ADVERTISEMENT

ಮಹಾರಾಷ್ಟ್ರದಲ್ಲೂ ಮಹಾಪಂಚಾಯಿತಿ

ಮೂರು ರಾಜ್ಯಗಳಲ್ಲಿ 7 ಸಭೆ: ಭಾನುವಾರದಿಂದ ಆರಂಭ

ಪಿಟಿಐ
Published 12 ಫೆಬ್ರುವರಿ 2021, 19:05 IST
Last Updated 12 ಫೆಬ್ರುವರಿ 2021, 19:05 IST
ದೆಹಲಿ ಹೊರವಲಯದ ಗಾಜಿಪುರ ಗಡಿಯಲ್ಲಿ ಪ್ರತಿಭಟನನಿರತ ರೈತರು –ಪಿಟಿಐ ಚಿತ್ರ
ದೆಹಲಿ ಹೊರವಲಯದ ಗಾಜಿಪುರ ಗಡಿಯಲ್ಲಿ ಪ್ರತಿಭಟನನಿರತ ರೈತರು –ಪಿಟಿಐ ಚಿತ್ರ   

ಗಾಜಿಯಾಬಾದ್: ಕೇಂದ್ರದ ಮೂರು ಕೃಷಿ ಕಾಯ್ದೆಗಳ ವಿರುದ್ಧ ಬೆಂಬಲ ಕ್ರೋಡೀಕರಿಸುವುದಕ್ಕಾಗಿ ವಿವಿಧ ರಾಜ್ಯಗಳಲ್ಲಿ ಇನ್ನಷ್ಟು ರೈತ ಮಹಾಪಂಚಾಯಿತಿ ನಡೆಸಲು ತೀರ್ಮಾನಿಸಲಾಗಿದೆ. ಈ ಭಾನುವಾರ ಆರಂಭವಾಗಿ ಇದೇ 23ರವರೆಗೆ ಹರಿಯಾಣ, ಮಹಾರಾಷ್ಟ್ರ ಮತ್ತು ರಾಜಸ್ಥಾನದಲ್ಲಿ ಏಳು ಮಹಾಪಂಚಾಯಿತಿ ಆಯೋಜಿಸಲಾಗಿದೆ. ರೈತರ ಪ್ರತಿಭಟನೆಯ ನೇತೃತ್ವ ವಹಿಸಿರುವ ಭಾರತೀಯ ಕಿಸಾನ್‌ ಯೂನಿಯನ್‌ನ ಮುಖಂಡ ರಾಕೇಶ್‌ ಟಿಕಾಯತ್‌ ಅವರ ನಾಯಕತ್ವದಲ್ಲಿ ಈ ಮಹಾಪಂಚಾಯಿತಿಗಳು ನಡೆಯಲಿವೆ.

ಹರಿಯಾಣದ ಕರ್ನಾಲ್‌, ರೋಹ್ಟಕ್‌, ಸಿರ್ಸಾ ಮತ್ತು ಹಿಸಾರ್‌, ಮಹಾರಾಷ್ಟ್ರದ ಯಾವತ್‌ಮಲ್‌ ಹಾಗೂ ರಾಜಸ್ಥಾನದ ಸಿಕಾರ್‌ನಲ್ಲಿ ಈ ಸಭೆಗಳು ನಡೆಯಲಿವೆ ಎಂದು ಯೂನಿಯನ್‌ನ ಮಾಧ್ಯಮ ಉಸ್ತುವಾರಿ ಧರ್ಮೇಂದ್ರ ಮಲಿಕ್‌ ತಿಳಿಸಿದ್ದಾರೆ.

ಮಹಾರಾಷ್ಟ್ರದ ವಿದರ್ಭ ಪ್ರಾಂತ್ಯದ ಯಾವತ್‌ಮಲ್‌ ಜಿಲ್ಲೆಯಲ್ಲಿ ಇದೇ 20ರಂದು ಮಹಾಪಂಚಾಯಿತಿ ನಿಗದಿಯಾಗಿದೆ. ಇದು ಉತ್ತರ ಭಾರತದ ಹೊರಗೆ ನಡೆಯಲಿರುವ ಮೊದಲ ಮಹಾಪಂಚಾಯಿತಿ ಆಗಲಿದೆ. ಮಹಾರಾಷ್ಟ್ರದಲ್ಲಿ ಅತಿ ಹೆಚ್ಚು ರೈತರು ಆತ್ಮಹತ್ಯೆ ಮಾಡಿಕೊಂಡ ಪ್ರದೇಶ ವಿದರ್ಭ. ಹಾಗಾಗಿ ಇಲ್ಲಿ ಸಭೆ ಆಯೋಜಿಸಲಾಗಿದೆ. ವಿದರ್ಭ ಪ್ರಾಂತ್ಯದ ರೈತರಷ್ಟೇ ಅಲ್ಲದೆ, ರಾಜ್ಯದ ಎಲ್ಲ ಭಾಗಗಳ ರೈತರೂ ಮಹಾಪಂಚಾಯಿತಿಯಲ್ಲಿ ಭಾಗವಹಿಸಲಿದ್ದಾರೆ ಎಂದು ಸಂಘಟಕರು ಹೇಳಿದ್ದಾರೆ.

ADVERTISEMENT

ಬಹದ್ದೂರ್‌ಗಡದ ಬಿಲಾರಿಯಲ್ಲಿ ಶುಕ್ರವಾರ ನಡೆದ ಮಹಾಪಂಚಾಯಿತಿಯಲ್ಲಿ 10 ಸಾವಿರಕ್ಕೂ ಹೆಚ್ಚು ರೈತರು ಭಾಗಿಯಾಗಿದ್ದಾರೆ ಎಂದು ಸಂಯುಕ್ತ ಕಿಸಾನ್‌ ಮೋರ್ಚಾ ಹೇಳಿದೆ.

ಕಾಯ್ದೆ ಪರ ಪ್ರಚಾರಕ್ಕೆ ₹7.95 ಕೋಟಿ

ಕೃಷಿ ಕಾಯ್ದೆಗಳ ಪರವಾಗಿ ಪ್ರಚಾರ ನಡೆಸುವುದಕ್ಕೆ ಕೇಂದ್ರ ಸರ್ಕಾರವು ಜನವರಿವರೆಗಿನ ಐದು ತಿಂಗಳಲ್ಲಿ ₹7.95 ಕೋಟಿ ವೆಚ್ಚ ಮಾಡಿದೆ ಎಂದು ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್‌ ತೋಮರ್‌ ಅವರು ರಾಜ್ಯಸಭೆಗೆ ಮಾಹಿತಿ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.