ADVERTISEMENT

ಕರ್ನಾಟಕದ ವಿರುದ್ಧ ಕಠಿಣ ನಿಲುವಿಗೆ ಎಂವಿಎ ಆಗ್ರಹ

​ಪ್ರಜಾವಾಣಿ ವಾರ್ತೆ
Published 21 ಡಿಸೆಂಬರ್ 2022, 21:45 IST
Last Updated 21 ಡಿಸೆಂಬರ್ 2022, 21:45 IST
ಸಂಜಯ್‌ ರಾವುತ್‌
ಸಂಜಯ್‌ ರಾವುತ್‌   

ಮುಂಬೈ: ಕರ್ನಾಟಕ– ಮಹಾರಾಷ್ಟ್ರ ಗಡಿ ವಿವಾದದ ಕುರಿತು ಕಠಿಣ ನಿಲುವು ತೆಗೆದುಕೊಳ್ಳುವಂತೆ ಮಹಾರಾಷ್ಟ್ರ ಸರ್ಕಾರವನ್ನು ವಿರೋಧ ಪಕ್ಷಗಳ ಮೈತ್ರಿಕೂಟವಾದ ಮಹಾ ವಿಕಾಸ ಅಘಾಡಿ (ಎಂವಿಎ) ಬುಧವಾರ ಒತ್ತಾಯಿಸಿದೆ.

ಗಡಿ ವಿಚಾರವಾಗಿ ಕರ್ನಾಟಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ನೀಡಿರುವ ತೀಕ್ಷ್ಣವಾದ ಹೇಳಿಕೆಗಳ ಹಿನ್ನೆಲೆಯಲ್ಲಿ ಮೈತ್ರಿಕೂಟದ ಹಲವು ನಾಯಕರು ಪ್ರತಿಕ್ರಿಯೆ ನೀಡಿದ್ದಾರೆ. ಜೊತೆಗೆ, ಸರ್ಕಾರ ತೆಗೆದುಕೊಳ್ಳುವ ಕ್ರಮ ಮತ್ತು ನಿರ್ಣಯವನ್ನು ಬೆಂಬಲಿಸುವುದಾಗಿಯೂ ಅವರು ಭರವಸೆ ನೀಡಿದ್ದಾರೆ.

‘ಬೊಮ್ಮಾಯಿ ಅವರ ಹೇಳಿಕೆ ಮತ್ತು ನಡೆಗಳ ವಿರುದ್ಧ ಕಠಿಣ ನಿಲುವು ತೆಗೆದುಕೊಳ್ಳಲೇಬೇಕು. ಕರ್ನಾಟಕ ಗಡಿ ಭಾಗದಲ್ಲಿರುವ ಮರಾಠಿ ಭಾಷಿಕರ ಪರವಾಗಿ ಮತ್ತು ಕೆಲ ಭೂಪ್ರದೇಶದ ಮೇಲಿನ ನಮ್ಮ ಹಕ್ಕನ್ನು ಸ್ಥಾಪಿಸಲು ಸರ್ವಾನುಮತದ ಗೊತ್ತುವಳಿಯನ್ನು ಉಭಯ ಸದನಗಳು ಹೊರಡಿಸಬೇಕು’ ಎಂದು ಎನ್‌ಸಿಪಿ ನಾಯಕ, ವಿಧಾನಸಭೆಯಲ್ಲಿ ವಿರೋಧ ಪಕ್ಷದ ನಾಯಕ ಅಜಿತ್‌ ಪವಾರ್‌ ಹೇಳಿದರು.

ADVERTISEMENT

ರಾವುತ್‌ ಹೇಳಿಕೆ: ಗಡಿ ವಿವಾದವನ್ನು ಚೀನಾ ಅತಿಕ್ರಮಣಕ್ಕೆ ಹೋಲಿಸಿರುವ ಶಿವಸೇನಾ (ಉದ್ಧವ್‌ ಬಾಳಾಸಾಹೇಬ್‌ ಠಾಕ್ರೆ) ನಾಯಕ ಸಂಜಯ್‌ ರಾವುತ್‌, ‘ಭಾರತದ ಭೂ ಪ್ರದೇಶವನ್ನು ಚೀನಾ ಪ್ರವೇಶಿಸಿರುವಂತೆ ನಾವು ಕರ್ನಾಟಕವನ್ನು ಪ್ರವೇಶಿಸೋಣ. ನಮಗೆ ಯಾರ ಅನುಮತಿಯೂ ಬೇಕಾಗಿಲ್ಲ. ನಾವು ಈ ವಿವಾದವನ್ನು ಮಾತುಕತೆ ಮೂಲಕ ಬಗೆಹರಿಸಿಕೊಳ್ಳಲು ನಿರ್ಧರಿಸಿದ್ದೆವು.
ಆದರೆ ಬೊಮ್ಮಾಯಿ ಅವರು ಬೆಂಕಿ ಹೊತ್ತಿಸುತ್ತಿದ್ದಾರೆ’ ಎಂದು ಸುದ್ದಿಗಾರರಿಗೆ ಹೇಳಿದ್ದಾರೆ.

‘ಶಿಂದೆ– ಫಡಣವೀಸ್‌ ನೇತೃತ್ವದ ಸರ್ಕಾರವು ಬೊಮ್ಮಾಯಿ ಅವರನ್ನು ಏಕೆ ರಕ್ಷಿಸುತ್ತಿದೆ’ ಎಂದು ಕಾಂಗ್ರೆಸ್‌ ಹಿರಿಯ ನಾಯಕ ಅಶೋಕ್‌ ಚೌಹಾಣ್‌ ಪ್ರಶ್ನಿಸಿದ್ದಾರೆ.

ಮರುಪರಿಶೀಲನೆ ಎಚ್ಚರಿಕೆ: (ನಾಗ್ಪುರ ವರದಿ) ಬೊಮ್ಮಾಯಿ ಅವರು ಬೇಜವಾಬ್ದಾರಿಯುತ ಹೇಳಿಕೆಗಳನ್ನು ನೀಡುವುದನ್ನು ನಿಲ್ಲಿಸದಿದ್ದರೆ ಕರ್ನಾಟಕಕ್ಕೆ ನದಿ ನೀರುಪೂರೈಕೆ ಮಾಡುವ ಕುರಿತು ಮಹಾರಾಷ್ಟ್ರ ಪುನರ್‌ಪರಿಶೀಲನೆ ಮಾಡಬೇಕಾಗುತ್ತದೆ ಎಂದು ಮಹಾರಾಷ್ಟ್ರ ಸಚಿವ ಶಂಭುರಾಜ್‌ ದೇಸಾಯ್‌ ಅವರು ಎಚ್ಚರಿಸಿದ್ದಾರೆ.

ಅಣೆಕಟ್ಟುಗಳ ಎತ್ತರ ಹೆಚ್ಚಿಸಿ: ಕರ್ನಾಟಕದ ಕಡೆ ಹರಿಯುವ ನದಿಗಳಿಗೆ ಕಟ್ಟಲಾಗಿರುವ ಅಣೆಕಟ್ಟುಗಳ ಎತ್ತರವನ್ನು ಹೆಚ್ಚಿಸಿ ನದಿಗಳ ನೀರು ಕರ್ನಾಟಕಕ್ಕೆ ಹರಿಯುವುದನ್ನು ತಡೆಯುವಂತೆ ಎನ್‌ಸಿಪಿ ನಾಯಕ ಜಯಂತ್‌ ಪಾಟೀಲ್‌ ಅವರು ಮಹಾರಾಷ್ಟ್ರ ವಿಧಾನಸಭೆಯಲ್ಲಿ ಮಂಗಳವಾರ ಕರೆ ನೀಡಿದ್ದಾರೆ.

ಕೊಲ್ಹಾಪುರದಲ್ಲಿ ಪ್ರತಿಭಟನೆ 26ರಂದು: ಕಿಣೇಕರ್‌

ಬೆಳಗಾವಿ: ‘ಮರಾಠಿಗರ ಮೇಲೆ ರಾಜ್ಯ ಸರ್ಕಾರ ಮಾಡುತ್ತಿರುವ ಅನ್ಯಾಯ ಖಂಡಿಸಿ ಡಿ.26ರಂದು ಮಹಾರಾಷ್ಟ್ರದ ಕೊಲ್ಹಾಪುರ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಪ್ರತಿಭಟನೆ ನಡೆಸಲು ಮುಂದಾಗಿದ್ದೇವೆ’ ಎಂದು ಮಹಾರಾಷ್ಟ್ರ ಏಕೀಕರಣ ಸಮಿತಿ ಕಾರ್ಯಾಧ್ಯಕ್ಷ ಮನೋಹರ ಕಿಣೇಕರ್‌ ಹೇಳಿದರು.

‘ಮಹಾಮೇಳಾವ್‌ ಆಯೋಜಿಸಲು ಮುಂದಾಗಿದ್ದೆವು. ಆದರೆ, ಜಿಲ್ಲಾಡಳಿತ ಅನುಮತಿ ಕೊಡದೆ ಮರಾಠಿಗರಿಗೆ ಅನ್ಯಾಯ ಮಾಡಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.