ADVERTISEMENT

17 ಕ್ಷೇತ್ರಗಳಿಗೆ ಅಭ್ಯರ್ಥಿ ಘೋಷಿಸಿದ ಶಿವಸೇನಾ: MVA ಮೈತ್ರಿಯಲ್ಲಿ ಬಿಕ್ಕಟ್ಟು?

ಸ್ಥಾನ ಹಂಚಿಕೆ ಅಂತಿಮವಾಗುವ ಮುನ್ನವೇ ಅಭ್ಯರ್ಥಿಗಳ ಘೋಷಿಸಿದ ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನಾ

​ಪ್ರಜಾವಾಣಿ ವಾರ್ತೆ
Published 27 ಮಾರ್ಚ್ 2024, 14:02 IST
Last Updated 27 ಮಾರ್ಚ್ 2024, 14:02 IST
ಎಂವಿಎ ಮೈತ್ರಿಕೂಟದ ಸಭೆ
ಎಂವಿಎ ಮೈತ್ರಿಕೂಟದ ಸಭೆ   ಪಿಟಿಐ

ಮುಂಬೈ: ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನಾ (ಯುಬಿಟಿ) ಬುಧವಾರ ಮಹಾರಾಷ್ಟ್ರದ 17 ಲೋಕಸಭಾ ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಘೋಷಿಸುವುದರೊಂದಿಗೆ ಮಹಾವಿಕಾಸ ಅಘಾಡಿ (ಎಂವಿಎ) ಕೂಟದಲ್ಲಿ ಬಿಕ್ಕಟ್ಟು ತಲೆದೋರಿದೆ. ವಿರೋಧ ಪಕ್ಷಗಳ ಎಂವಿಎ ಕೂಟದಲ್ಲಿರುವ ಎನ್‌ಸಿಪಿ (ಶರದ್‌ ಪವಾರ್ ಬಣ), ಕಾಂಗ್ರೆಸ್ ಜತೆಗೆ ಸ್ಥಾನ ಹಂಚಿಕೆ ಅಂತಿಮವಾಗುವ ಮುನ್ನವೇ ಶಿವಸೇನಾ (ಯುಬಿಟಿ) ಉಮೇದುವಾರರನ್ನು ಘೋಷಿಸಿದೆ.

ಮುಂಬೈನ ನಾಲ್ಕು ಕ್ಷೇತ್ರಗಳಿಗೆ ಶಿವಸೇನಾ (ಯುಬಿಟಿ) ಉಮೇದುವಾರರನ್ನು ಘೋಷಿಸಿದೆ. ಅವುಗಳಲ್ಲಿ ಸಂಜಯ್ ನಿರುಪಮ್ ಕಣ್ಣು ನೆಟ್ಟಿದ್ದ ಮುಂಬೈ ವಾಯವ್ಯ ಕ್ಷೇತ್ರ ಹಾಗೂ ಮುಂಬೈ ಕಾಂಗ್ರೆಸ್ ಅಧ್ಯಕ್ಷೆ ಪ್ರೊ.ವರ್ಷಾ ಗಾಯಕವಾಡ್‌ ಅವರು ಸ್ಪರ್ಧಿಸಬೇಕು ಎಂದು ಬಯಸಿದ್ದ ಮುಂಬೈ ದಕ್ಷಿಣ ಮಧ್ಯ ಕ್ಷೇತ್ರಗಳೂ ಸೇರಿವೆ. ಸಾಂಗ್ಲಿ, ಠಾಣೆ, ರತ್ನಗಿರಿ ಸಿಂಧುದುರ್ಗ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಇಂಥ ಬಿಕ್ಕಟ್ಟು ಉಂಟಾಗಿದೆ. 

‘ಕೆಲವು ಕ್ಷೇತ್ರಗಳ ಕುರಿತು ಇನ್ನೂ ಮಾತುಕತೆ ಅಂತಿಮಗೊಂಡಿರಲಿಲ್ಲ. ಅಷ್ಟರಲ್ಲಿಯೇ ಶಿವಸೇನಾ (ಯುಬಿಟಿ) ಅಭ್ಯರ್ಥಿಗಳನ್ನು ಘೋಷಿಸಿದೆ. ಇದು ಸರಿಯಲ್ಲ’ ಎಂದು ಕಾಂಗ್ರೆಸ್ ಸಂಸದೀಯ ಪಕ್ಷದ ನಾಯಕ ಬಾಲಾಸಾಹೇಬ್ ಥೋರಾಟ್ ಆಕ್ಷೇಪಿಸಿದ್ದಾರೆ. ಶಿವಸೇನಾ (ಯುಬಿಟಿ) ಮೈತ್ರಿ ಧರ್ಮ ‍ಪಾಲಿಸಿದ್ದರೆ ಸರಿಯಾಗಿರುತ್ತಿತ್ತು’ ಎಂದು ವಿಧಾನಸಭೆಯ ವಿರೋಧ ಪಕ್ಷದ ನಾಯಕ ವಿಜಯ್ ವಡೆಟ್ಟೀವಾರ್‌ ಹೇಳಿದ್ದಾರೆ.

ADVERTISEMENT

ಈ ನಡುವೆ, ಕಾಂಗ್ರೆಸ್ ಮುಖಂಡ ಹಾಗೂ ಲೋಕಸಭಾ ಚುನಾವಣೆಯ ಟಿಕೆಟ್ ಆಕಾಂಕ್ಷಿ ಸಂಜಯ್ ನಿರುಪಮ್ ಅವರು ಶಿವಸೇನಾ (ಯುಬಿಟಿ) ಮತ್ತು ಸ್ಥಾನ ಹಂಚಿಕೆ ಮಾತುಕತೆಯಲ್ಲಿ ತೊಡಗಿದ್ದ ತಮ್ಮದೇ ಪಕ್ಷದ ಮುಖಂಡರ ವಿರುದ್ಧ ಬಹಿರಂಗವಾಗಿ ವಾಗ್ದಾಳಿ ನಡೆಸಿದ್ದು, ಪಕ್ಷಕ್ಕೆ ಎಚ್ಚರಿಕೆಯ ಸಂದೇಶ ರವಾನಿಸಿದ್ದಾರೆ.

‘ನಾನು ಹೆಚ್ಚೆಂದರೆ ಇನ್ನು ಒಂದು ವಾರ ಕಾದು ನೋಡುತ್ತೇನೆ. ನಂತರ ನನ್ನ ನಿರ್ಧಾರ ಪ್ರಕಟಿಸುತ್ತೇನೆ. ನಾನು ಆಯ್ಕೆಗಳೇ ಇಲ್ಲದ ಸ್ಥಿತಿಯಲ್ಲಿಲ್ಲ. ಎಲ್ಲ ಆಯ್ಕೆಗಳೂ ನನಗೆ ಮುಕ್ತವಾಗಿವೆ’ ಎಂದು ಸಂಜಯ್ ನಿರುಪಮ್ ತಮ್ಮ ಪಕ್ಷದ ವರಿಷ್ಠರಿಗೆ ಗಡುವು ನೀಡಿದ್ದಾರೆ.

ಮುಖ್ಯಮಂತ್ರಿ ಶಿಂದೆ ಬಣದಲ್ಲಿರುವ ಗಜಾನನ ಕೀರ್ತಿಕರ್ ಅವರ ಮಗ ಅಮೋಲ್ ಕೀರ್ತಿಕರ್ ಅವರಿಗೆ ಶಿವಸೇನಾ (ಯುಬಿಟಿ) ಉತ್ತರ ಮುಂಬೈನ ಟಿಕೆಟ್ ನೀಡಿರುವುದನ್ನೂ ಸಂಜಯ್ ನಿರುಪಮ್ ಟೀಕಿಸಿದ್ದಾರೆ. ಕೀರ್ತಿಕರ್ ಅವರನ್ನು ‘ಖಿಚಡಿ ಚೋರ್’ ಎಂದು ಕರೆದಿರುವ ಸಂಜಯ್, ‘ಶಿವಸೇನೆಯು ಖಿಚಡಿ ಚೋರ್‌ಗೆ ಟಿಕೆಟ್ ನೀಡಿದೆ. ನಾವು ಖಿಚಡಿ ಚೋರ್‌ ಅಭ್ಯರ್ಥಿಗಳಿಗಾಗಿ ಕೆಲಸ ಮಾಡುವುದಿಲ್ಲ’ ಎಂದು ಅವರು ವಾಗ್ದಾಳಿ ನಡೆಸಿದ್ದಾರೆ. ‘ಮುಂಬೈನಲ್ಲಿ ಆರು ಲೋಕಸಭಾ ಸ್ಥಾನಗಳಿದ್ದು, ಐದರಲ್ಲಿ ಶಿವಸೇನಾದ ಅಭ್ಯರ್ಥಿಗಳೇ ಸ್ಪರ್ಧಿಸುತ್ತಿದ್ದಾರೆ. ದಾನ ಮಾಡಿದಂತೆ ಒಂದೇ ಒಂದು ಸ್ಥಾನವನ್ನು ಕಾಂಗ್ರೆಸ್‌ಗೆ ಬಿಟ್ಟುಕೊಟ್ಟಿದ್ದಾರೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇನ್ನೊಂದೆಡೆ, ವಿಧಾನ ಪರಿಷತ್‌ನ ವಿರೋಧ ಪಕ್ಷದ ನಾಯಕ ಅಂಬಾದಾಸ್ ದಾನ್ವೆ ತಮಗೆ ಔರಂಗಾಬಾದ್‌ ಕ್ಷೇತ್ರದ ಟಿಕೆಟ್ ನೀಡದಿರುವುದಕ್ಕೆ ಶಿವಸೇನಾ (ಯುಬಿಟಿ) ವಿರುದ್ಧ ಅಸಮಾಧಾನಗೊಂಡಿದ್ದಾರೆ ಎನ್ನಲಾಗಿದೆ. ಅವರ ಬದಲಿಗೆ ಪಕ್ಷವು ಐದು ಬಾರಿಯ ಸಂಸದ, ಕಳೆದ ಬಾರಿ ಪರಾಭವಗೊಂಡಿದ್ದ ಚಂದ್ರಕಾಂತ್ ಖೈರೆ ಅವರಿಗೆ ಟಿಕೆಟ್ ನೀಡಿದೆ. ಇದರಿಂದಾಗಿ ದಾನ್ವೆ ಅವರು ಬಿಜೆಪಿ ಅಥವಾ ಏಕನಾಥ್ ಶಿಂದೆ ನೇತ್ವತ್ವದ ಶಿವಸೇನಾ ಸೇರಲಿದ್ದಾರೆ ಎನ್ನುವ ಸುದ್ದಿ ಹಬ್ಬಿದೆ. ಆದರೆ, ದಾನ್ವೆ ಅದನ್ನು ನಿರಾಕರಿಸಿದ್ದಾರೆ.

ಎಂವಿಎ ಭಾಗವಲ್ಲ ಎಂದ ವಿಬಿಎ

ಅಕೋಲಾ: ವಂಚಿತ್ ಬಹುಜನ್ ಅಘಾಡಿ (ವಿಬಿಎ) ಮುಖ್ಯಸ್ಥ ಪ್ರಕಾಶ್ ಅಂಬೇಡ್ಕರ್ ಬುಧವಾರ ಲೋಕಸಭಾ ಚುನಾವಣೆಗಾಗಿ ಅಭ್ಯರ್ಥಿಗಳ ಪಟ್ಟಿಯನ್ನು ಘೋಷಣೆ ಮಾಡುವ ಮೂಲಕ ತಮ್ಮ ಪಕ್ಷವು ಎಂವಿಎ ಕೂಟದ ಭಾಗವಲ್ಲ ಎನ್ನುವುದರ ಸೂಚನೆ ನೀಡಿದ್ದಾರೆ. 

ಪಟ್ಟಿ ಬಿಡುಗಡೆಗೊಳಿಸಿ ಮಾತನಾಡಿದ ಪ್ರಕಾಶ್ ಅಂಬೇಡ್ಕರ್ ‘ಎಂವಿಎ ಕೂಟದಲ್ಲಿರುವ ಕಾಂಗ್ರೆಸ್ ಎನ್‌ಸಿಪಿ (ಶರದ್‌ಪವಾರ್ ಬಣ) ಮತ್ತು ಶಿವಸೇನಾ (ಯುಬಿಟಿ) ತಮ್ಮ ಪಕ್ಷವನ್ನು ವಂಶ ಪಾರಂಪರ್ಯ ರಾಜಕಾರಣವನ್ನು ಉತ್ತೇಜಿಸುವುದಕ್ಕೆ ಬಳಸಿಕೊಳ್ಳುತ್ತಿವೆ’ ಎಂದು ಆರೋಪಿಸಿದರು.

ಚುನಾವಣೆಯಲ್ಲಿ ಮುಸ್ಲಿಮರು, ಜೈನರು ಸೇರಿದಂತೆ ಹಿಂದುಳಿದ ಸಮುದಾಯದವರು ಹಾಗೂ ಸಮಾಜದ ಬಡ ವರ್ಗಗಳಿಗೆ ಪ್ರಾಶಸ್ತ್ಯ ನೀಡಲು ತಮ್ಮ ಪಕ್ಷದ ರಾಜ್ಯ ಸಮಿತಿಯು ನಿರ್ಧರಿಸಿರುವುದಾಗಿ ಪ್ರಕಾಶ್ ಅಂಬೇಡ್ಕರ್ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.