ADVERTISEMENT

ಕ್ಷೇತ್ರ ಮರುವಿಂಗಡಣೆ: ಹೋರಾಟ, ಜಾಗೃತಿಗೆ ಸ್ಟಾಲಿನ್‌ ಕರೆ

ದಕ್ಷಿಣದ ಸಂಸದರ ಜಂಟಿ ಕ್ರಿಯಾ ಸಮಿತಿ ರಚಿಸಲು ತಮಿಳುನಾಡು ಸಿ.ಎಂ ಎಂ.ಕೆ.ಸ್ಟಾಲಿನ್‌ ಸಲಹೆ

ಪಿಟಿಐ
Published 5 ಮಾರ್ಚ್ 2025, 14:15 IST
Last Updated 5 ಮಾರ್ಚ್ 2025, 14:15 IST
ಎಂ.ಕೆ.ಸ್ಟಾಲಿನ್
ಎಂ.ಕೆ.ಸ್ಟಾಲಿನ್   

ಚೆನ್ನೈ: ‘ಲೋಕಸಭೆ ಕ್ಷೇತ್ರಗಳ ಮರುವಿಂಗಡಣೆಗೆ 1971ರ ಜನಗಣತಿಯೇ ಆಧಾರ ಆಗಿರಬೇಕು’ ಎಂಬ ಹಕ್ಕೊತ್ತಾಯ ಮಂಡಿಸಲು ದಕ್ಷಿಣ ರಾಜ್ಯಗಳ ಸಂಸದರು ಮತ್ತು ಪಕ್ಷಗಳ ಪ್ರತಿನಿಧಿಗಳ ಜಂಟಿ ಕ್ರಿಯಾ ಸಮಿತಿ ರಚಿಸಬೇಕು ಎಂದು ತಮಿಳುನಾಡು ಸಲಹೆ ಮಾಡಿದೆ.

ಕ್ಷೇತ್ರ ಪುನರ್‌ವಿಂಗಡಣೆ ಕುರಿತು ಚರ್ಚೆಗೆ ಬುಧವಾರ ಇಲ್ಲಿ ನಡೆದ ಸರ್ವಪಕ್ಷಗಳ ಸಭೆಯಲ್ಲಿ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಈ ಕುರಿತ ನಿರ್ಣಯ ಮಂಡಿಸಿದರು.

1971ರ ಜನಗಣತಿಯೇ ಆಧಾರವಾಗಿರಬೇಕು ಎಂದು ಸಂವಿಧಾನಕ್ಕೆ ತಿದ್ದುಪಡಿ ತರಬೇಕು. ಮುಂದಿನ 30 ವರ್ಷಗಳ ಅವಧಿಗೆ ಕ್ಷೇತ್ರ ಪುನರ್ವಿಂಗಡಣೆಗೆ 1971ರ ಗಣತಿ ಅಂಕಿಅಂಶಗಳೇ ಆಧಾರ ಎಂದು ಪ್ರಧಾನಿ ಸಂಸತ್ತಿನಲ್ಲೇ ಭರವಸೆ ನೀಡಬೇಕು ಎಂದೂ ಒತ್ತಾಯಿಸಿದರು.

ADVERTISEMENT

ದಕ್ಷಿಣ ರಾಜ್ಯಗಳ ಸಂಸದರು ಹಾಗೂ ವಿವಿಧ ಪಕ್ಷಗಳ ಪ್ರತಿನಿಧಿಗಳಿರುವ ಜಂಟಿ ಕ್ರಿಯಾ ಸಮಿತಿಯನ್ನು ರಚಿಸಿ, ಈ ಸಮಿತಿಯು ಬೇಡಿಕೆ ಅನುಷ್ಠಾನಕ್ಕೆ ಒತ್ತು ನೀಡಬೇಕು ಹಾಗೂ ಸಮಾಜದಲ್ಲೂ ಈ ಕುರಿತಂತೆ ಜಾಗೃತಿ ಮೂಡಿಸಬೇಕು ಎಂದು ಸಲಹೆ ಮಾಡಿದರು.

ರಾಜ್ಯದ ಪ್ರಮುಖ ವಿರೋಧಪಕ್ಷ ಎಐಎಡಿಎಂಕೆ, ಕಾಂಗ್ರೆಸ್‌, ಎಡಪಕ್ಷಗಳು, ನಟ, ರಾಜಕಾರಣಿ ವಿಜಯ್‌ ಅವರ ಟಿವಿಕೆ ಪಕ್ಷಗಳು ಸಭೆಯಲ್ಲಿ ಭಾಗವಹಿಸಿದ್ದವು.

ಬಿಜೆಪಿ, ತಮಿಳ್‌ ರಾಷ್ಟ್ರೀಯ ನಾಮ್‌ ತಮಿಳರ್‌ ಕಚ್ಚಿ (ಎನ್‌ಟಿಕೆ), ಮಾಜಿ ಕೇಂದ್ರ ಸಚಿವ ಜಿ.ಕೆ.ವಾಸನ್‌ ಅವರ ತಮಿಳ್‌ ಮನಿಲಾ ಕಾಂಗ್ರೆಸ್‌ (ಮೂಪನಾರ್) ಸಭೆಯನ್ನು ಬಹಿಷ್ಕರಿಸಿದ್ದವು.

ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಇತ್ತೀಚೆಗೆ, ಕ್ಷೇತ್ರ ಪುನರ್‌ವಿಂಗಡಣೆ ಪ್ರಕ್ರಿಯೆಯಿಂದ ದಕ್ಷಿಣ ರಾಜ್ಯಗಳ ಮೇಲೆ ನಕಾರಾತ್ಮಕ ಪರಿಣಾಮ ಆಗುವುದಿಲ್ಲ. ಈ ವಿಷಯದಲ್ಲಿ ಸ್ಟಾಲಿನ್‌ ಅಪಪ್ರಚಾರ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದರು.

ತಮಿಳುನಾಡು ಅಲ್ಲದೆ, ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ತೆಲಂಗಾಣದ ಮುಖ್ಯಮಂತ್ರಿ ಎ.ರೇವಂತ ರೆಡ್ಡಿ ಅವರೂ ಶಾ ಹೇಳಿಕೆ ಬಗೆಗೆ ಶಂಕೆ ವ್ಯಕ್ತಪಡಿಸಿದ್ದಾರೆ.

ಸರ್ವಪಕ್ಷ ಸಭೆಗೆ ಬಿಜೆಪಿ ಸೇರಿ ಕೆಲ ಪಕ್ಷಗಳ ಬಹಿಷ್ಕಾರ | ಈಗಿನ ಜನಸಂಖ್ಯೆ ಆಧರಿಸಿ ಪುನರ್ವಿಂಗಡಣೆಗೆ ವಿರೋಧ | ದಕ್ಷಿಣ ರಾಜ್ಯಗಳಿಗೆ ‘ಶಿಕ್ಷೆ’ ಆಗುವುದು ಬೇಡ ಎಂದು ಪ್ರತಿಪಾದನೆ
ಕ್ಷೇತ್ರ ಮರುವಿಂಗಡಣೆಯ ಎಂಬ ಬೆದರಿಕೆಯ ತೂಗುಗತ್ತಿ ದಕ್ಷಿಣ ರಾಜ್ಯಗಳು ಮತ್ತು ತಮಿಳುನಾಡಿನ ಮೇಲೆ ತೂಗಾಡುತ್ತಿದೆ. ಕ್ಷೇತ್ರಗಳ ಸಂಖ್ಯೆ ತಗ್ಗಿದರೆ ಪ್ರತಿಕೂಲ ಪರಿಣಾಮವಾಗಲಿದೆ.
ಎಂ.ಕೆ.ಸ್ಟಾಲಿನ್‌ ತಮಿಳುನಾಡು ಮುಖ್ಯಮಂತ್ರಿ

ಡಿಎಂಕೆ ಕೌನ್ಸಿಲರ್‌ನಿಂದ ಬಳೆ ಕಳವಿಗೆ ಯತ್ನ?

ಚೆನ್ನೈ: ಹಿಂದಿ ಭಾಷೆಯ ಹೇರಿಕೆ ವಿರೋಧಿಸಿ ಪ್ರತಿಜ್ಞಾವಿಧಿ ಸ್ವೀಕರಿಸುವ ವೇಳೆ ಡಿಎಂಕೆ ನಾಯಕ ಜಾಕೀರ್ ಹುಸೇನ್ ಮಹಿಳೆಯೊಬ್ಬರು ಧರಿಸಿದ್ದ ಚಿನ್ನದ ಕಳವಿಗೆ ಯತ್ನಿಸಿದ್ದಾರೆ ಎಂದು ಬಿಜೆಪಿ ಆರೋಪಿಸಿದೆ. ರಾಜ್ಯ ಬಿಜೆಪಿ ಅಧ್ಯಕ್ಷ ಕೆ.ಅಣ್ಣಾಮಲೈ ಈ ಆರೋಪ ಮಾಡಿದ್ದು ಪೂರಕವಾಗಿ ಬುಧವಾರ ‘ಎಕ್ಸ್‌’ನಲ್ಲಿ ವಿಡಿಯೊ ಹಂಚಿಕೊಂಡಿದ್ದಾರೆ. ಪ್ರತಿಜ್ಞಾವಿಧಿ ಸ್ವೀಕರಿಸಲು ಎಲ್ಲ ಕೈ ಮುಂದೆ ಚಾಚಿದ್ದಾಗ ವ್ಯಕ್ತಿಯೊಬ್ಬರು ಮಹಿಳೆ ಕೈನಿಂದ ಸರ ತೆಗೆಯಲು ಯತ್ನಿಸುತ್ತಿರುವುದು ವಿಡಿಯೊದಲ್ಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.