ADVERTISEMENT

ವಲಸೆ ಕಾರ್ಮಿಕರಿಗಾಗಿ ನಿಯಮಾವಳಿ ರೂಪಿಸಿ: ಉದ್ಧವ್‌ ಠಾಕ್ರೆ ಒತ್ತಾಯ

ಪಿಟಿಐ
Published 22 ಏಪ್ರಿಲ್ 2020, 20:27 IST
Last Updated 22 ಏಪ್ರಿಲ್ 2020, 20:27 IST
ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ
ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ   

ಮುಂಬೈ:ಲಾಕ್‌ಡೌನ್‌ನಿಂದಾಗಿ ಸಮಸ್ಯೆಗೆ ಸಿಲುಕಿರುವ ವಲಸೆ ಕಾರ್ಮಿಕರನ್ನು ಅವರ ಊರುಗಳಿಗೆ ಕಳುಹಿಸುವ ಸಂಬಂಧ, ಈ ತಿಂಗಳ ಅಂತ್ಯದೊಳಗೆ ನಿಯಮಾವಳಿ ರೂಪಿಸುವಂತೆ ಮಹಾರಾಷ್ಟ್ರ ಮುಖ್ಯಮಂತ್ರಿಉದ್ಧವ್‌ ಠಾಕ್ರೆ ಒತ್ತಾಯಿಸಿದ್ದಾರೆ.

ಹೆಚ್ಚುವರಿ ಕಾರ್ಯದರ್ಶಿ ಮನೋಜ್ ಜೋಶಿ ನೇತೃತ್ವದಲ್ಲಿ ಮಂಗಳವಾರ ಸಂಜೆ ಕೇಂದ್ರ ಸರ್ಕಾರದ ವತಿಯಿಂದ ನಡೆದ ವಿಡಿಯೊ ಕಾನ್ಫರೆನ್ಸ್‌ನಲ್ಲಿ ಅವರು ಈ ವಿಷಯ ತಿಳಿಸಿದರು.

‘ಆರು ಲಕ್ಷಕ್ಕೂ ಹೆಚ್ಚು ವಲಸೆ ಕಾರ್ಮಿಕರಿಗಾಗಿ ನಮ್ಮ ಸರ್ಕಾರ ಆಶ್ರಯ ಶಿಬಿರಗಳನ್ನು ತೆರೆದಿದೆ. ಅವರೆಲ್ಲರನ್ನು ಚೆನ್ನಾಗಿ ನೋಡಿಕೊಳ್ಳಲಾಗುತ್ತಿದೆ. ಆದರೆ, ಈ ಕಾರ್ಮಿಕರು ತಮ್ಮ ಊರುಗಳಿಗೆ ಹೋಗಲು ಬಯಸುತ್ತಿದ್ದಾರೆ. ಈ ಕಾರಣಕ್ಕಾಗಿ ಪ್ರತಿಭಟನೆಯನ್ನು ನಡೆಸುತ್ತಿದ್ದಾರೆ’ ಎಂದು ಠಾಕ್ರೆ ಹೇಳಿದರು.

ADVERTISEMENT

‘ಏಪ್ರಿಲ್ 30 ರಿಂದ ಮೇ 15ರ ನಡುವೆ ಕೊರೊನಾ ಸೋಂಕು ಹರಡುವಿಕೆ ಹೆಚ್ಚಲಿದೆ ಎಂದು ಕೇಂದ್ರ ಸರ್ಕಾರ ಭಾವಿಸಿದರೆ, ನಗರದಲ್ಲಿ ಸಿಲುಕಿರುವ ಕಾರ್ಮಿಕರನ್ನು ಅದಕ್ಕೂ ಮೊದಲು ತಮ್ಮ ಊರುಗಳಿಗೆ ಕಳುಹಿಸುವ ಅವಕಾಶವಿದೆಯೇ ಎನ್ನುವುದನ್ನು ಪರಿಗಣಿಸಬೇಕು. ಸಾಧ್ಯವಾದಲ್ಲಿ, ಈ ನಿಟ್ಟಿನಲ್ಲಿ ಮಾರ್ಗಸೂಚಿಗಳನ್ನು ಹೊರಡಿಸಬೇಕು’ ಎಂದು ತಿಳಿಸಿದ್ದಾರೆ.

‘ರಾಜ್ಯದಲ್ಲಿ ರೋಗದ ಲಕ್ಷಣಗಳಿಲ್ಲದ ಸೋಂಕಿತರೇ ಶೇ 80 ರಷ್ಟಿದ್ದಾರೆ. ಇದರಕ್ಕೆ ಕಾರಣವೇನು ಎಂಬುದರ ಕುರಿತು ಅಚ್ಚರಿ ವ್ಯಕ್ತಪಡಿಸಿದ ಅವರು, ರೋಗ ತಡೆಗೆ ದುಬೈನಲ್ಲಿ ಯಾವ ರೀತಿಯ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ ಎಂಬುದನ್ನು ಅಧ್ಯಯನ ಮಾಡುವ ಅಗತ್ಯವಿದೆ’ ಎಂದು ಅಭಿಪ್ರಾಯಪಟ್ಟರು.

‘ಅಮೆರಿಕದ ಪರಿಸ್ಥಿತಿ ಹೇಗಿದೆ ಎಂಬುದು ನಮಗೆಲ್ಲರಿಗೂ ತಿಳಿದಿದೆ. ಆದರೆ, ದುಬೈನಲ್ಲಿ ಯಾವ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ ಎಂಬುದರ ಅಧ್ಯಯನ ಅಗತ್ಯ. ಈ ಎರಡು ಸ್ಥಳಗಳ ಮೂಲಕವೇ ರಾಜ್ಯಕ್ಕೆ ಸೋಂಕು ಪ್ರವೇಶಿಸಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.