ADVERTISEMENT

Maha Kumbh Stampede | ಕುಂಭವನ್ನು ಸೇನೆ ನಿರ್ವಹಿಸಲಿ: ಅಖಿಲೇಶ್ ಯಾದವ್

ಪಿಟಿಐ
Published 29 ಜನವರಿ 2025, 9:14 IST
Last Updated 29 ಜನವರಿ 2025, 9:14 IST
<div class="paragraphs"><p>ಅಖಿಲೇಶ್ ಯಾದವ್</p></div>

ಅಖಿಲೇಶ್ ಯಾದವ್

   

- ಪಿಟಿಐ ಚಿತ್ರ

ಲಕ್ನೊ: ಪ್ರಯಾಗ್‌ರಾಜ್‌ನಲ್ಲಿ ನಡೆಯುತ್ತಿರುವ ಮಹಾಕುಂಭ ಮೇಳದಲ್ಲಿ ನಡೆದ ಕಾಲ್ತುಳಿತ ಘಟನೆಗೆ ವಿರೋಧ ಪಕ್ಷಗಳು ಯೋಗಿ ಆದಿತ್ಯನಾಥ ನೇತೃತ್ವದ ರಾಜ್ಯ ಸರ್ಕಾರದ ಮೇಲೆ ಟೀಕಾ ಪ್ರಹಾರ ನಡೆಸಿವೆ.

ADVERTISEMENT

ಇದು ರಾಜ್ಯ ಸರ್ಕಾರದ ವೈಫಲ್ಯದ ಪ್ರತೀಕ ಎಂದು ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ದೂರಿದ್ದಾರೆ.

‘ಮಹಾಕುಂಭದಲ್ಲಿ ವಿಶ್ವದರ್ಜೆಯ ಸೌಲಭ್ಯ ಒದಗಿಸಲಾಗಿದೆ ಎಂದು ಹೇಳಿಕೊಂಡವರು, ಈ ಘಟನೆಗೆ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕು’ ಎಂದು ಆಗ್ರಹಿಸಿದ್ದಾರೆ.

‘ಮಹಾಕುಂಭದ ಬಗ್ಗೆ ಜನರು ಹಾಗೂ ಸಾಧುಗಳಲ್ಲಿ ನಂಬಿಕೆ ಮತ್ತೆ ಬರುವಂತೆ ಮಾಡಲು, ಕುಂಭದ ಆಡಳಿತ ಮತ್ತು ನಿರ್ವಹಣೆಯನ್ನು ಉತ್ತರ ಪ್ರದೇಶ ಸರ್ಕಾರಕ್ಕೆ ಬದಲು ಕೂಡಲೇ ಸೇನೆಗೆ ನೀಡಬೇಕು’ ಎಂದು ಅವರು ಎಕ್ಸ್‌ ತಾಣದಲ್ಲಿ ಬರೆದುಕೊಂಡಿದ್ದಾರೆ.

‘ವಿಶ್ವ ದರ್ಜೆಯ ಸವಲತ್ತುಗಳನ್ನು ಮಾಡಲಾಗಿದೆ ಎಂದು ಹೇಳಿಕೊಂಡದ್ದರ ಸತ್ಯ ಇದೀಗ ಎಲ್ಲರ ಮುಂದೆ ಬಯಲಾಗಿದೆ.ಈ ಬಗ್ಗೆ ಸುಳ್ಳು ಪ್ರಚಾರ ಮಾಡುತ್ತಿರುವವರು ಘಟನೆಯಲ್ಲಿ ಸತ್ತವರ ಪರವಾಗಿ ನೈತಿಕ ಹೊಣೆ ಹೊತ್ತು ಕೂಡಲೇ ರಾಜೀನಾಮೆ ನೀಡಬೇಕು’ ಎಂದು ಅವರು ಒತ್ತಾಯಿಸಿದ್ದಾರೆ.

ಮಹಾಕುಂಭದಲ್ಲಿ ಅಸಮರ್ಪಕ ನಿರ್ವಹಣೆಯಿಂದಾಗಿ ನಡೆದ ಸಾವುನೋವಿನ ವಿಷಯ ಬೇಸರ ತರಿಸಿದೆ ಎಂದು ಅವರು ಇನ್ನೊಂದು ಪೋಸ್ಟ್‌ನಲ್ಲಿ ಹೇಳಿದ್ದಾರೆ.

ಹೆಚ್ಚಿನ ಅನಾಹುತ ತಡೆಯಲು ಹಾಗೂ ಗಾಯಗೊಂಡವರಿಗೆ ಸಹಾಯ ಮಾಡಲು ಸರ್ಕಾರ ಕೂಡಲೇ ಕ್ರಮ ತೆಗೆದುಕೊಳ್ಳಬೇಕು ಎಂದು ಅವರು ವಿನಂತಿಸಿದ್ದಾರೆ.

‘ಗಾಯಗೊಂಡವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಲು ಆ್ಯಂಬುಲೆನ್ಸ್‌ಗಳನ್ನು ನಿಯೋಜಿಸಬೇಕು. ಮೃತದೇಹಗಳನ್ನು ಕುಟುಂಬಸ್ಥರಿಗೆ ಹಸ್ತಾಂತರಿಸಲು ಶೀಘ್ರ ವ್ಯವಸ್ಥೆಗಳನ್ನು ಮಾಡಬೇಕು. ಸ್ಥಳದಲ್ಲಿ ಹೆಚ್ಚಿನ ಕಣ್ಗಾವಲು ಇರಿಸಬೇಕು. ಸುವ್ಯವಸ್ಥೆ ಹಾಗೂ ಭದ್ರತೆ ಬಗ್ಗೆ ಗಮನಹರಿಸಬೇಕು’ ಎಂದಿದ್ದಾರೆ.

ಈ ಕಷ್ಟದ ಸಮಯದಲ್ಲಿ ಭಕ್ತರು ಸಮಾಧಾನಚಿತ್ತರಾಗಿರಬೇಕು ಎಂದು ಇದೇ ವೇಳೆ ಅವರು ಕರೆ ನೀಡಿದ್ದಾರೆ. ಈಗ ನಡೆದ ತಪ್ಪಿನಿಂದ ಸರ್ಕಾರ ಪಾಠ ಕಲಿತು, ಭಕ್ತರಿಗೆ ನೀಡಬೇಕಾದ ವ್ಯವಸ್ಥೆಗಳನ್ನು ಸುಧಾರಿಸಬೇಕು ಎಂದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.