ADVERTISEMENT

ದೌರ್ಜನ್ಯ: ಸಂತ್ರಸ್ತೆಯಿಂದ ರಾಖಿ ಕಟ್ಟಿಸಿಕೊಳ್ಳಲು ಆರೋಪಿಗೆ ಆದೇಶಿಸಿದ ಹೈಕೋರ್ಟ್

ಪಿಟಿಐ
Published 3 ಆಗಸ್ಟ್ 2020, 10:26 IST
Last Updated 3 ಆಗಸ್ಟ್ 2020, 10:26 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಇಂದೋರ್: ಮಧ್ಯಪ್ರದೇಶದಲ್ಲಿ 26ರ ಹರೆಯದ ವಿವಾಹಿತ ಪುರುಷನೊಬ್ಬ ಮಹಿಳೆಯ ಮೇಲೆ ದೌರ್ಜನ್ಯವೆಸಗಿದ್ದನು. ಈ ಪ್ರಕರಣದ ಬಗ್ಗೆ ವಿಚಾರಣೆ ನಡೆಸಿದ ಹೈಕೋರ್ಟ್ ದೌರ್ಜನ್ಯಕ್ಕೊಳಗಾದ ಮಹಿಳೆಯಿಂದ ರಕ್ಷಾಬಂಧನದಂದು ರಾಖಿ ಕಟ್ಟಿಸಿಕೊಳ್ಳುವಂತೆ ಆರೋಪಿಗೆ ಹೇಳಿದೆ.

ರಾಖಿ ಕಟ್ಟಿಸಿಕೊಂಡ ನಂತರ ಆಕೆಗೆ ಉಡುಗೊರೆಯಾಗಿ ₹11,000 ನೀಡುವಂತೆ ಹೈಕೋರ್ಟ್ ಸೂಚಿಸಿದೆ.
ಪ್ರಕರಣದ ಆರೋಪಿ ವಿಕ್ರಂಬಾರ್ಗಿಎಂಬಾತನಿಗೆ ಜುಲೈ 30ರಂದು ಏಕ ಸದಸ್ಯ ಪೀಠದ ನ್ಯಾಯಮೂರ್ತಿ ರೋಹಿತ್ ಆರ್ಯ ಷರತ್ತುಬದ್ಧ ಜಾಮೀನು ನೀಡಿ ಈ ಆದೇಶ ನೀಡಿದ್ದರು.

ಆರೋಪಿಯು ಪತ್ನಿ ಜತೆ ಸಂತ್ರಸ್ತೆಯ ಮನೆಗೆ ಆಗಸ್ಟ್ 3ರಂದು ಬೆಳಗ್ಗೆ 11 ಗಂಟೆಗೆ ತೆರಳಿ ಆಕೆಯಿಂದ ರಾಖಿ ಕಟ್ಟಿಸಿಕೊಳ್ಳಬೇಕು. ಆಕೆಗೆ ಸಿಹಿತಿಂಡಿ ನೀಡಿ ಸದಾ ರಕ್ಷಣೆ ನೀಡುತ್ತೇನೆ ಎಂದು ಭರವಸೆ ನೀಡಬೇಕು ಎಂದು ನ್ಯಾಯಾಲಯ ಆದೇಶ ನೀಡಿತ್ತು.

ADVERTISEMENT

ಉಜ್ಜೈನ್‌ನಲ್ಲಿರುವ 30ರ ಹರೆಯದ ಮಹಿಳೆಯ ಮನೆಗೆ ನುಗ್ಗಿ ಬಾರ್ಗಿ ದೌರ್ಜನ್ಯವೆಸಗಿದ್ದಾನೆ ಎಂಬ ಆರೋಪವಿದ್ದು, ಐಪಿಸಿ ಸೆಕ್ಷನ್ 354ರಡಿಯಲ್ಲಿ ಪ್ರಕರಣ ದಾಖಲಾಗಿತ್ತು.

ಅದೇ ವೇಳೆ ಸಂತ್ರಸ್ತೆಯ ಮಗನಿಗೆ ಹೊಸ ಬಟ್ಟೆ ಮತ್ತು ಸಿಹಿತಿಂಡಿ ಖರೀದಿಸಲು ₹5,000 ನೀಡಬೇಕು ಎಂದು ಆದೇಶಿಸಿದ ನ್ಯಾಯಾಲಯ 50,000 ವೈಯಕ್ತಿಕ ಬಾಂಡ್ ಬರೆಸಿಕೊಂಡು ಬಾರ್ಗಿಗೆ ಜಾಮೀನು ಮಂಜೂರು ಮಾಡಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.