ADVERTISEMENT

ಪ್ರಧಾನಿ ಮೋದಿ ವಿರುದ್ಧ ಸ್ಪರ್ಧಿಸಲು ಇಷ್ಟವಿದೆ ಎಂದ ಶತ್ರುಘ್ನ ಸಿನ್ಹಾ

ಲೋಕಸಭೆ ಚುನಾವಣೆ

ಪಿಟಿಐ
Published 27 ಏಪ್ರಿಲ್ 2019, 6:15 IST
Last Updated 27 ಏಪ್ರಿಲ್ 2019, 6:15 IST
ಶತ್ರುಘ್ನ ಸಿನ್ಹಾ
ಶತ್ರುಘ್ನ ಸಿನ್ಹಾ   

ನವದೆಹಲಿ:ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಸ್ಪರ್ಧಿಸಲು ಇಷ್ಟವಿದೆ ಎಂದು ಇತ್ತೀಚೆಗೆ ಬಿಜೆಪಿ ತೊರೆದು ಕಾಂಗ್ರೆಸ್ ಸೇರಿರುವ ಹಿರಿಯ ನಾಯಕ ಶತ್ರುಘ್ನ ಸಿನ್ಹಾ ಹೇಳಿದ್ದಾರೆ.

‘ಅವರನ್ನು (ಬಿಜೆಪಿ) ಮೂರ್ಖರ ಸ್ವರ್ಗದಲ್ಲಿ ವಾಸಿಸಲು ಬಿಡಿ. ಪಟ್ನಾ ಸಾಹೀಬ್‌ನ ಮತದಾರರು ಅವರಿಗೆ ಪಾಠ ಕಲಿಸಲಿದ್ದಾರೆ’ ಎಂದು ಅವರು ಹೇಳಿದ್ದಾರೆ.

‘ಮೋದಿ ಅವರು ಪಟ್ನಾ ಸಾಹೀಬ್ ಕ್ಷೇತ್ರದಿಂದಲೂ ಸ್ಪರ್ಧಿಸಲಿದ್ದಾರೆ ಎಂಬ ವದಂತಿ ಕೆಲ ದಿನಗಳಿಂದ ಹರಿದಾಡುತ್ತಿದೆ. ನಂತರ ಏನಾಯಿತು? ಆ ಕ್ಷೇತ್ರದಲ್ಲಿ ಅವರ ವಿರುದ್ಧ ಸ್ಪರ್ಧಿಸಲು ನನಗೆ ಇಷ್ಟವಿದೆ’ ಎಂದುಶತ್ರುಘ್ನ ಹೇಳಿದ್ದಾರೆ.

ಪಟ್ನಾ ಸಾಹೀಬ್‌ನ ಹಾಲಿ ಸಂಸದರಾಗಿರುವ ಸಿನ್ಹಾಗೆ ಈ ಬಾರಿ ಬಿಜೆಪಿ ಟಿಕೆಟ್‌ ನಿರಾಕರಿಸಿದೆ. ನಂತರ ಪಕ್ಷ ತೊರೆದಿರುವ ಅವರು ಲೋಕಸಭಾ ಚುನಾವಣೆಯಲ್ಲಿ ಇದೇ ಕ್ಷೇತ್ರದಿಂದ ಕಾಂಗ್ರೆಸ್‌ನಿಂದ ಸ್ಪರ್ಧಿಸುತ್ತಿದ್ದಾರೆ. ಪಟ್ನಾ ಸಾಹೀಬ್‌ನಲ್ಲಿ ಬಿಜೆಪಿಯು ಕೇಂದ್ರ ಸಚಿವ ರವಿಶಂಕರ್ ಪ್ರಸಾದ್ ಅವರನ್ನು ಕಣಕ್ಕಿಳಿಸಿದೆ.

ಮೋದಿ ಅವರನ್ನು ಟೀಕಿಸುವ ಮೂಲಕ ಸಿನ್ಹಾ ಹಲವು ಬಾರಿ ಸುದ್ದಿಯಾಗಿದ್ದಾರೆ. ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹಲವು ದಿನಗಳ ಹಿಂದೆ ಕೋಲ್ಕತ್ತದಲ್ಲಿ ಆಯೋಜಿಸಿದ್ದ ಪ್ರತಿಪಕ್ಷಗಳ ರ್‍ಯಾಲಿಯಲ್ಲಿ ಭಾಗವಹಿಸುವ ಮೂಲಕ ಬಿಜೆಪಿಯ ಕೆಂಗಣ್ಣಿಗೆ ಗುರಿಯಾಗಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.