ADVERTISEMENT

ಸೋಲಿನ ಹೊಣೆ ಹೊತ್ತ ಚೌಹಾಣ್‌ ರಾಜೀನಾಮೆ

​ಪ್ರಜಾವಾಣಿ ವಾರ್ತೆ
Published 12 ಡಿಸೆಂಬರ್ 2018, 19:16 IST
Last Updated 12 ಡಿಸೆಂಬರ್ 2018, 19:16 IST

ಭೋಪಾಲ್‌ (ಪಿಟಿಐ): ಮಧ್ಯ ಪ್ರದೇಶದಲ್ಲಿ ಬಿಜೆಪಿ ಸೋಲಿನ ಸಂಪೂರ್ಣ ಹೊಣೆ ತಮ್ಮದೇ ಎಂದು ನಿರ್ಗಮಿತ ಮುಖ್ಯಮಂತ್ರಿ ಶಿವರಾಜ್‌ ಸಿಂಗ್‌ ಚೌಹಾಣ್‌ ಹೇಳಿದ್ದಾರೆ. ರಾಜ್ಯಪಾಲೆ ಆನಂದಿಬೆನ್‌ ಪಟೇಲ್‌ ಅವರಿಗೆ ತಮ್ಮ ರಾಜೀನಾಮೆ ಸಲ್ಲಿಸಿರುವ ಅವರು ಸರ್ಕಾರ ರಚನೆಗೆ ಹಕ್ಕು ಮಂಡಿಸುವುದಿಲ್ಲ ಎಂಬುದನ್ನು ಸ್ಪಷ್ಟಪಡಿಸಿದ್ದಾರೆ.

‘ಪಕ್ಷದ ಕಾರ್ಯಕರ್ತರು ಸಾಕಷ್ಟು ಶ್ರಮಿಸಿದ್ದಾರೆ. ಜನರೂ ಪ್ರೀತಿ ತೋರಿದ್ದಾರೆ. ಆದರೆ, ಹೆಚ್ಚು ಮತ ಪಡೆದರೂ ಕೆಲವು ಸ್ಥಾನಗಳ ಕೊರತೆ ಎದುರಾಗಿದೆ. ಕಮಲನಾಥ್‌ ಅವರಿಗೆ ಅಭಿನಂದನೆ’ ಎಂದು ಚೌಹಾಣ್‌ ಹೇಳಿದ್ದಾರೆ.

15 ವರ್ಷಗಳಿಂದ ಮಧ್ಯ ಪ್ರದೇಶದಲ್ಲಿ ಬಿಜೆಪಿ ಸರ್ಕಾರ ಇತ್ತು ಮತ್ತು ಚೌಹಾಣ್‌ ಅವರು ಮುಖ್ಯಮಂತ್ರಿಯಾಗಿದ್ದರು. ಈ ಬಾರಿ 109 ಕ್ಷೇತ್ರಗಳಲ್ಲಿ ಗೆಲ್ಲುವುದಷ್ಟೇ ಬಿಜೆಪಿಗೆ ಸಾಧ್ಯವಾಗಿದೆ. ಕಾಂಗ್ರೆಸ್‌ ಪಕ್ಷ 114 ಕ್ಷೇತ್ರಗಳನ್ನು ಗೆದ್ದಿದೆ. ಆದರೆ, ಮತಗಳಿಕೆ ಪ್ರಮಾಣದಲ್ಲಿ ಬಿಜೆಪಿ ಮುಂದೆ ಇದೆ. ಕಾಂಗ್ರೆಸ್‌ಗೆ ಶೇ 40.9ರಷ್ಟು ಮತ ಸಿಕ್ಕರೆ, ಬಿಜೆಪಿಯ ಮತಪ್ರಮಾಣ ಶೇ 41.

ADVERTISEMENT

ಫಲ ಕೊಡದ ಬಂಡಾಯ

ನವದೆಹಲಿ: ತಮ್ಮ ಮಗ ನಿತಿನ್‌ಗೆ ಕುಟುಂಬದ ಭದ್ರಕೋಟೆ ಖಜುರಾಹೊ ಜಿಲ್ಲೆಯ ಕ್ಷೇತ್ರವೊಂದರಿಂದ ಟಿಕೆಟ್‌ ಸಿಕ್ಕಿಲ್ಲ ಎಂಬುದು ಮಧ್ಯ ಪ್ರದೇಶ ಕಾಂಗ್ರೆಸ್‌ನ ಹಿರಿಯ ಮುಖಂಡ ಸತ್ಯವ್ರತ ಚತುರ್ವೇದಿ ಅವರನ್ನು ಕೆರಳಿಸಿತ್ತು.

ಹಾಗಾಗಿ, ಕಾಂಗ್ರೆಸ್‌ ಬಿಟ್ಟ ನಿತಿನ್‌,ಮೂರು ಶಾಸಕರಾಗಿದ್ದ ಕಾಂಗ್ರೆಸ್‌ನ ವಿಕ್ರಮ್‌ ಸಿಂಗ್‌ ವಿರುದ್ಧ ಎಸ್‌ಪಿ ಟಿಕೆಟ್‌ನಲ್ಲಿ ರಾಜನಗರ ಕ್ಷೇತ್ರದಿಂದ ಸ್ಪರ್ಧಿಸಿದ್ದರು. ಈ ಪ್ರದೇಶದಲ್ಲಿ ಸತ್ಯವ್ರತ ಮತ್ತು ಅವರ ಮಗ ನಿತಿನ್‌ಗೆ ಭಾರಿ ಜನಪ್ರಿಯತೆ ಇದೆ. ವಿಕ್ರಮ್‌ ಸಿಂಗ್‌ ಕೂಡ ಬಹಳ ಜನಪ್ರಿಯ ನಾಯಕ.

ನಿಕಟ ಸ್ಪರ್ಧೆಯಲ್ಲಿ ವಿಕ್ರಮ್‌ ಸಿಂಗ್‌ ಅವರು 732 ಮತಗಳ ಅಂತರದಿಂದ ಗೆದ್ದರು. ನಿತಿನ್‌ ಅವರಿಗೆ ಸಿಕ್ಕಿದ್ದು ನಾಲ್ಕನೇ ಸ್ಥಾನ. ಬಂಡಾಯದಿಂದ ಚತುರ್ವೇದಿ ಕುಟುಂಬಕ್ಕೆ ಯಾವ ಲಾಭವೂ ದಕ್ಕಲಿಲ್ಲ.

ಸೋತ ಮೊದಲ ಗೋಪಾಲನಾ ಸಚಿವ

ಜೈಪುರ: ಭಾರತದ ಮೊದಲ ಗೋಪಾಲನಾ ಸಚಿವ, ರಾಜಸ್ಥಾನದ ಒಟಾರಾಮ್‌ ದೇವಸಿ ಸಿರೋಹಿ ಕ್ಷೇತ್ರದಲ್ಲಿ ಪಕ್ಷೇತರ ಅಭ್ಯರ್ಥಿ ಸನ್ಯಂ ಲೋಧಾ ವಿರುದ್ಧ 10 ಸಾವಿರ ಮತಗಳ ಅಂತರದಲ್ಲಿ ಸೋತಿದ್ದಾರೆ.

ಕುರುಬ ಸಮುದಾಯದ ಮುಖಂಡ ದೇವಸಿಗೆ ಸಹಜವಾಗಿಯೇ ಜಾನುವಾರುಗಳ ಮೇಲೆ ಬಹಳ ಪ್ರೀತಿ. ಹಾಗಾಗಿಯೇ ಜಾನುವಾರು ಮಂಡಳಿಯ ಮೊದಲ ಅಧ್ಯಕ್ಷರನ್ನಾಗಿ ಅವರನ್ನು ನೇಮಿಸಲಾಗಿತ್ತು. ಬಳಿಕ ಗೋಪಾಲನಾ ಖಾತೆಯ ಸಚಿವ ಸ್ಥಾನವನ್ನೂ ನೀಡಲಾಗಿತ್ತು.2008ರಲ್ಲಿ ಸಿರೋಹಿಯಿಂದ ಮೊದಲ ಬಾರಿ ಸ್ಪರ್ಧಿಸಿ ಅವರು ಗೆದ್ದಿದ್ದರು. 2014ರಲ್ಲಿಯೂ ಗೆದ್ದಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.