ADVERTISEMENT

ಮಧ್ಯಪ್ರದೇಶ: ಕಮಲನಾಥ್ ವಿರುದ್ಧ ‘ಆಪರೇಷನ್‌ ಕಮಲ’

​ಪ್ರಜಾವಾಣಿ ವಾರ್ತೆ
Published 9 ಮಾರ್ಚ್ 2020, 19:56 IST
Last Updated 9 ಮಾರ್ಚ್ 2020, 19:56 IST
ಮಧ್ಯಪ್ರದೇಶ ಕಾಂಗ್ರೆಸ್‌ ನಾಯಕರಾದ ಜ್ಯೋತಿರಾದಿತ್ಯ ಸಿಂಧಿಯಾ ಮುಖ್ಯಮಂತ್ರಿ ಕಮಲನಾಥ್
ಮಧ್ಯಪ್ರದೇಶ ಕಾಂಗ್ರೆಸ್‌ ನಾಯಕರಾದ ಜ್ಯೋತಿರಾದಿತ್ಯ ಸಿಂಧಿಯಾ ಮುಖ್ಯಮಂತ್ರಿ ಕಮಲನಾಥ್    

ಬೆಂಗಳೂರು: ಮಧ್ಯಪ್ರದೇಶ ಸರ್ಕಾರ ಪತನಗೊಳಿಸುವ ಯತ್ನ ಆರಂಭಿಸಿರುವ ಬಿಜೆಪಿ, ಮುಖ್ಯಮಂತ್ರಿ ಕಮಲನಾಥ್‌ ಸಂಪುಟದ ಆರು ಸಚಿವರು, ಕಾಂಗ್ರೆಸ್‌ನ 11 ಶಾಸಕರನ್ನು ವಿಶೇಷ ವಿಮಾನದಲ್ಲಿ ಇಲ್ಲಿಗೆ ಕರೆತಂದಿದೆ.

‘ಆಪರೇಶನ್ ಕಮಲ’ಕ್ಕೆ ಒಳಗಾಗಿರುವ ಎಲ್ಲ ಶಾಸಕರು ಮಧ್ಯಪ್ರದೇಶದ ಕಾಂಗ್ರೆಸ್‌ ಮುಖಂಡ, ಒಂದು ಕಾಲದಲ್ಲಿ ರಾಹುಲ್ ಗಾಂಧಿ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದ ಜ್ಯೋತಿರಾದಿತ್ಯ ಸಿಂಧಿಯಾ ಅವರ ಬೆಂಬಲಿಗರು ಎಂದು ಹೇಳಲಾಗುತ್ತಿದೆ.

ನಗರದ ಹೊರವಲಯದ ಮಾರತ್‌ಹಳ್ಳಿಯಲ್ಲಿರುವ ‘ಆದರ್ಶ್‌ ರಿಟ್ರೀಟ್‌’ನಲ್ಲಿ ಈ ಸಚಿವರು, ಶಾಸಕರನ್ನು ಇರಿಸಲಾಗಿದೆ. ಕಾಂಗ್ರೆಸ್‌ನ ಇಬ್ಬರು, ಬಿಎಸ್‌ಪಿಯ ಒಬ್ಬರು ಹಾಗೂ ಒಬ್ಬ ಪಕ್ಷೇತರ ಶಾಸಕ ಸೋಮವಾರ ತಡರಾತ್ರಿ ಈ ಗುಂಪನ್ನು ಸೇರಿಕೊಳ್ಳಲಿದ್ದಾರೆ ಎನ್ನಲಾಗಿದೆ.

ADVERTISEMENT

ಕಮಲನಾಥ್‌ ಸರ್ಕಾರಕ್ಕೆ ಬೆಂಬಲ ನೀಡಿರುವ 20 ಶಾಸಕರ ರಾಜೀನಾಮೆ ಕೊಡಿಸಿ, ಸರ್ಕಾರ ಪತನಗೊಳಿಸುವುದು ಬಿಜೆಪಿಯ ಉದ್ದೇಶ ಎನ್ನಲಾಗಿದೆ.17ಶಾಸಕರ ರಾಜೀನಾಮೆ ಕೊಡಿಸಿ ಕರ್ನಾಟಕದಲ್ಲಿದ್ದ ಜೆಡಿಎಸ್‌–ಕಾಂಗ್ರೆಸ್ ಸರ್ಕಾರ ಬೀಳಿಸಲಾಗಿತ್ತು. ಅದೇ ಮಾದರಿಯನ್ನು ಅನುಸರಿಸುವುದು ಬಿಜೆಪಿಯ ಲೆಕ್ಕಾಚಾರ ಎನ್ನಲಾಗಿದೆ.

ಈ ಶಾಸಕರಿಗೆ ಭದ್ರತೆ ಒದಗಿಸಲು ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಹಾಗೂ ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರಿಗೆ ಆ ಪಕ್ಷದ ವರಿಷ್ಠರು ಸೂಚನೆ ನೀಡಿದ್ದಾರೆ.ಬಿಜೆಪಿ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ಅರವಿಂದ ಲಿಂಬಾವಳಿಗೆ ಶಾಸಕರನ್ನು ಕಾಪಾಡುವ ಜವಾಬ್ದಾರಿ ವಹಿಸಲಾಗಿದೆ.

ಏತನ್ಮಧ್ಯೆ, ಕಾಂಗ್ರೆಸ್ ನಾಯಕರಾದ ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್, ದಿನೇಶ್ ಗುಂಡೂರಾವ್‌, ಜಿ. ಪರಮೇಶ್ವರ ಅವರಿಗೆ ಕರೆಮಾಡಿರುವ ಕಮಲನಾಥ್‌, ತಮ್ಮ ಶಾಸಕರನ್ನು ಸಂಪರ್ಕಿಸುವ ಯತ್ನ ನಡೆಸುವಂತೆ ಮನವಿ ಮಾಡಿದ್ದಾರೆ ಎನ್ನಲಾಗಿದೆ.

ಸಚಿವರ ರಾಜೀನಾಮೆ(ಭೋಪಾಲ್‌ ವರದಿ, ಪಿಟಿಐ): ‘ಸೋಮವಾರ ರಾತ್ರಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಎಲ್ಲ ಸಚಿವರೂ ತಮ್ಮ ರಾಜೀನಾಮೆಯನ್ನು ಮುಖ್ಯಮಂತ್ರಿ ಕಮಲ್‌ನಾಥ್‌ ಅವರಿಗೆ ನೀಡಿದ್ದಾರೆ’ ಎಂದು ಹಿರಿಯ ಸಚಿವರೊಬ್ಬರು ತಿಳಿಸಿದರು.

‘ಮುಖ್ಯಮಂತ್ರಿಯವರ ಜೊತೆಗಿನ ಒಗ್ಗಟ್ಟು ಪ್ರದರ್ಶಿಸಲು ರಾಜೀನಾಮೆ ಸಲ್ಲಿಸಿದ್ದೇವೆ’ ಎಂದರು.

ಸರ್ಕಾರ ಪತನವಾಗಲು ಬಿಡುವುದಿಲ್ಲ: ‘ಮಾಫಿಯಾ→ಸಹಾಯದೊಂದಿಗೆ ನನ್ನ ಸರ್ಕಾರವನ್ನು ಉರುಳಿಸುವ ಪ್ರಯತ್ನ ಸಫಲ
ವಾಗಲು ಬಿಡುವುದಿಲ್ಲ. ಜನರ ಸೇವೆಗೇ ನನ್ನ ಜೀವನವನ್ನು ಮುಡಿಪಾಗಿಟ್ಟಿದ್ದೇನೆ. ಆದರೆ ನನ್ನ ಸರ್ಕಾರವನ್ನು ಉರುಳಿಸಲು ಬಿಜೆಪಿ ವಾಮ ಮಾರ್ಗವನ್ನು ಹಿಡಿದಿದೆ’ ಎಂದು ಕಮಲನಾಥ್‌ ಹೇಳಿದ್ದಾರೆ.

ಈ ಮಧ್ಯೆ ಬಿಜೆಪಿ ಮಂಗಳವಾರ ಶಾಸಕಾಂಗ ಪಕ್ಷದ ಸಭೆಯನ್ನು ಕರೆದಿದ್ದು, ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ ಶಿವರಾಜ್‌ ಸಿಂಗ್‌ ಚೌಹಾಣ್‌ ಅವರು ನಾಯಕರಾಗಿ ಆಯ್ಕೆಯಾಗುವ ಸಾಧ್ಯತೆಗಳಿವೆ ಎಂದು ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.