ಭೋಪಾಲ್: ಮಧ್ಯಪ್ರದೇಶದಲ್ಲಿ 52 ವರ್ಷಗಳ ಹಿಂದೆಯೂ ಕಾಂಗ್ರೆಸ್ ಸರ್ಕಾರ ಪತನಗೊಂಡಿತ್ತು. ಗ್ವಾಲಿಯರ್‌ನ ರಾಜವಂಶಸ್ಥೆ ರಾಜಮಾತೆ ವಿಜಯರಾಜೇ ಸಿಂಧಿಯಾ ಅವರು ಕಾಂಗ್ರೆಸ್ ತೊರೆದ ಕಾರಣ ಆಗಿನ ಸರ್ಕಾರ ಉರುಳಿತ್ತು. ಈಗ ಅದೇ ರೀತಿಯ ಇತಿಹಾಸ ಪುನರಾವರ್ತನೆಗೊಂಡಿದೆ.
ಪ್ರಧಾನಿ ಜವಾಹರಲಾಲ್ ನೆಹರೂ ಅವರಿಗೆ ಆಪ್ತರಾಗಿದ್ದ ಜ್ಯೋತಿರಾದಿತ್ಯ ಸಿಂಧಿಯಾ ಅವರ ಅಜ್ಜಿ ವಿಜಯ ರಾಜೇ ಅವರು ಕಾಂಗ್ರೆಸ್‌ನಿಂದ 1957ರಲ್ಲಿ ರಾಜಕೀಯ ಜೀವನ ಆರಂಭಿಸಿ ಸಂಸದರಾದರು. 1962ರಲ್ಲಿ ಮತ್ತೊಮ್ಮೆ ಸಂಸದರಾಗಿ ಆಯ್ಕೆಯಾಗಿದ್ದರು. ಆದರೆ, 1967ರಲ್ಲಿ ಕಾಂಗ್ರೆಸ್ ತೊರೆದರು.
‘ಡಿ.ಪಿ. ಮಿಶ್ರಾ ನೇತೃತ್ವದ ಕಾಂಗ್ರೆಸ್ ಸರ್ಕಾರವನ್ನು ವಿಜಯರಾಜೇ ಉರುಳಿಸಿದರು. ಈಗ ಅವರ ಮೊಮ್ಮಗ ಅದೇ ಹಾದಿಯನ್ನು ಹಿಡಿದಿದ್ದಾರೆ’ ಎಂದು ಸಿಂಧಿಯಾ ಕುಟುಂಬದ ಆಪ್ತರೊಬ್ಬರು ತಿಳಿಸಿದ್ದಾರೆ.
‘1967ರ ಜುಲೈನಲ್ಲಿ ನಡೆದ ಹಣ ಮತ್ತು ತೋಳ್ಬಲ ರಾಜಕಾರಣ ಈಗ ಪುನಾರವರ್ತನೆಯಾಗಿದೆ’ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
‘ಲೋಕಸಭೆ ಮತ್ತು ವಿಧಾನಸಭೆ ಚುನಾವಣೆಗಳು ಏಕಕಾಲಕ್ಕೆ ನಡೆಯುತ್ತಿದ್ದಾಗ ವಿಜಯರಾಜೇ ಅವರು ಟಿಕೆಟ್‌ಗಾಗಿ ತಮ್ಮ ಬೆಂಬಲಿಗರ ಪಟ್ಟಿಯೊಂದಿಗೆ ಡಿ.ಪಿ.ಮಿಶ್ರಾ ಬಳಿ ತೆರಳಿದ್ದರು. ಆದರೆ, ಮಿಶ್ರಾ ಎರಡು ಗಂಟೆಗಳ ಕಾಲ ಕಾಯಿಸಿದ್ದರು. ಇದರಿಂದ, ರಾಜಮಾತೆ ತೀವ್ರ ಆಕ್ರೋಶಗೊಂಡರು. ಗ್ವಾಲಿಯರ್‌ನ ಉಷಾ ಕಿರಣ್ ಹೋಟೆಲ್‌ನಲ್ಲಿರಿಸಿದ್ದ 36 ಶಾಸಕರು ಕಾಂಗ್ರೆಸ್‌ನಿಂದ ಪಕ್ಷಾಂತರವಾಗುವಂತೆ ಮಾಡಿದ್ದರು. ಗೋವಿಂದ್ ನಾರಾಯಣ ಸಿಂಗ್ ಅವರನ್ನು ಮುಖ್ಯಮಂತ್ರಿಯನ್ನಾಗಿ ಮಾಡಿದ್ದರು. ಆದರೆ, ಅವರ ಸರ್ಕಾರ 18 ತಿಂಗಳು ಮಾತ್ರ ಆಡಳಿತ ನಡೆಸಿತು’ ಎಂದು ವಿವರಿಸಿದ್ದಾರೆ.
ಕಾಂಗ್ರೆಸ್ ತೊರೆದ ಬಳಿಕ ಸ್ವತಂತ್ರ ಪಕ್ಷದ ಟಿಕೆಟ್ ಪಡೆದು ಗುನಾ ಲೋಕಸಭಾ ಕ್ಷೇತ್ರದಿಂದ ಜಯಗಳಿಸಿದರು. ಬಳಿಕ, ಕೆಲ ದಿನಗಳಲ್ಲೇ ಭಾರತೀಯ ಜನ ಸಂಘ ಸೇರಿದರು. ಮಧ್ಯಪ್ರದೇಶ ರಾಜಕೀಯದಲ್ಲಿ ಸಕ್ರಿಯವಾಗುವ ಉದ್ದೇಶದಿಂದ ಸಂಸದ ಸ್ಥಾನಕ್ಕೂ ರಾಜೀನಾಮೆ ನೀಡಿದರು.
ಕಾಂಗ್ರೆಸ್ ಕಾರ್ಯಕರ್ತರ ಬಂಧನ
ದೇವನಹಳ್ಳಿ: ಮಧ್ಯಪ್ರದೇಶದ ಕಾಂಗ್ರೆಸ್ ಶಾಸಕರು ಬೀಡುಬಿಟ್ಟಿರುವ ಇಲ್ಲಿನ ಪ್ರೆಸ್ಟೀಜ್ ಗಾಲ್ಫ್ ಶೇರ್ ರೆಸಾರ್ಟ್ ಮುಂಭಾಗ ಮೂನ್ನೂರಕ್ಕೂ ಹೆಚ್ಚು ಕಾಂಗ್ರೆಸ್ ಕಾರ್ಯಕರ್ತರು ಬಿಜೆಪಿ ವಿರುದ್ಧ ಪ್ರತಿಭಟನೆ ನಡೆಸಿದರು.
ಜಿಲ್ಲಾ ಪಂಚಾಯಿತಿ ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷ ಕೆ.ಸಿ.ಮಂಜುನಾಥ್ ಮತ್ತು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪ್ರಸನ್ನ ಕುಮಾರ್ ಮಾತನಾಡಿ, ‘ದೇಶದ ಈಶಾನ್ಯ ಭಾಗದ ರಾಜ್ಯಗಳಲ್ಲಿ ಬಿಜೆಪಿ ಅನುಸರಿಸಿದ ಕಾರ್ಯತಂತ್ರ ವಿಫಲವಾಗಿದೆ. ಪಂಜಾಬ್ ಮತ್ತು ಹರಿಯಾಣ ರಾಜ್ಯಗಳು ಹೊರತಲ್ಲ. ಕರ್ನಾಟಕ ರಾಜ್ಯದಲ್ಲಿ ಬಿಜೆಪಿಯ ಆಪರೇಷನ್ ಕಮಲದಿಂದಾಗಿ ಅನವಶ್ಯಕ ಉಪಚುನಾವಣೆ ಎದುರಾಯಿತು’ ಎಂದರು.
ಪ್ರತಿಭಟನೆ ತೀವ್ರ ಸ್ವರೂಪ ತಾಳುತ್ತಿದ್ದಂತೆಯೇ 40ಕ್ಕೂ ಹೆಚ್ಚು ಮುಖಂಡರನ್ನು ಪೊಲೀಸರು ಬಂಧಿಸಿದರು.
‘ಪ್ರಧಾನಿಯಿಂದ ಕಾಂಗ್ರೆಸ್ ಸರ್ಕಾರ ಅಸ್ಥಿರ’
ನವದೆಹಲಿ (ಪಿಟಿಐ): ’ಮಧ್ಯಪ್ರದೇಶದಲ್ಲಿ ಜನರಿಂದ ಚುನಾಯಿತವಾದ ಕಾಂಗ್ರೆಸ್ ಸರ್ಕಾರವನ್ನು ಪ್ರಧಾನಿ ನರೇಂದ್ರ ಮೋದಿ ಅಸ್ಥಿರಗೊಳಿಸುತ್ತಿದ್ದಾರೆ‘ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ದೂರಿದರು.
‘ಕಾಂಗ್ರೆಸ್ ಸರ್ಕಾರವನ್ನು ಪತನಗೊಳಿಸುವಲ್ಲಿ ಮಗ್ನರಾಗಿರುವ ಪ್ರಧಾನಿ ಅವರು, ತೈಲ ಬೆಲೆಗಳು ಜಾಗತಿಕಮಟ್ಟದಲ್ಲಿ ಶೇಕಡ 35ರಷ್ಟು ಕುಸಿದಿವೆ ಎನ್ನುವುದನ್ನು ಗಮನಸಿದಂತಿಲ್ಲ. ಈ ಬೆಲೆ ಕುಸಿತದ ಲಾಭವನ್ನು ಜನರಿಗೆ ವರ್ಗಾಯಿಸಲಿ‘ ಎಂದು ಟ್ವೀಟ್ ಮಾಡಿದ್ದಾರೆ.
‘ಪೆಟ್ರೋಲ್ ಬೆಲೆಯನ್ನು ಕಡಿಮೆ ಮಾಡಿ. ಇದರಿಂದ, ಸ್ಥಗಿತವಾಗಿರುವ ಆರ್ಥಿಕತೆಗೂ ಉತ್ತೇಜನ ನೀಡಿದಂತಾಗುತ್ತದೆ‘ ಎಂದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.