ಎನ್‌ಸಿಪಿ ಭದ್ರಕೋಟೆಯಾಗಿರುವ ಮಹಾರಾಷ್ಟ್ರದ ಬಾರಾಮತಿ ಲೋಕಸಭಾ ಕ್ಷೇತ್ರವು ಈ ಬಾರಿ ಶರದ್ ಪವಾರ್ ಕುಟುಂಬ ಸದಸ್ಯರ ನಡುವಣ ನೇರ ಹಣಾಹಣಿಗೆ ಸಾಕ್ಷಿಯಾಗಲಿದೆ. ಇಲ್ಲಿಂದ ಮೂರು ಬಾರಿ ಸಂಸತ್‌ಗೆ ಆಯ್ಕೆಯಾಗಿರುವ ಸುಪ್ರಿಯಾ ಸುಳೆ ಈ ಬಾರಿಯೂ ಕಣಕ್ಕಿಳಿದಿದ್ದಾರೆ. ಆದರೆ ಈ ಸಲ ‘ಮಹಾವಿಕಾಸ್ ಆಘಾಡಿ’ ಜೊತೆಗಿರುವ ಎನ್‌ಸಿಪಿ (ಶರದ್ ಪವಾರ್ ಬಣ) ಅಭ್ಯರ್ಥಿಯಾಗಿದ್ದಾರೆ. ಪಕ್ಷವು ಎರಡು ಬಣಗಳಾಗಿ ವಿಭಜನೆಯಾದ ಬಳಿಕ ನಡೆಯುತ್ತಿರುವ ಮೊದಲ ಲೋಕಸಭಾ ಚುನಾವಣೆ ಇದಾಗಿದೆ. ಎನ್‌ಸಿಪಿಯ ಸ್ಥಾಪಕರಲ್ಲೊಬ್ಬರಾದ ಶರದ್ ಪವಾರ್ ಅವರ ಪುತ್ರಿ 54 ವರ್ಷದ ಸುಪ್ರಿಯಾ ಅವರು ಈ ಕ್ಷೇತ್ರದಲ್ಲಿ ದೊಡ್ಡ ಮಟ್ಟದಲ್ಲಿ ಪ್ರಭಾವ ಹೊಂದಿರುವವರು. ಪಕ್ಷದ ರಾಷ್ಟ್ರೀಯ ಕಾರ್ಯಾಧ್ಯಕ್ಷೆಯಾಗಿ ಪಕ್ಷ ಸಂಘಟನೆಗೆ ದುಡಿದಿರುವ ಹಿರಿಮೆಯೂ ಅವರಿಗಿದೆ. ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸುವುದಕ್ಕೂ ಮೊದಲು ರಾಜ್ಯಸಭೆ ಸದಸ್ಯೆಯಾಗಿ ಅವರು ಸಂಸತ್ ಪ್ರವೇಶಿಸಿದ್ದರು.
ಮಹಾರಾಷ್ಟ್ರದ ಬಿಜೆಪಿ ನೇತೃತ್ವದ ‘ಮಹಾಯುತಿ’ ಮೈತ್ರಿಕೂಟವು ಬಾರಾಮತಿ ಕ್ಷೇತ್ರದಿಂದ ಎನ್‌ಸಿಪಿ ಅಜಿತ್ ಪವಾರ್ ಬಣದ ಅಭ್ಯರ್ಥಿಯಾಗಿ ಸುನೇತ್ರಾ ಪವಾರ್ ಅವರನ್ನು ಅಖಾಡಕ್ಕಿಳಿಸಿದೆ. 60 ವರ್ಷದ ಸುನೇತ್ರಾ ಅವರು, ಶರದ್ ಪವಾರ್ ಅವರ ಅಣ್ಣನ ಮಗ ಹಾಗೂ ಮಹಾರಾಷ್ಟ್ರದ ಉಪ ಮುಖ್ಯಮಂತ್ರಿ ಅಜಿತ್ ಪವಾರ್ ಅವರ ಪತ್ನಿಯಾಗಿದ್ದಾರೆ. ಅಜಿತ್ ಪವಾರ್ ಅವರು ಮುಖ್ಯಮಂತ್ರಿ ಏಕನಾಥ ಶಿಂದೆ ಜೊತೆಗೆ ಕೈಜೋಡಿಸಿದ ಬಳಿಕ ಎನ್‌ಸಿಪಿಯು ಇಬ್ಭಾಗವಾಗಿತ್ತು. ಅಜಿತ್ ನೇತೃತ್ವದ ಬಣವೇ ನಿಜವಾದ ಎನ್‌ಸಿಪಿ ಎಂದು ಚುನಾವಣಾ ಆಯೋಗವು ಮಾನ್ಯ ಮಾಡಿತ್ತು. ಈ ಮೂಲಕ ಎನ್‌ಸಿಪಿಯ ಮೂಲಚಿಹ್ನೆ ‘ಗೋಡೆ ಗಡಿಯಾರ’ವು ಅಜಿತ್ ಪವಾರ್ ನೇತೃತ್ವದ ಬಣದಲ್ಲಿಯೇ ಉಳಿದಿತ್ತು. ಸುನೇತ್ರಾ ಅವರು ‘ಎನ್ವಿರಾನ್‍ಮೆಂಟಲ್ ಫಾರಂ ಆಫ್ ಇಂಡಿಯಾ’ ಎನ್‌ಜಿಒದ ಸ್ಥಾಪಕರಾಗಿದ್ದಾರೆ. ವಿದ್ಯಾಪ್ರತಿಷ್ಠಾನ ಶಿಕ್ಷಣ ಸಂಸ್ಥೆಯ ಟ್ರಸ್ಟಿ ಆಗಿಯೂ ಕಾರ್ಯ ನಿರ್ವಹಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.