ADVERTISEMENT

ರಾಹುಲ್‌ ದೇಗುಲ ಪ್ರದಕ್ಷಿಣೆ, ಬಿಜೆಪಿ ತಳಮಳ

​ಪ್ರಜಾವಾಣಿ ವಾರ್ತೆ
Published 19 ಅಕ್ಟೋಬರ್ 2018, 19:40 IST
Last Updated 19 ಅಕ್ಟೋಬರ್ 2018, 19:40 IST
ದತಿಯಾದ ಪೀತಾಂಬರ ಶಕ್ತಿ ಪೀಠದಲ್ಲಿ ರಾಹುಲ್‌ ಅವರು ಸೋಮವಾರ ಪೂಜೆ ನಡೆಸಿದರು ಪಿಟಿಐ ಚಿತ್ರ
ದತಿಯಾದ ಪೀತಾಂಬರ ಶಕ್ತಿ ಪೀಠದಲ್ಲಿ ರಾಹುಲ್‌ ಅವರು ಸೋಮವಾರ ಪೂಜೆ ನಡೆಸಿದರು ಪಿಟಿಐ ಚಿತ್ರ   

ನವದೆಹಲಿ: ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಅವರು ದೇವಸ್ಥಾನಗಳಿಗೆ ನೀಡುತ್ತಿರುವ ಭೇಟಿ ಬಿಜೆಪಿಯ ಕಳವಳಕ್ಕೆ ಕಾರಣವಾಗಿದೆ. ಹಾಗಾಗಿಯೇ ರಾಹುಲ್‌ ಅವರು ‘ಎಲೆಕ್ಷನ್‌ ಹಿಂದೂ’ ಎಂದು ಬಿಜೆಪಿ ಲೇವಡಿ ಮಾಡುತ್ತಿದೆ.

ಮಧ್ಯಪ್ರದೇಶದ ‌ದತಿಯಾದಲ್ಲಿರುವ ಪ್ರಸಿದ್ಧ ಪೀತಾಂಬರ ದೇವಾಲಯದಲ್ಲಿ ತಮ್ಮ ಕುಟುಂಬದ ಸಂಪ್ರದಾಯದಂತೆ ರಾಹುಲ್‌ ಅವರು ಪೂಜೆ ಸಲ್ಲಿಸಿದ್ದಾರೆ. ತಕ್ಷಣವೇ ತನ್ನ ವಕ್ತಾರ ಜಿ.ವಿ.ಎಲ್‌. ನರಸಿಂಹರಾವ್‌ ಅವರನ್ನು ಕಣಕ್ಕಿಳಿಸಿದ ಬಿಜೆಪಿ, ರಾಹುಲ್ ದೇವಾಲಯ ಭೇಟಿಯನ್ನು ಪ್ರಶ್ನಿಸಿದೆ. ಒಂದೆಡೆ ಹಿಂದೂಗಳನ್ನು ಓಲೈಸುವ ಕಾಂಗ್ರೆಸ್‌ ಪಕ್ಷವು ರಾಮ ಮಂದಿರವನ್ನು ವಿರೋಧಿಸುತ್ತಿರುವುದೇಕೇ ಎಂದು ರಾವ್‌ ಪ್ರಶ್ನಿಸಿದ್ದಾರೆ.

ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ಮಾಡಬೇಕು ಎಂಬ ಒತ್ತಡ ಹೆಚ್ಚುತ್ತಿರುವ ಸಂದರ್ಭದಲ್ಲಿಯೇ ರಾಹುಲ್‌ ಅವರ ದೇವಾಲಯ ಭೇಟಿಯನ್ನು ಗೇಲಿ ಮಾಡಲು ಬಿಜೆಪಿ ಮುಂದಾಗಿದೆ. ಇದೇ ಹೊತ್ತಿಗೆ ಮಧ್ಯಪ್ರದೇಶ, ಛತ್ತೀಸಗಡ, ರಾಜಸ್ಥಾನ, ಮಿಜೋರಾಂ ಮತ್ತು ತೆಲಂಗಾಣ ವಿಧಾನಸಭೆ ಚುನಾವಣೆಯೂ ಎದುರಾಗಿದೆ. ಹಿಂದುತ್ವವಾದಿ ವಿಚಾರಗಳು ಈ ರಾಜ್ಯಗಳಲ್ಲಿ ಜನರನ್ನು ಆಕರ್ಷಿಸಬಹುದು ಎಂಬ ಲೆಕ್ಕಾಚಾರ ಇದೆ.

ADVERTISEMENT

ರಾಹುಲ್‌ ಅವರು ಒಂದರ ನಂತರ ಒಂದರಂತೆ ದೇವಾಲಯಗಳಿಗೆ ಭೇಟಿ ನೀಡುತ್ತಿರುವುದು ಇದೇ ಮೊದಲೇನಲ್ಲ. ಗುಜರಾತ್‌ ವಿಧಾನಸಭೆ ಚುನಾವಣೆ ಸಂದರ್ಭದಲ್ಲಿಯೂ ದ್ವಾರಕಾದೀಶ ದೇವಾಲಯಕ್ಕೆ ಅವರು ಭೇಟಿ ನೀಡಿದ್ದರು. ಸೋಮನಾಥ ದೇವಾಲಯ ಸೇರಿ 25ಕ್ಕೂ ಹೆಚ್ಚು ದೇವಾಲಯಗಳಿಗೆ ಚುನಾವಣಾ ಪ್ರಚಾರ ಸಂದರ್ಭದಲ್ಲಿ ರಾಹುಲ್‌ ಹೋಗಿದ್ದರು. ಸೋಮನಾಥ ದೇವಾಲಯ ಭೇಟಿ ವಿವಾದವನ್ನೂ ಸೃಷ್ಟಿಸಿತ್ತು.

ಕರ್ನಾಟಕ ವಿಧಾನಸಭೆ ಚುನಾವಣೆ ಸಂದರ್ಭದಲ್ಲಿಯೂ ರಾಹುಲ್‌ ಅವರು ಹಲವು ದೇವಾಲಯಗಳಿಗೆ ಭೇಟಿ ಕೊಟ್ಟಿದ್ದರು. ಧಾರ್ಮಿಕ ಒಲವು ಇರುವ ಜನರನ್ನು ಓಲೈಸುವುದೇ ಈ ಭೇಟಿಯ ಉದ್ದೇಶ ಎಂದು ಆಗಲೂ ವಿಶ್ಲೇಷಿಸಲಾಗಿತ್ತು.

ತಾವು ಹಿಂದೂ ಎಂದು ಢಾಳಾಗಿ ಬಿಂಬಿಸಿಕೊಳ್ಳುವ ರಾಹುಲ್‌ ಅವರ ಪ್ರಯತ್ನದ ಬಗ್ಗೆ ಆತಂಕ ಇರುವುದರಿಂದಲೇ ಅವರ ಈ ನಡೆಯನ್ನು ಬಿಜೆಪಿ ಪ್ರಶ್ನಿಸುತ್ತಿದೆ. ದೇವಾಲಯ ಭೇಟಿಯನ್ನು ಟೀಕಿಸಲು ಕೇಂದ್ರ ಸಚಿವರನ್ನೇ ಬಿಜೆಪಿ ಬಳಸಿಕೊಳ್ಳುತ್ತಿದೆ. ದೇವಾಲಯ ಭೇಟಿಗೆ ಮುನ್ನ ರಾಹುಲ್‌ ಅವರು ಕೋಳಿ ಮಾಂಸ ತಿಂದಿದ್ದರು ಎಂಬಂತಹ ವಿವಾದಗಳನ್ನೂ ಸೃಷ್ಟಿಸುತ್ತಿದೆ ಎಂದು ವಿಶ್ಲೇಷಕರು ಅಭಿಪ್ರಾಯಪಡುತ್ತಿದ್ದಾರೆ.

ಬಿಜೆಪಿಯ ಈ ಕಳವಳವನ್ನು ಕಾಂಗ್ರೆಸ್‌ ಮುಖಂಡರು ತಮ್ಮ ಅನುಕೂಲಕ್ಕೆ ಬಳಸಿಕೊಳ್ಳುತ್ತಿದ್ದಾರೆ. ಹಾಗಾಗಿಯೇ ಮಧ್ಯಪ್ರದೇಶ ಚುನಾವಣಾ ಕಣದಲ್ಲಿ ರಾಹುಲ್‌ ಅವರನ್ನು ‘ಶಿವಭಕ್ತ’ ಎಂದು ಬಿಂಬಿಸಲು ಕಾಂಗ್ರೆಸ್‌ ಯತ್ನಿಸುತ್ತಿದೆ. ಕೈಲಾಸ ಮಾನಸ ಸರೋವರಕ್ಕೆ ಇತ್ತೀಚೆಗೆ ನೀಡಿದ್ದ ಭೇಟಿಯನ್ನೇ ಇಟ್ಟುಕೊಂಡು ರಾಹುಲ್‌ ಅವರ ಧಾರ್ಮಿಕ ಹಿನ್ನೆಲೆಯನ್ನು ಜನರಿಗೆ ತಲುಪಿಸುವ ಕೆಲಸವನ್ನು ಕಾಂಗ್ರೆಸ್‌ ಮಾಡುತ್ತಿದೆ.

ಕಾಂಗ್ರೆಸ್‌ ಪಕ್ಷವು ಮುಸ್ಲಿಮರನ್ನು ಓಲೈಸುತ್ತದೆ ಎಂದು ಯಾವಾಗಲೂ ಹೇಳಲಾಗುತ್ತಿತ್ತು. ಆದರೆ, ಈ ಹಣೆಪಟ್ಟಿ ಕಳಚಿ ಹಿಂದೂಗಳ ಪರ ಎಂದು ಬಿಂಬಿಸಿಕೊಳ್ಳಲು ರಾಹುಲ್‌ ಯತ್ನಿಸುತ್ತಿದ್ದಾರೆ ಎಂದು ಎಚ್‌.ಎನ್‌. ಬಹುಗುಣ ಘರ್ವಾಲ್‌ ವಿಶ್ವವಿದ್ಯಾಲಯದ ರಾಜಕೀಯಶಾಸ್ತ್ರ ಪ್ರಾಧ್ಯಾಪಕಿ ಅನ್ನಪೂರ್ಣ ನೌಟಿಯಾಲ್‌ ಹೇಳಿದ್ದಾರೆ.

‘ದೇವಸ್ಥಾನದ ವಿಚಾರ ರಾಜಕೀಯಕ್ಕೆ ಸೀಮಿತ. ಜನರು ಈ ಬಗ್ಗೆ ತಲೆಯೇ ಕೆಡಿಸಿಕೊಳ್ಳುವುದಿಲ್ಲ. ಅವರಿಗೆ ಒಳ್ಳೆಯ ರಸ್ತೆಗಳು, ಆರೋಗ್ಯ ಸೇವೆ ಮತ್ತು ಶಿಕ್ಷಣ ಬೇಕು’ ಎಂಬುದು ಅನ್ನಪೂರ್ಣ ಅವರ ಅಭಿಪ‍್ರಾಯ.

ಕಾಂಗ್ರೆಸ್‌ ಪಕ್ಷವು ಹಿಂದೂಗಳ ಬಗ್ಗೆ ಯೋಚನೆಯನ್ನೇ ಮಾಡುವುದಿಲ್ಲ ಎಂಬ ಗ್ರಹಿಕೆಯನ್ನು ಬದಲಾಯಿಸುವುದು ಅಷ್ಟು ಸುಲಭದ ಕೆಲಸವಲ್ಲ ಎಂದು ಕಾಂಗ್ರೆಸ್‌ ಪಕ್ಷವನ್ನು ಹತ್ತಿರದಿಂದ ಗಮನಿಸುತ್ತಿರುವ ರಾಜಕೀಯ ವಿಶ್ಲೇಷಕರೊಬ್ಬರು ಅಭಿಪ್ರಾಯಪಟ್ಟಿದ್ದಾರೆ.

ಕಾಂಗ್ರೆಸ್‌ ಪಕ್ಷವು ಅಲ್ಪಸಂಖ್ಯಾತರ ಪರ ಎಂಬ ಗ್ರಹಿಕೆ ಜನರಲ್ಲಿ ಇದೆ ಎಂದು ಹಿರಿಯ ಮುಖಂಡ ಎ.ಕೆ.ಆಂಟನಿ ಅವರ ಸಮಿತಿ ವರದಿ ಕೊಟ್ಟಿತ್ತು. 2014ರ ಲೋಕಸಭಾ ಚುನಾವಣೆಯ ಹೀನಾಯ ಸೋಲಿನ ಕಾರಣಗಳ ವಿಶ್ಲೇಷಣೆಗೆ ಈ ಸಮಿತಿ ರಚಿಸಲಾಗಿತ್ತು.

**

ಇಂದಿರಾ ಗಾಂಧಿ, ರಾಜೀವ್‌ ಗಾಂಧಿ ಶ್ರದ್ಧಾವಂತ ಹಿಂದೂಗಳಾಗಿದ್ದರು. ಜಾತ್ಯತೀತರೂ ಆಗಿದ್ದರು. ಆದರೆ ಅವರೆಂದೂ ಈ ರೀತಿಯ ಓಲೈಕೆಗೆ ಮುಂದಾಗಿರಲಿಲ್ಲ.

–ಅನ್ನಪೂರ್ಣಾ ನೌಟಿಯಾಲ್‌, ಪ್ರಾಧ್ಯಾಪಕಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.