ಮುಂಬೈ: ಮಹಾರಾಷ್ಟ್ರದಲ್ಲಿ ಲವ್ ಜಿಹಾದ್ ಪ್ರಕರಣಗಳಿಗೆ ಸಂಬಂಧಿಸಿದ ಕಾನೂನಾತ್ಮಕ ಹಾಗೂ ತಾಂತ್ರಿಕ ವಿಚಾರಗಳ ಕುರಿತು ಪರಿಶೀಲನೆಗಾಗಿ ದೇವೇಂದ್ರ ಫಡಣವೀಸ್ ನೇತೃತ್ವದ ಸರ್ಕಾರವು ಸಮಿತಿಯನ್ನು ರಚಿಸಿದೆ. ಇದಕ್ಕೆ ವಿರೋಧ ಪಕ್ಷಗಳಿಂದ ಟೀಕೆ ವ್ಯಕ್ತವಾಗಿದೆ.
ಪೊಲೀಸ್ ಮಹಾ ನಿರ್ದೇಶಕರ (ಡಿಜಿಪಿ) ನೇತೃತ್ವದ ಸಮಿತಿಯಲ್ಲಿ ಏಳು ಮಂದಿ ಸದಸ್ಯರಿದ್ದಾರೆ.
ಕಾಕತಾಳೀಯ ಎಂಬಂತೆ, ಫಡಣವೀಸ್ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ನವದೆಹಲಿಯಲ್ಲಿ ಭೇಟಿಯಾಗಿ ಮಾತುಕತೆ ನಡೆಸಿದ ಬಳಿಕ ಈ ಬೆಳವಣಿಗೆ ನಡೆದಿದೆ.
‘ಲವ್ ಜಿಹಾದ್ ಮತ್ತು ಬಲವಂತದ ಮತಾಂತರ ತಡೆಗಾಗಿ ಕಾನೂನು ರೂಪಿಸಲು ನಾಗರಿಕರು, ವಿವಿಧ ಸಂಘ–ಸಂಸ್ಥೆಗಳು, ಚುನಾಯಿತ ಪ್ರತಿನಿಧಿಗಳು ಒತ್ತಾಯಿಸುತ್ತಿದ್ದಾರೆ. ಹಲವು ರಾಜ್ಯಗಳು ಈಗಾಗಲೇ ಈ ಕುರಿತ ಕಾನೂನನ್ನು ಜಾರಿ ಮಾಡಿವೆ. ರಾಜ್ಯದಲ್ಲಿ ಪ್ರಕರಣಗಳ ಸ್ಥಿತಿ ಕುರಿತ ಅಧ್ಯಯನಕ್ಕೆ ಸಮಿತಿ ರಚಿಸಲಾಗಿದೆ’ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಪ್ರಕಟಣೆಯಲ್ಲಿ ಗೃಹ ಇಲಾಖೆಯ ಉಪ ಕಾರ್ಯದರ್ಶಿ ಹೇಮಂತ್ ಮಹಾಜನ್ ಅವರ ಸಹಿ ಇದೆ.
ಆಕ್ಷೇಪ: ಮಹಾರಾಷ್ಟ್ರದ ಸಮಾಜವಾದಿ ಪಕ್ಷದ ಅಧ್ಯಕ್ಷ ಅಬು ಅಜೀಂ ಅಜಾಮಿ ಅವರು, ‘ಸ್ವೇಚ್ಛಾನುಸಾರ ಮತ್ತು ಸ್ವಾತಂತ್ರ್ಯದ ಮೇಲೆ ನಿರ್ಬಂಧ ಹೇರಲು ಈ ನಿರ್ಧಾರ ತೆಗೆದುಕೊಳ್ಳಲಾಗಿದೆ’ ಎಂದು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.