ADVERTISEMENT

‘ರಾಹುಲ್‌ ಗಾಂಧಿ ಪೌರತ್ವ ಪ್ರಶ್ನೆ ಗಂಭೀರ ವಿಚಾರ’

​ಪ್ರಜಾವಾಣಿ ವಾರ್ತೆ
Published 20 ಏಪ್ರಿಲ್ 2019, 19:15 IST
Last Updated 20 ಏಪ್ರಿಲ್ 2019, 19:15 IST
   

ನವದೆಹಲಿ: ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಅವರು ನಾಮಪತ್ರದ ಜತೆಗೆ ಸಲ್ಲಿಸಿದ ಪ್ರಮಾಣಪತ್ರದ ವಿಷಯದಲ್ಲಿ ಎದ್ದಿರುವ ಪೌರತ್ವ ವಿವಾದ ಮತ್ತು ವಿದ್ಯಾರ್ಹತೆ ಬಗೆಗಿನ ಆಕ್ಷೇಪಗಳು ಬಹಳ ಗಂಭೀರ. ಈ ಆಕ್ಷೇಪಗಳಿಗೆ ಉತ್ತರಿಸಲು ಕಾಂಗ್ರೆಸ್‌ ಪಕ್ಷವು ಸಮಯ ಕೇಳಿರುವುದು ಆಘಾತಕರ ಎಂದು ಬಿಜೆಪಿ ವಕ್ತಾರ ಜಿ.ವಿ.ಎಲ್‌ ನರಸಿಂಹ ರಾವ್‌ ಹೇಳಿದ್ದಾರೆ.

ಬ್ರಿಟನ್‌ನ ಕಂಪನಿಯೊಂದರಲ್ಲಿ ಹೂಡಿಕೆ ಮಾಡಿರುವುದಾಗಿ 2004ರಲ್ಲಿ ಸಲ್ಲಿಸಿದ್ದ ಪ್ರಮಾಣಪತ್ರದಲ್ಲಿ ರಾಹುಲ್‌ ಉಲ್ಲೇಖಿಸಿದ್ದರು. ಅದೇ ಕಂಪನಿಯ ದಾಖಲೆಗಳಲ್ಲಿ ರಾಹುಲ್‌ ಅವರು ಬ್ರಿಟನ್‌ ಪ್ರಜೆ ಎಂದು ಇದೆ ಎಂದು ನರಸಿಂಹ ಹೇಳಿದ್ದಾರೆ.

2004ರಿಂದ 2014ರವರೆಗಿನ ಚುನಾವಣೆಗಳಲ್ಲಿ ರಾಹುಲ್‌ ಸಲ್ಲಿಸಿದ್ದ ಪ್ರಮಾಣಪತ್ರಗಳಲ್ಲಿ ತಾಳೆಯಾಗದ ಅಂಶಗಳು ಇವೆ. ಈ ವಿಚಾರವನ್ನು ಮುಚ್ಚಿಡುವ ಪ್ರಯತ್ನ ನಡೆಯುತ್ತಿದೆ ಎಂದು ಅವರು ಆರೋಪಿಸಿದ್ದಾರೆ.

ADVERTISEMENT

ಕೇಂಬ್ರಿಜ್‌ ವಿಶ್ವವಿದ್ಯಾಲಯದಿಂದ ಅಭಿವೃದ್ಧಿ ಅರ್ಥಶಾಸ್ತ್ರದಲ್ಲಿ ಎಂ.ಫಿಲ್‌ ಪದವಿ ಪಡೆದಿರುವುದಾಗಿ ರಾಹುಲ್‌ ಈ ಹಿಂದೆ ಹೇಳಿದ್ದರು. ಬಳಿಕ, ಅದು ಅಭಿವೃದ್ಧಿ ಅಧ್ಯಯನ ಎಂದು ಬದಲಾಯಿಸಿದರು. ರಾಹುಲ್‌ ಪದವಿ ಪಡೆದಿದ್ದೇನೆ ಎಂದು ಹೇಳಿದ ವರ್ಷ ಆ ವಿಶ್ವವಿದ್ಯಾಲಯದಿಂದ ರಾಹುಲ್‌ ಗಾಂಧಿ ಎಂಬ ಹೆಸರಿನ ಯಾರೂ ಪದವಿ ಪಡೆದಿಲ್ಲ. ಆ ವರ್ಷ ರಾಹುಲ್‌ ವಿನ್ಸಿ ಎಂಬ ವ್ಯಕ್ತಿ ಪದವಿ ಪಡೆದಿದ್ದಾರೆ. ರಾಹುಲ್‌ ಗಾಂಧಿ ಅವರಿಗೆ ಬೇರೆಬೇರೆ ದೇಶಗಳಲ್ಲಿ ಭಿನ್ನ ಹೆಸರುಗಳು ಇವೆಯೇ ಎಂದೂ ನರಸಿಂಹ ಅವರು ಪ್ರಶ್ನಿಸಿದ್ದಾರೆ.

ಕಾಂಗ್ರೆಸ್‌ ಪಕ್ಷದ ಪ್ರಣಾಳಿಕೆಯ ರೀತಿಯಲ್ಲಿಯೇ ರಾಹುಲ್‌ ಅವರ ವಿದ್ಯಾರ್ಹತೆ ಕೂಡ ಪ್ರತಿ ಐದು ವರ್ಷಕ್ಕೊಮ್ಮೆ ಬದಲಾಗುತ್ತದೆಯೇ ಎಂದೂ ಅವರು ಕೇಳಿದ್ದಾರೆ.

ರಾಹುಲ್‌ ಅವರು ಬ್ರಿಟನ್‌ ಪ್ರಜೆ ಎಂದಾದರೆ ಅವರಿಗೆ ಲೋಕಸಭಾ ಚುನಾವಣೆಗೆ ಸ್ಪರ್ಧಿಸುವ ಹಕ್ಕು ಇಲ್ಲ. ಹಾಗಾಗಿ ಈ ಬಗ್ಗೆ ಗಮನ ಹರಿಸುವಂತೆ ಚುನಾವಣಾಧಿಕಾರಿಯನ್ನು ಕೋರಿದ್ದೇವೆ ಎಂದು ದೂರು ನೀಡಿರುವ ಪಕ್ಷೇತರ ಅಭ್ಯರ್ಥಿ ಧ್ರುವಲಾಲ್‌ ಅವರ ವಕೀಲ ರವಿಪ್ರಕಾಶ್‌ ಹೇಳಿದ್ದಾರೆ.

ಈ ಆಕ್ಷೇಪಗಳನ್ನು ನ್ಯಾಯಾಂಗದ ಮಾರ್ಗದಲ್ಲಿಯೇ ಎದುರಿಸಲಾಗುವುದು ಎಂದು ಅಮೇಠಿ ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಯೋಗೇಂದ್ರ ಮಿಶ್ರಾ ಹೇಳಿದ್ದಾರೆ.

ಕೋರ್ಟ್‌ನಲ್ಲಿ ಪ್ರಶ್ನಿಸಬೇಕು
ಪ್ರಮಾಣಪತ್ರದ ವಿಚಾರದಲ್ಲಿ ಚುನಾವಣಾಧಿಕಾರಿಯ ತೀರ್ಮಾನವೇ ಅಂತಿಮ. ಪ್ರಮಾಣಪತ್ರದಲ್ಲಿ ಸಲ್ಲಿಸಿದ ಮಾಹಿತಿಯನ್ನು ಚುನಾವಣಾಧಿಕಾರಿಯು ಪರಿಶೀಲಿಸುವಂತಿಲ್ಲ. ಆದರೆ, ಪ್ರಮಾಣಪತ್ರದ ಮಾಹಿತಿಯ ಬಗ್ಗೆ ಯಾರಾದರೂ ಆಕ್ಷೇಪ ಎತ್ತಿದರೆ ಅದನ್ನು ಅವರು ದಾಖಲಿಸಿಕೊಳ್ಳಬೇಕು.

ಪ್ರಮಾಣಪತ್ರದ ಬಗ್ಗೆ ಅನುಮಾನ ಇರುವವರು ಅದನ್ನು ನ್ಯಾಯಾಲಯದಲ್ಲಿ ಪ್ರಶ್ನಿಸಬಹುದು ಎಂದು ಆಯೋಗದ ಮೂಲಗಳು ಹೇಳಿವೆ.

ರಾಹುಲ್‌ ಪ್ರಮಾಣಪತ್ರಕ್ಕೆ ಸಂಬಂಧಿಸಿ ಸಲ್ಲಿಕೆಯಾಗಿರುವ ದೂರಿನ ಬಗ್ಗೆ ಮಾಹಿತಿ ನೀಡುವಂತೆ ಚುನಾವಣಾಧಿಕಾರಿಗೆ ಸೂಚಿಸಲಾಗಿದೆ ಎಂದು ಉತ್ತರ ಪ್ರದೇಶದ ಮುಖ್ಯ ಚುನಾವಣಾಧಿಕಾರಿ ಎಲ್‌. ವೆಂಕಟೇಶ್ವರುಲು ಹೇಳಿದ್ದಾರೆ.

**
‘ಇವು ಗಂಭೀರ ಆರೋಪಗಳು. ರಾಹುಲ್‌ ಅವರು ಭಾರತೀಯ ಪ್ರಜೆ ಹೌದೇ ಅಲ್ಲವೇ? ಅವರು ಯಾವತ್ತಾದರೂ ಬ್ರಿಟನ್‌ ಪ್ರಜೆಯಾಗಿದ್ದರೇ? ನಿಜ ಏನು ಎಂಬುದನ್ನು ಅವರು ತಿಳಿಸಬೇಕು.
-ಜಿ.ವಿ.ಎಲ್‌. ನರಸಿಂಹ ರಾವ್‌, ಬಿಜೆಪಿ ವಕ್ತಾರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.