ನವದೆಹಲಿ: ರಾಮನನ್ನು 'ಪೌರಾಣಿಕ ವ್ಯಕ್ತಿ' ಎಂದು ಉಲ್ಲೇಖಿಸಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಿರುದ್ಧ ಬಿಜೆಪಿ ನಾಯಕರು ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಅಮೆರಿಕದ ಬ್ರೌನ್ ವಿಶ್ವವಿದ್ಯಾಲಯದದಲ್ಲಿ ನಡೆದ ಸಂವಾದದಲ್ಲಿ ರಾಹುಲ್ ಗಾಂಧಿ ಈ ಹೇಳಿಕೆ ನೀಡಿದ್ದರು. ರಾಹುಲ್ ಹೇಳಿಕೆಗೆ ತೀಕ್ಣವಾಗಿ ಪ್ರತಿಕ್ರಿಯಿಸಿರುವ ಬಿಜೆಪಿ, ಕಾಂಗ್ರೆಸ್ ರಾಮ ವಿರೋಧಿ. ಹಿಂದೂಗಳನ್ನು ಮತ್ತು ಶ್ರೀರಾಮನನ್ನು ಅವಮಾನಿಸುವುದು ಅದರ ಚಾಳಿ ಎಂದು ಜರಿದಿದೆ.
ಬ್ರೌನ್ ವಿಶ್ವವಿದ್ಯಾಲಯದ ವ್ಯಾಟ್ಸನ್ ಇನ್‌ಸ್ಟಿಟ್ಯೂಟ್ ಫಾರ್ ಇಂಟರ್ ನ್ಯಾಷನಲ್ ಆ್ಯಂಡ್ ಪಬ್ಲಿಕ್ ಅಫೇರ್ಸ್‌ನಲ್ಲಿ ನಡೆದ ಸಂವಾದದಲ್ಲಿ ರಾಹುಲ್ ಗಾಂಧಿ ಅವರಿಗೆ ಒಂದು ಪ್ರಶ್ನೆ ಕೇಳಲಾಯಿತು.
'ಹಿಂದೂ ರಾಷ್ಟ್ರೀಯತೆಯಿಂದ ಪ್ರಾಬಲ್ಯ ಹೊಂದಿರುವ ಯುಗದಲ್ಲಿ ಎಲ್ಲಾ ಸಮುದಾಯಗಳನ್ನು ಒಳಗೊಳ್ಳುವ ಜಾತ್ಯತೀತ ರಾಜಕೀಯವನ್ನು ಹೇಗೆ ರೂಪಿಸಬೇಕು'? ಎಂದು. ಇದಕ್ಕೆ ಉತ್ತರಿಸಿದ ರಾಹುಲ್ ಗಾಂಧಿ, ಭಾರತದ ಯಾವುದೇ ಮಹಾನ್ ಸಮಾಜ ಸುಧಾರಕರು ಮತ್ತು ರಾಜಕೀಯ ಚಿಂತಕರು ಮತಾಂಧರಲ್ಲ ಎಂದು ಹೇಳಿದ್ದರು.
'ನೀವು ಎಲ್ಲಾ ಮಹಾನ್ ಭಾರತೀಯ ಸಮಾಜ ಸುಧಾರಕರು ಮತ್ತು ರಾಜಕೀಯ ಚಿಂತಕರನ್ನು ನೋಡಿದರೆ, ಬುದ್ಧ, ಗುರುನಾನಕ್, ಕರ್ನಾಟಕದಲ್ಲಿ ಬಸವ, ಕೇರಳದಲ್ಲಿ ನಾರಾಯಣ ಗುರು, ಜ್ಯೋತಿರಾವ್ ಫುಲೆ, ಮಹಾತ್ಮ ಗಾಂಧಿ ಮತ್ತು ಬಿ.ಆರ್. ಅಂಬೇಡ್ಕರ್.. ಇವರಲ್ಲಿ ಯಾರೂ ಮತಾಂಧರಲ್ಲ. ಇವರು ಜನರನ್ನು ಪ್ರತ್ಯೇಕಿಸಲು ಬಯಸುತ್ತಿರಲಿಲ್ಲ. ಇವರೆಲ್ಲರ ಧ್ವನಿಗಳು ನಮ್ಮ ಸಂವಿಧಾನದಲ್ಲಿವೆ, ಅವರು ಒಂದೇ ಮಾತನ್ನು ಹೇಳುತ್ತಿದ್ದರು. ಎಲ್ಲರನ್ನೂ ನಿಮ್ಮೊಂದಿಗೆ ಕೊಂಡೊಯ್ಯಿರಿ ಎಂದು'.
'ನಮ್ಮ ಎಲ್ಲಾ ಪೌರಾಣಿಕ ವ್ಯಕ್ತಿಗಳು, ಭಗವಾನ್ ರಾಮನು ಆ ರೀತಿಯವನಾಗಿದ್ದನು, ಅವನು ಕ್ಷಮಿಸುವ ಗುಣವುಳ್ಳವನಾಗಿದ್ದನು. ಜತೆಗೆ ಕರುಣಾಮಯಿಯಾಗಿದ್ದನು. ಬಿಜೆಪಿ ಹೇಳುವುದನ್ನು ಹಿಂದೂ ಕಲ್ಪನೆ ಎಂದು ನಾನು ನಂಬುವುದಿಲ್ಲ. ಹಿಂದೂ ಕಲ್ಪನೆ ಬಹುತ್ವ, ಆಲಿಂಗನ, ಪ್ರೀತಿ, ಸಹಿಷ್ಣುತೆ ಮತ್ತು ಮುಕ್ತ ಎಂದು ನಾನು ನಂಬುತ್ತೇನೆ'.
'ಪ್ರತಿಯೊಂದು ರಾಜ್ಯ ಮತ್ತು ಸಮುದಾಯದಲ್ಲಿ ಆ ವಿಚಾರಗಳ ಪರವಾಗಿ ನಿಂತ, ಆ ವಿಚಾರಗಳಿಗಾಗಿ ಬದುಕಿದ ಮತ್ತು ಆ ವಿಚಾರಗಳಿಗಾಗಿ ಮಡಿದ ಜನರಿದ್ದಾರೆ. ಗಾಂಧೀಜಿ ಅವರಲ್ಲಿ ಒಬ್ಬರು. ಭಯದಿಂದ ಜನರ ವಿರುದ್ಧ ದ್ವೇಷ ಮತ್ತು ಕೋಪ ಬರುತ್ತದೆ. ನೀವು ಭಯಪಡದಿದ್ದರೆ, ನೀವು ಯಾರನ್ನೂ ದ್ವೇಷಿಸುವುದಿಲ್ಲ' ಎಂದೂ ಅವರು ಹೇಳಿದ್ದರು.
ಸಾಮಾಜಿಕ ಮಾಧ್ಯಮದಲ್ಲಿ ಸಂದರ್ಶನದ ಕ್ಲಿಪ್ ಅನ್ನು ಹಂಚಿಕೊಂಡ ಬಿಜೆಪಿ ನಾಯಕರು, ಹಿಂದೂಗಳನ್ನು ಮತ್ತು ಶ್ರೀರಾಮನನ್ನು ಅವಮಾನಿಸುವುದು ಕಾಂಗ್ರೆಸ್ ಪಕ್ಷದ ಚಾಳಿ ಎಂದು ಕಿಡಿಕಾರಿದ್ದಾರೆ.
'ಹಿಂದೂಗಳನ್ನು ಮತ್ತು ಶ್ರೀರಾಮನನ್ನು ಅವಮಾನಿಸುವುದು ಕಾಂಗ್ರೆಸ್ ಪಕ್ಷದ ಚಾಳಿ. ಶ್ರೀರಾಮನ ಅಸ್ತಿತ್ವವನ್ನು ಅಫಿಡವಿಟ್ ಮೂಲಕ ತಿರಸ್ಕರಿಸಿದವರು, ಶ್ರೀರಾಮ ಮಂದಿರ ನಿರ್ಮಾಣವನ್ನು ವಿರೋಧಿಸಿದವರು, ಈಗ ರಾಹುಲ್ ಗಾಂಧಿ ರಾಮನನ್ನು ಪೌರಾಣಿಕ ವ್ಯಕ್ತಿ ಎಂದು ಹೇಳಿದ್ದಾರೆ. ರಾಹುಲ್ ಗಾಂಧಿ ಮತ್ತು ಸೋನಿಯಾ ಗಾಂಧಿ ರಾಮ ಮಂದಿರ ಪ್ರತಿಷ್ಠಾಪನೆಗೆ ಹಾಜರಾಗಲಿಲ್ಲ. ಇದು ಅವರ ಶ್ರೀರಾಮ ವಿರೋಧಿ ಮತ್ತು ಹಿಂದೂ ವಿರೋಧಿ ಮನಸ್ಥಿತಿಯನ್ನು ತೋರಿಸುತ್ತದೆ. ಜನ ಇದನ್ನು ಕ್ಷಮಿಸುವುದಿಲ್ಲ' ಎಂದು ಬಿಜೆಪಿ ವಕ್ತಾರ ಶೆಹಜಾದ್ ಪೂನವಾಲಾ ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.
'ಪ್ರಭು ಶ್ರೀ ರಾಮ ಕೇವಲ ಪೌರಾಣಿಕ ವ್ಯಕ್ತಿ ಎಂಬುವುದು ಕಾಂಗ್ರೆಸ್ಸಿನ ಮನಸ್ಥಿತಿ. ಹಿಂದೂಗಳ ನಂಬಿಕೆಯನ್ನು ಅಣಕಿಸುವುದು, ಶ್ರೀರಾಮನನ್ನು ಪ್ರಶ್ನಿಸುವುದು.. ಇವು ಕಾಂಗ್ರೆಸ್ ಹಿಂದೂ ವಿರೋಧಿಯಾಗಿದೆ ಎಂಬುದನ್ನು ಸ್ಪಷ್ಟವಾಗಿ ಹೇಳುತ್ತಿವೆ' ಎಂದು ಬಿಜೆಪಿಯ ಮತ್ತೊಬ್ಬ ವಕ್ತಾರ ಪ್ರದೀಪ್ ಭಂಡಾರಿ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.