ನಾಸಿಕ್: ಬೆನ್ನುಮೂಳೆಯ ಸ್ನಾಯು ಕ್ಷೀಣತೆ (ಎಸ್‌ಎಂಎ) ಸಮಸ್ಯೆಯಿಂದ ಬಳಲುತ್ತಿರುವ ಮಗುವಿನ ಚಿಕಿತ್ಸೆಗೆ ಬೇಕಾದ ₹16 ಕೋಟಿ ಮೌಲ್ಯದ ಔಷಧಿಯನ್ನು ಅಮೆರಿಕದ ಔಷಧಿ ಸಂಸ್ಥೆಯೊಂದು ಉಚಿತವಾಗಿ ನೀಡಿದೆ.
ಮಹಾರಾಷ್ಟ್ರದ ನಾಸಿಕ್‌ನಲ್ಲಿ 2019ರ ಆಗಸ್ಟ್ 8, 2019ರಲ್ಲಿ ಜನಿಸಿದ ಶಿವರಾಜ್, ಅಪರೂಪದ ಬೆನ್ನುಮೂಳೆಯ ಸ್ನಾಯು ಕ್ಷೀಣತೆ ಸಮಸ್ಯೆಯಿಂದ ಬಳಲುತ್ತಿದ್ದಾನೆ. ಆತನನ್ನು ಹಿಂದೂಜಾ ಆಸ್ಪತ್ರೆಗೆ ಸೇರಿಸಲಾಗಿತ್ತು. ಈ ಕಾಯಿಲೆಯ ಚಿಕಿತ್ಸೆಗೆ ಝೊಲ್ಗೆನ್ಸ್ಮಾ ಔಷಧಿಯ ಅವಶ್ಯಕತೆ ಇದೆ ಎಂಬುದಾಗಿ ಡಾ.ಬ್ರಿಜೇಶ್ ಉದಾನಿ ಅವರು ತಿಳಿಸಿದ್ದಾರೆ. ಈ ಔಷಧಿಯನ್ನು ಅಮೆರಿಕ ಮೂಲದ ಸಂಸ್ಥೆ ತಯಾರಿಸುತ್ತದೆ.
ಮಗುವಿನ ತಂದೆ ವಿಶಾಲ್ ದವಾರೆ ಮತ್ತು ತಾಯಿ ಕಿರಣ್ ಅವರು ಮಧ್ಯಮ ವರ್ಗಕ್ಕೆ ಸೇರಿದವರು. ಈ ದುಬಾರಿ ಔಷಧಿಯನ್ನು ಖರೀದಿಸುವಷ್ಟು ಶಕ್ತಿ ಅವರಿಗೆ ಇರಲಿಲ್ಲ. ಹಾಗಾಗಿ ಡಾ. ಬ್ರಿಜೇಶ್ ಉದಾನಿ ಅವರು ಅಮೆರಿಕದ ಔಷಧಿ ಸಂಸ್ಥೆ ನಡೆಸುವ ಲಕ್ಕಿ ಡ್ರಾದಲ್ಲಿ ಭಾಗವಹಿಸುವಂತೆ ದಂಪತಿಗೆ ಸಲಹೆ ನೀಡಿದ್ದರು.
2020ರ ಡಿಸೆಂಬರ್ 25ರಂದು ಶಿವರಾಜ್ ಈ ಲಕ್ಕಿ ಡ್ರಾದಲ್ಲಿ ಆಯ್ಕೆ ಆಗಿದ್ದಾನೆ. ಹಾಗಾಗಿ ಸಂಸ್ಥೆಯು ಮಗುವಿನ ಚಿಕಿತ್ಸೆಗೆ ಬೇಕಾದ ಝೊಲ್ಗೆನ್ಸ್ಮಾ ಔಷಧಿಯನ್ನು ಶಿವರಾಜ್ ಕುಟುಂಬಕ್ಕೆ ಉಚಿತವಾಗಿ ನೀಡಿದೆ. ಕಳೆದ ಜನವರಿ 19ರಂದು ಮಗುವಿಗೆ ಹಿಂದೂಜ್ ಆಸ್ಪತ್ರೆಯಲ್ಲಿ ಝೊಲ್ಗೆನ್ಸ್ಮಾ ಇಂಜೆಕ್ಷನ್ ನೀಡಲಾಗಿದೆ.
‘ಈ ಕಾಯಿಲೆಯು ಮಗುವಿನ ಚಲನೆಯನ್ನು ನಿಧಾನಗೊಳಿಸುತ್ತದೆ. ಅಲ್ಲದೆ ಇದರಿಂದಾಗಿ ಸ್ನಾಯುಗಳು ಕೆಲಸ ಮಾಡುವುದನ್ನು ನಿಲ್ಲಿಸುತ್ತವೆ. ಇದು ಮಗುವಿನ ಸಾವಿಗೆ ಕಾರಣವಾಗುತ್ತದೆ’ ಎಂದು ಶಿವರಾಜ್‌ಗೆ ಮೊದಲು ಚಿಕಿತ್ಸೆ ನೀಡಿದ್ದ ಡಾ. ರಮಂತ್ ಪಾಟೀಲ್ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.