ADVERTISEMENT

ಮೂಢನಂಬಿಕೆ: ದೆವ್ವ ಬಿಡಿಸಲು ಹೋಗಿ 5 ವರ್ಷದ ಮಗಳನ್ನು ಕೊಂದ ಪೋಷಕರು

ಪಿಟಿಐ
Published 7 ಆಗಸ್ಟ್ 2022, 8:45 IST
Last Updated 7 ಆಗಸ್ಟ್ 2022, 8:45 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನಾಗ್ಪುರ: ದೆವ್ವ ಬಿಡಿಸುವ ಮೂಢನಂಬಿಕೆಗೆ ಬಲಿಯಾಗಿ ಐದು ವರ್ಷದ ಮಗಳನ್ನು ಪೋಷಕರು ಹೊಡೆದು ಸಾಯಿಸಿರುವ ಹೃದಯವಿದ್ರಾವಕ ಘಟನೆ ಮಹಾರಾಷ್ಟ್ರದ ನಾಗ್ಪುರದಲ್ಲಿ ನಡೆದಿದೆ.

ಪ್ರಕರಣಕ್ಕೆ ಸಂಬಂಧಿಸಿ ಬಾಲಕಿಯ ತಂದೆ ಸಿದ್ಧಾರ್ಥ್‌ ಚಿಮ್ನೆ, ತಾಯಿ ರಂಜನಾ ಮತ್ತು ಸಂಬಂಧಿ ಪ್ರಿಯಾ ಬನ್ಸೋದ್‌ ಎಂಬುವವರನ್ನು ಪೊಲೀಸರು ಬಂಧಿಸಿದ್ದಾರೆ. ಶುಕ್ರವಾರ ರಾತ್ರಿ ಅಥವಾ ಶನಿವಾರ ನಸುಕಿನ ವೇಳೆ ದೆವ್ವ ಬಿಡಿಸುವ ಮೂಢನಂಬಿಕೆಯ ಕೃತ್ಯ ನಡೆದಿದೆ ಎಂದು ಶಂಕಿಸಲಾಗಿದೆ.

ಪ್ರಕರಣದ ಕುರಿತು ವರದಿ ನೀಡಿರುವ ಪೊಲೀಸರು, ಯೂಟ್ಯೂಬ್‌ನಲ್ಲಿ ಸ್ಥಳೀಯ ಸುದ್ದಿ ವಾಹಿನಿ ನಡೆಸುತ್ತಿರುವ ಸುಭಾಶ್‌ ನಗರದ ನಿವಾಸಿ ಸಿದ್ಧಾರ್ಥ್‌ ಚಿಮ್ನೆ ಕಳೆದ ತಿಂಗಳು ಗುರು ಪೂರ್ಣಿಮೆ ಸಂದರ್ಭ ಹೆಂಡತಿ ಮತ್ತು ಇಬ್ಬರು ಮಕ್ಕಳನ್ನು ತಕಲ್‌ಘಾಟ್‌ ಪ್ರದೇಶದಲ್ಲಿರುವ ದರ್ಗಾವೊಂದಕ್ಕೆ ಕರೆದೊಯ್ದಿದ್ದರು ಎಂದು ತಿಳಿಸಿದ್ದಾರೆ.

ADVERTISEMENT

ನಂತರದ ದಿನಗಳಲ್ಲಿ 5 ವರ್ಷದ ಚಿಕ್ಕ ಮಗಳ ನಡವಳಿಕೆಯಲ್ಲಿ ಬದಲಾವಣೆಗಳಾಗಿವೆ ಎಂದು ಗ್ರಹಿಸಿದ ಸಿದ್ಧಾರ್ಥ್‌ ಚಿಮ್ನೆ, ಯಾವುದೋ ದುಷ್ಟಶಕ್ತಿ ಆವರಿಸಿಕೊಂಡಿದೆ ಎಂದು ನಂಬಿದ್ದಾರೆ. ದೆವ್ವ ಬಿಡಿಸುವ ಆಚರಣೆ ಮೂಲಕ ದುಷ್ಟಶಕ್ತಿಯನ್ನು ಹೊಡೆದೋಡಿಸಲು ನಿರ್ಧರಿಸಿದ್ದಾರೆ.

ಹುಡುಗಿಯ ತಂದೆ, ತಾಯಿ ಮತ್ತು ಸಂಬಂಧಿ ಮೂವರು ಸೇರಿ ರಾತ್ರಿ ವೇಳೆ ದೆವ್ವವನ್ನು ಬಿಡಿಸುವ ಕಾರ್ಯದಲ್ಲಿ ತೊಡಗಿದ್ದಾರೆ. ಅದರ ವಿಡಿಯೊವನ್ನು ಚಿತ್ರೀಕರಿಸಿದ್ದಾರೆ. ಇದು ಅವರ ಮೊಬೈಲ್‌ಗಳನ್ನು ವಶಕ್ಕೆ ಪಡೆದಾಗ ಬಹಿರಂಗವಾಗಿದೆ. ವಿಡಿಯೊದಲ್ಲಿ ಬಾಲಕಿ ನೋವಿನಿಂದ ಅಳುತ್ತಿರುವ ದೃಶ್ಯವಿದೆ. ಬಾಲಕಿಗೆ ಅರ್ಥವಾಗದ ಕೆಲವು ಪ್ರಶ್ನೆಗಳನ್ನು ಆರೋಪಿಗಳು ಕೇಳುತ್ತಿರುವುದು ಸೆರೆಯಾಗಿದೆ.

ಉತ್ತರ ನೀಡಿದ ಬಾಲಕಿಯ ಕೆನ್ನೆಗೆ ಮೂವರು ಹೊಡೆದಿದ್ದಾರೆ. ನೋವು ತಾಳಲಾರದೆ ಬಾಲಕಿ ಪ್ರಜ್ಞೆ ತಪ್ಪಿ ನೆಲಕ್ಕೆ ಬಿದ್ದಿದ್ದಾಳೆ ಎಂದು ಅಧಿಕಾರಿಗಳು ವಿಡಿಯೊದಲ್ಲಿ ಸೆರೆಯಾದ ಘಟನೆಯ ವಿವರಣೆಯನ್ನು ನೀಡಿದ್ದಾರೆ.

ಶನಿವಾರ ಬೆಳಗ್ಗೆ ಮಗುವನ್ನು ದರ್ಗಾಕ್ಕೆ ಕೊಂಡೊಯ್ದಿದ್ದಾರೆ. ನಂತರ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಅಲ್ಲಿಂದ ಕಾಲ್ಕಿತ್ತಿದ್ದಾರೆ. ಆರೋಪಿಗಳ ಅನುಮಾನಸ್ಪದ ವರ್ತನೆಯನ್ನು ಗಮನಿಸಿದ ಆಸ್ಪತ್ರೆಯ ಸಿಬ್ಬಂದಿ ಮೊಬೈಲ್‌ನಲ್ಲಿ ಅವರು ಬಂದಿದ್ದ ಕಾರಿನ ಫೋಟೊ ಸೆರೆ ಹಿಡಿದಿದ್ದಾರೆ.

ಆಸ್ಪತ್ರೆಗೆ ದಾಖಲಾಗುವ ಮೊದಲೇ ಮಗು ಸಾವನ್ನಪ್ಪಿದೆ ಎಂದು ವೈದ್ಯರು ಘೋಷಣೆ ಮಾಡಿದ್ದಾರೆ. ಬಳಿಕ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ರಾಣಾ ಪ್ರತಾಪ್‌ ನಗರ ಪೊಲೀಸರು ಆಸ್ಪತ್ರೆ ಸಿಬ್ಬಂದಿ ಸೆರೆ ಹಿಡಿದಿದ್ದ ಕಾರಿನ ಫೋಟೊ ಆಧಾರದಲ್ಲಿ ಆರೋಪಿಗಳನ್ನು ಪತ್ತೆ ಹಚ್ಚಿ, ಬಂಧಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.