ADVERTISEMENT

ಮಹಾ ಕುಂಭ ಮೇಳ: 10 ರಾಷ್ಟ್ರಗಳ 21 ಪ್ರತಿನಿಧಿಗಳಿಂದ ಸಂಗಮದಲ್ಲಿ ಪವಿತ್ರ ಸ್ನಾನ

ಪಿಟಿಐ
Published 15 ಜನವರಿ 2025, 10:26 IST
Last Updated 15 ಜನವರಿ 2025, 10:26 IST
<div class="paragraphs"><p>ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನ ತ್ರಿವೇಣಿ ಸಂಗಮದಲ್ಲಿ ಸಾಧುಗಳ ಅಮೃತ ಸ್ನಾನ</p></div>

ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನ ತ್ರಿವೇಣಿ ಸಂಗಮದಲ್ಲಿ ಸಾಧುಗಳ ಅಮೃತ ಸ್ನಾನ

   

ಪಿಟಿಐ ಚಿತ್ರ

ಮಹಾಕುಂಭ ನಗರ: ಮಹಾಕುಂಭ ಮೇಳದಲ್ಲಿ ಪಾಲ್ಗೊಳ್ಳುವಂತೆ ಕೇಂದ್ರ ಸರ್ಕಾರದ ಆಮಂತ್ರಣ ಸ್ವೀಕರಿಸಿರುವ 10 ರಾಷ್ಟ್ರಗಳ 21 ಸದಸ್ಯರ ತಂಡವು ತ್ರಿವೇಣಿ ಸಂಗಮದಲ್ಲಿ ಗುರುವಾರ ಪವಿತ್ರ ಸ್ನಾನ ನಡೆಸಲಿದ್ದಾರೆ ಎಂದು ಉತ್ತರ ಪ್ರದೇಶ ಸರ್ಕಾರ ಬುಧವಾರ ತಿಳಿಸಿದೆ.

ADVERTISEMENT

ಈ ಪ್ರತಿನಿಧಿಗಳ ತಂಡದಲ್ಲಿ ಫಿಜಿ, ಫಿನ್‌ಲೆಂಡ್‌, ಗಯಾನಾ, ಮಲೇಷ್ಯಾ, ಮಾರಿಷಸ್‌, ಸಿಂಗಪೂರ, ದಕ್ಷಿಣ ಆಫ್ರಿಕಾ, ಶ್ರೀಲಂಕಾ, ಟ್ರಿನಿಡಾಡ್‌ ಹಾಗೂ ಟೊಬಾಗೊ ಮತ್ತು ಸಂಯುಕ್ತ ಅರಬ್ ರಾಷ್ಟ್ರದ ಪ್ರತಿನಿಧಿಗಳು ಪಾಲ್ಗೊಳ್ಳಲಿದ್ದಾರೆ.

ವಿದೇಶಾಂಗ ವ್ಯವಹಾರಗಳ ಇಲಾಖೆಯ ಬಾಹ್ಯ ಪ್ರಚಾರ ಮತ್ತು ಸಾರ್ವಜನಿಕ ರಾಜತಾಂತ್ರಿಕ ವಿಭಾಗವು ವಿದೇಶಿ ಅತಿಥಿಗಳನ್ನು ಆಮಂತ್ರಿಸಿತ್ತು. ಇವರಿಗೆ ಉತ್ತರ ಪ್ರದೇಶದ ಪ್ರವಾಸೋದ್ಯಮ ಅಭಿವೃದ್ಧಿ ನಿಗಮವು ಅರಾಳಿ ಬಳಿ ಸ್ಥಾಪಿಸಿರುವ ಟೆಂಟ್‌ ಸಿಟಿಯಲ್ಲಿ ವಾಸ್ತವ್ಯಕ್ಕೆ ವ್ಯವಸ್ಥೆ ಮಾಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ವಿವಿಧ ರಾಷ್ಟ್ರಗಳ ಪ್ರತಿನಿಧಿಗಳ ನಿಯೋಗವು ಮಹಾ ಕುಂಭಮೇಳ ಪ್ರದೇಶದಲ್ಲಿ ಬುಧವಾರ ಪ್ರವಾಸ ಕೈಗೊಂಡರು. ಬೆಳಿಗ್ಗೆ 5ರಿಂದ 6.30ರವರೆಗೆ ಪಾರಂಪರಿಕ ನಡಿಗೆಯಲ್ಲಿ ಪಾಲ್ಗೊಂಡರು. ಪ್ರಯಾಗ್‌ರಾಜ್‌ನ ಪಾರಂಪರಿಕ ಇತಿಹಾಸ, ಸಂಸ್ಕೃತಿಯ ಮಾಹಿತಿಯ ಜತೆಗೆ ಸಾಂಪ್ರದಾಯಿಕ ಊಟವನ್ನು ಸವಿದರು ಎಂದು ಸರ್ಕಾರ ಹೇಳಿದೆ.

ಗುರುವಾರ ಬೆಳಿಗ್ಗೆ 8ಕ್ಕೆ ನಿಯೋಗದ ಸದಸ್ಯರು ಹೆಲಿಕಾಪ್ಟರ್ ಮೂಲಕ ತ್ರಿವೇಣಿ ಸಂಗಮ ತಲುಪಿ, ಅಲ್ಲಿ ಪವಿತ್ರ ಸ್ನಾನದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

ಗಂಗಾ, ಯಮುನಾ ಹಾಗೂ ಪೌರಾಣಿಕ ಸರಸ್ವತಿ ನದಿಗಳು ಸೇರುವ ಪ್ರಯಾಗ್‌ರಾಜ್‌ನ ತ್ರಿವೇಣಿ ಸಂಗಮದಲ್ಲಿ ಪ್ರತಿ 12 ವರ್ಷಗಳಿಗೊಮ್ಮೆ ಮಹಾ ಕುಂಭ ನಡೆಯುತ್ತದೆ. ದೇಶ, ವಿದೇಶಗಳಿಂದ ಸಾಕಷ್ಟು ಸಂಖ್ಯೆಯಲ್ಲಿ ಇಲ್ಲಿ ಭಕ್ತರು ಸೇರಿ ಪವಿತ್ರ ಸ್ನಾನ ಮಾಡುತ್ತಾರೆ. ಜ. 13ರಿಂದ ಆರಂಭವಾಗಿರುವ ಮಹಾ ಕುಂಭ ಮೇಳವು ಫೆ. 16ರವರೆಗೂ ನಡೆಯಲಿದೆ. ಈ ಅವಧಿಯಲ್ಲಿ 40ರಿಂದ 45 ಕೋಟಿ ಜನರು ಇದರಲ್ಲಿ ಪಾಲ್ಗೊಳ್ಳುವ ನಿರೀಕ್ಷೆ ಎಂದು ಸರ್ಕಾರ ಅಂದಾಜಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.