ADVERTISEMENT

ಅಪ್ರಾಪ್ತ ವಿದ್ಯಾರ್ಥಿಗಳ ಮೇಲೆ ಲೈಂಗಿಕ ದೌರ್ಜನ್ಯ ಆರೋಪ: ಮದರಸಾ ಶಿಕ್ಷಕನ ಬಂಧನ

ಶಿಕ್ಷಕ ಮಾತ್ರವಲ್ಲದೇ ಆತನ ವಿರುದ್ಧ ವಿದ್ಯಾರ್ಥಿಗಳು ದೂರು ನೀಡಿದರೂ ‌ಯಾವುದೇ ಕ್ರಮ ಕೈಗೊಳ್ಳದ ಆರೋಪದ ಮೇಲೆ ಮದರಸಾದ ಟ್ರಸ್ಟಿಯನ್ನು ಸಹ ಬಂಧಿಸಲಾಗಿದೆ.

ಪಿಟಿಐ
Published 24 ಅಕ್ಟೋಬರ್ 2023, 9:23 IST
Last Updated 24 ಅಕ್ಟೋಬರ್ 2023, 9:23 IST
<div class="paragraphs"><p>ಬಂಧನ (ಪ್ರಾತಿನಿಧಿಕ ಚಿತ್ರ)</p></div>

ಬಂಧನ (ಪ್ರಾತಿನಿಧಿಕ ಚಿತ್ರ)

   

ಅಹಮದಾಬಾದ್: ಗುಜರಾತ್‌ನ ಜುನಾಗಢ ಜಿಲ್ಲೆಯ ಮದರಸಾವೊಂದರ 10 ಅಪ್ರಾಪ್ತ ವಿದ್ಯಾರ್ಥಿಗಳ ಮೇಲೆ ಅಸ್ವಾಭಾವಿಕ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದ ಮೇಲೆ 25 ವರ್ಷದ ಶಿಕ್ಷಕನನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಶಿಕ್ಷಕ ಮಾತ್ರವಲ್ಲದೇ ಆತನ ವಿರುದ್ಧ ವಿದ್ಯಾರ್ಥಿಗಳು ದೂರು ನೀಡಿದರೂ ‌ಯಾವುದೇ ಕ್ರಮ ಕೈಗೊಳ್ಳದ ಆರೋಪದ ಮೇಲೆ ಮದರಸಾದ ಟ್ರಸ್ಟಿಯನ್ನು ಸಹ ಬಂಧಿಸಲಾಗಿದೆ ಎಂದು ಜುನಾಗಢ್ ಜಿಲ್ಲಾ ಪೊಲೀಸರು ಸೋಮವಾರ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ADVERTISEMENT

ಪ್ರಕರಣದ ಸಂಪೂರ್ಣ ವಿವರ: ‌17 ವರ್ಷದ ಬಾಲಕ ನೀಡಿದ ದೂರಿನ ಮೇಲೆ ಮಾಂಗ್ರೋಲ್ ಪೊಲೀಸರು ಇಬ್ಬರು ಆರೋಪಿಗಳ ವಿರುದ್ಧ ಭಾರತೀಯ ದಂಡ ಸಂಹಿತೆ ಸೆಕ್ಷನ್ 377 (ಅಸ್ವಾಭಾವಿಕ ಸಂಭೋಗ), 323 (ಹಲ್ಲೆ), 506-2 (ಜೀವ ಬೆದರಿಕೆ) ಅಡಿಯಲ್ಲಿ ಪೋಕ್ಸೊ ಕಾಯಿದೆ ಅನ್ವಯ ಭಾನುವಾರ ಎಫ್‌ಐಆರ್ ದಾಖಲಿಸಿದ್ದಾರೆ.

ಮಾಂಗ್ರೋಲ್-ವೆರಾವಲ್ ಬೈಪಾಸ್‌ನಲ್ಲಿರುವ ವಸತಿ ಶಾಲೆಯ ವಿದ್ಯಾರ್ಥಿಯೊಬ್ಬ ತನ್ನ ತಾಯಿಗೆ ಕರೆ ಮಾಡಿ ವಿದ್ಯಾರ್ಥಿಗಳೊಂದಿಗೆ ಶಿಕ್ಷಕ ಲೈಂಗಿಕ ಕ್ರಿಯೆ ನಡೆಸಿರುವ ಬಗ್ಗೆ ಹೇಳಿದಾಗ ಘಟನೆ ಬೆಳಕಿಗೆ ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ವಿದ್ಯಾರ್ಥಿಯ ಮಾಹಿತಿಯ ಮೇರೆಗೆ ಆತನ ತಾಯಿ ಪೊಲೀಸರನ್ನು ಸಂಪರ್ಕಿಸಿ ದೂರು ದಾಖಲಿಸಿದ್ದಾರೆ. ಅಕ್ಟೋಬರ್ 21 ರಂದು ಮದರಸಾಕ್ಕೆ ಭೇಟಿ ನೀಡಿದ ಪೊಲೀಸರು ಕೆಲವು ಮುಸ್ಲಿಂ ಮುಖಂಡರ ಸಹಾಯದಿಂದ ವಿದ್ಯಾರ್ಥಿಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡಿದ್ದರು.

ಮದರಸಾದಲ್ಲಿ ಓದುತ್ತಿರುವ 10 ಮಂದಿ ವಿದ್ಯಾರ್ಥಿಗಳು ಶಿಕ್ಷಕ ತಮ್ಮ ಮೇಲೆ ಅಸ್ವಾಭಾವಿಕ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ಆರೋಪಿಸಿದ್ದಾರೆ. ಅಲ್ಲದೇ ‌ಘಟನೆಯ ಬಗ್ಗೆ ಯಾವುದೇ ವಿದ್ಯಾರ್ಥಿ ತಮ್ಮ ಪೋಷಕರಿಗೆ ದೂರು ನೀಡಿದರೆ ಕೊಲ್ಲುವುದಾಗಿ ಬೆದರಿಕೆ ಹಾಕಿದ್ದಾರೆ. ಈ ಬಗ್ಗೆ ಮದರಸಾದ ಟ್ರಸ್ಟಿಯನ್ನು ಸಂಪರ್ಕಿಸಿದಾಗ ಅವರು ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ವಿದ್ಯಾರ್ಥಿಗಳು ಆರೋಪಿಸಿದ್ದಾರೆ.

ಶಿಕ್ಷಕನ ವಿರುದ್ಧ ಪ್ರಕರಣ ದಾಖಲಾಗುತ್ತಿದ್ದಂತೆ ಟ್ರಸ್ಟಿ ಅವರು(ಶಿಕ್ಷಕ) ಸ್ಥಳದಿಂದ ಪರಾರಿಯಾಗಲು ಸಹಾಯ ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ತನಿಖೆಯ ಭಾಗವಾಗಿ ಜುನಾಗಢ್ ಪೊಲೀಸ್ ವರಿಷ್ಠಾಧಿಕಾರಿ ಹರ್ಷದ್ ಮೆಹ್ತಾ ಮದರಸಾಕ್ಕೆ ಭೇಟಿ ನೀಡಿದ್ದಾರೆ. ಈ ಬಗ್ಗೆ ನಿಷ್ಪಕ್ಷಪಾತ ತನಿಖೆ ನಡೆಸುವುದಾಗಿ ಅವರು ವಿದ್ಯಾರ್ಥಿಗಳ ಪೋಷಕರಿಗೆ ಭರವಸೆ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.