ಗಿಳಿ
(ಪಿಟಿಐ ಚಿತ್ರ)
ಖಾರ್‌ಗೋನ್: ಮಧ್ಯಪ್ರದೇಶದ ಖಾರ್‌ಗೋನ್ ಜಿಲ್ಲೆಯ ನರ್ಮದಾ ನದಿಯ ದಡದಲ್ಲಿ ಕಲುಷಿತ ಆಹಾರ ಸೇವಿಸಿ ಕನಿಷ್ಠ 200 ಗಿಳಿಗಳು ಮೃತಪಟ್ಟಿವೆ ಎಂದು ಅಧಿಕಾರಿಗಳು ಇಂದು (ಶುಕ್ರವಾರ) ತಿಳಿಸಿದ್ದಾರೆ.
ಬಢ್ವಾಹ್ ಪ್ರದೇಶದ ನದಿ ದಂಡೆಯಲ್ಲಿರುವ ಜಲಚರ ಸೇತುವೆಯ ಬಳಿ ಈ ಮನಕಲಕುವ ಘಟನೆ ವರದಿಯಾಗಿದೆ.
ಇಂದೋರ್‌ನಲ್ಲಿ ಕಲುಷಿತ ನೀರಿನ ಸೇವನೆಯಿಂದ 10 ಮಂದಿ ಮೃತಪಟ್ಟಿದ್ದು, 150ಕ್ಕೂ ಹೆಚ್ಚು ಜನರು ಆಸ್ಪತ್ರೆಗಳಿಗೆ ದಾಖಲಾಗಿದ್ದಾರೆ. ಈ ನಡುವೆ ಗಿಳಿಗಳ ಮಾರಣ ಹೋಮದ ಬಗ್ಗೆ ವರದಿಯಾಗಿದೆ.
ಗಿಳಿಗಳ ಸರಣಿ ಸಾವಿನಿಂದಾಗಿ ಹಕ್ಕಿ ಜ್ವರ ಹರಡಿರಬಹುದೇ ಎಂಬ ಅನುಮಾನ ಮೂಡಿತ್ತು. ಆದರೆ ಮರಣೋತ್ತರ ವೈದ್ಯಕೀಯ ಪರೀಕ್ಷೆಯಲ್ಲಿ ಹಕ್ಕಿ ಜ್ವರದಿಂದ ಮೃತಪಟ್ಟಿಲ್ಲ ಎಂದು ಪಶುವೈದ್ಯಕೀಯ ವೈದ್ಯರು ದೃಢೀಕರಿಸಿದ್ದಾರೆ.
ಪಶುವೈದ್ಯಕೀಯ ಇಲಾಖೆಯ ಅಧಿಕಾರಿಗಳ ಪ್ರಕಾರ, ಕಲುಷಿತ ಹಾಗೂ ಅಸಮರ್ಪಕವಾದ ಆಹಾರ ಸೇವನೆಯಿಂದ ಸಾವು ಸಂಭವಿಸಿದೆ ಎಂದು ಹೇಳಿದ್ದಾರೆ.
ಕೀಟನಾಶಕ ಸಿಂಪಡಿಸಿದ ಆಹಾರ ಸೇವನೆಯಿಂದ ಸಾವು ಸಂಭವಿಸಿರಬಹುದು ಎಂದೂ ವೈದ್ಯರು ತಿಳಿಸಿದ್ದಾರೆ.
ಗಿಳಿಗಳಲ್ಲಿ ಸೋಂಕಿನ ಯಾವುದೇ ಲಕ್ಷಣ ಕಂಡುಬಂದಿಲ್ಲ. ಹೆಚ್ಚಿನ ಪರೀಕ್ಷೆಗಾಗಿ ಜಬಲ್‌ಪುರಕ್ಕೆ ಕಳುಹಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಘಟನೆಯ ಬೆನ್ನಲ್ಲೇ ಗಿಳಿಗಳಿಗೆ ಸಾರ್ವಜನಿಕರು ಆಹಾರ ನೀಡುವುದನ್ನು ನಿರ್ಬಂಧಿಸಲಾಗಿದ್ದು, ಕಟ್ಟುನಿಟ್ಟಾಗಿ ಜಾರಿ ಮಾಡಲು ಸಿಬ್ಬಂದಿ ನಿಯೋಜಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.