ADVERTISEMENT

ಲೋಕಸಭೆ ಚುನಾವಣೆ: ಆರನೇ ಹಂತದಲ್ಲಿ ಶೇ. 61.14ರಷ್ಟು ಮತದಾನ

ಏಜೆನ್ಸೀಸ್
Published 12 ಮೇ 2019, 14:06 IST
Last Updated 12 ಮೇ 2019, 14:06 IST
   

ನವದೆಹಲಿ: ಲೋಕಸಭೆ ಚುನಾವಣೆಯ 6ನೇ ಹಂತದ ಮತದಾನದಲ್ಲಿ ಭಾನುವಾರ ಶೇ. 61.14ರಷ್ಟು ಮತದಾನವಾಗಿದೆ.

ದೇಶದಲ್ಲಿ ಸಾರ್ವತ್ರಿಕ ಚುನಾವಣೆಗಳು ನಡೆಯುತ್ತಿದ್ದು, ಏಳು ಹಂತಗಳಲ್ಲಿ ಮತದಾನ ಪ್ರಕ್ರಿಯೆ ನಡೆಯುತ್ತಿದೆ. ಈಗಾಗಲೇ 5 ಹಂತಗಳ ಮತದಾನ ಪೂರ್ಣಗೊಂಡಿದ್ದು, ಭಾನುವಾರ (ಮೇ.12) ಆರನೇ ಹಂತದ ಮತದಾನ ಪ್ರಕ್ರಿಯೆ ನಡೆಯಿತು. ಆರನೇ ಹಂತದ ವ್ಯಾಪ್ತಿಗೆ ಒಳಪಡುವ ಕ್ಷೇತ್ರಗಳಲ್ಲಿ ಒಟ್ಟಾರೆ 61.14ರಷ್ಟು ಮತದಾನವಾಗಿದೆ ಎಂದು ಚುನಾವಣೆ ಆಯೋಗ ತಿಳಿಸಿದೆ.

ಪಶ್ಚಿಮ ಬಂಗಾಳದಲ್ಲಿ 80.16, ದೆಹಲಿ–56.11, ಹರಿಯಾಣ–62.91, ಉತ್ತರ ಪ್ರದೇಶ 53.37, ಬಿಹಾರ–59.29, ಜಾರ್ಖಂಡ್‌–64.46, ಮಧ್ಯಪ್ರದೇಶ 60.40ರಷ್ಟು ಮತದಾನವಾಗಿದೆ.

ADVERTISEMENT

ಆರನೇ ಹಂತದ ಮತದಾನದ ವ್ಯಾಪ್ತಿಗೆ ಪ್ರತಿಷ್ಠಿತ ರಾಜಕೀಯ ನಾಯಕರ ಕ್ಷೇತ್ರಗಳೂ ಒಳಪಟ್ಟಿದ್ದವು. ಪ್ರಮುಖನಾಯಕರ ಮತದಾನವೂ ಈ ಹಂತದಲ್ಲಿಯೇ ನಡೆಯಿತು. ದೆಹಲಿ ಮಾಜಿ ಮುಖ್ಯಮಂತ್ರಿ ಶೀಲಾ ದೀಕ್ಷಿತ್‌, ಒಲಿಂಪಿಕ್‌ ಪದಕ ವಿಜೇತ ಬಾಕ್ಸರ್‌ ವಿಜೇಂದ್ರ ಸಿಂಗ್‌, ಕೇಂದ್ರ ಸಚಿವ ಹರ್ಷವರ್ಧನ್‌, ಮಾಜಿ ಕ್ರಿಕೆಟರ್‌ ಗೌತಮ್‌ ಗಂಭೀರ್‌ ಅವರು ಸ್ಪರ್ಧಿಸುತ್ತಿರುವ ಕ್ಷೇತ್ರಗಳಿಗೂ ಇಂದು ಮತದಾನ ನಡೆಯಿತು.

ಇಂದು ಮಾಜಿ ರಾಷ್ಟಪತಿ ಪ್ರಣಾವ್‌ ಮುಖರ್ಜಿ,ವಿರಾಟ್‌ ಕೊಹ್ಲಿ, ಗೌತಮ್‌ ಗಂಭೀರ್‌, ರಾಹುಲ್‌ ಗಾಂಧಿ, ಪ್ರಿಯಾಂಕಾ ಗಾಂಧಿ, ಸೋನಿಯಾ ಗಾಂಧಿ ಸೇರಿದಂತೆ ಹಲವು ಗಣ್ಯರು ಮತ ಚಲಾವಣೆ ಮಾಡಿದರು.

ಇನ್ನು ಹಿಂದಿನ ಮತದಾನಗಳ ವೇಳೆ ನಡೆದಿದ್ದ ಘರ್ಷಣೆಗಳಂತೆಯೇ ಆರನೇ ಹಂತದ ಮತದಾನದ ವೇಳೆಯೂ ಘರ್ಷಣೆಗಳು ನಡೆದ ವರದಿಯಾಗಿದೆ. ಪಶ್ಚಿಮ ಬಂಗಾಳದಿಂದಲೇ ಹೆಚ್ಚಿನ ಪ್ರಕರಣಗಳು ಕೇಳಿಬಂದಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.