂದ 1998ರ ವರೆಗೆ ನಾಗಾ ಮತ್ತು ಕುಕಿ ಬುಡಕಟ್ಟು ಸಮುದಾಯಗಳ ನಡುವೆ ನಡೆದ ಸಂಘರ್ಷದಲ್ಲಿ 750 1997–98ರಲ್ಲಿ ಕುಕಿ ಹಾಗೂ ಪೈತೆ ಸಮುದಾಯಗಳ ನಡುವೆ ನಡೆದ ಸಂಘರ್ಷದಲ್ಲಿ 352 1993ರಲ್ಲಿ ಮೈತೇಯಿ ಹಾಗೂ ಪಂಗಾಲ್ ಸಮುದಾಯಗಳ ನಡುವೆ ನಡೆದ ಸಂಘರ್ಷದಲ್ಲಿ 100 ಮಂದಿ ಮೃತಪಟ್ಟಿದ್ದರು’ ಎಂದರು. ‘ಈ ಎಲ್ಲ ಸಂದರ್ಭಗಳಲ್ಲಿಯೂ ಅಂದಿನ ಪ್ರಧಾನಿ ಅಥವಾ ಗೃಹ ಸಚಿವರು ಮಣಿಪುರಕ್ಕೆ ಭೇಟಿ ನೀಡಲಿಲ್ಲ. ಸಂಘರ್ಷವು ಬಿಜೆಪಿ ಆಡಳಿತದಲ್ಲಿ ಮಾತ್ರವೇ ನಡೆಯುತ್ತಿವೆ ಎನ್ನುವಂಥ ಅಭಿಪ್ರಾಯವನ್ನು ವಿರೋಧ ಪಕ್ಷಗಳು ರೂಪಿಸಿವೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.