ADVERTISEMENT

'ಮಹಾ' ಸಂಪುಟದ ವಂಶಾವಳಿ ಪ್ರಭೆ

​ಪ್ರಜಾವಾಣಿ ವಾರ್ತೆ
Published 30 ಡಿಸೆಂಬರ್ 2019, 21:18 IST
Last Updated 30 ಡಿಸೆಂಬರ್ 2019, 21:18 IST
ಅಜಿತ್, ಧನಂಜಯ್‌, ಆದಿತ್ಯ ಮತ್ತು ಅಶೋಕ್
ಅಜಿತ್, ಧನಂಜಯ್‌, ಆದಿತ್ಯ ಮತ್ತು ಅಶೋಕ್   

ಮುಂಬೈ: ಎನ್‌ಸಿಪಿ, ಕಾಂಗ್ರೆಸ್‌ ಒಳಗೊಂಡ ಶಿವಸೇನಾ ನೇತೃತ್ವದ ಮಹಾ ವಿಕಾಸ ಆಘಾಡಿ ಸರ್ಕಾರ ಮಹಾರಾಷ್ಟ್ರದಲ್ಲಿ ಅಸ್ತಿತ್ವಕ್ಕೆ ಬಂದು ಸರಿಸುಮಾರು ಒಂದು ತಿಂಗಳ ಬಳಿಕ ಸಂಪುಟ ವಿಸ್ತರಣೆ ನಡೆದಿದೆ. ಅಚ್ಚರಿಯ ಆಯ್ಕೆಗಳು ಯಾವುವೂ ಇಲ್ಲದೆ ನಿರೀಕ್ಷಿತ ರೀತಿಯಲ್ಲಿಯೇ ಸಂಪುಟ ವಿಸ್ತರಣೆ ನಡೆದಿದೆ. ಆದರೆ, ರಾಜಕೀಯವಾಗಿ ಪ್ರಭಾವಿಯಾದ ಕುಟುಂಬಗಳ ಸದಸ್ಯರು ಗಣನೀಯ ಸಂಖ್ಯೆಯಲ್ಲಿ ಸಂಪುಟಕ್ಕೆ ಸೇರ್ಪಡೆ ಆಗಿರುವುದು ಎದ್ದು ಕಾಣುವ ಒಂದು ಅಂಶ. ಇವರಲ್ಲಿ ಕೆಲವು ಮಂದಿ ಸಾಕಷ್ಟು ಅನುಭವಿಗಳೂ ಆಗಿದ್ದಾರೆ ಎಂಬುದನ್ನೂ ಗಮನಿಸಬಹುದು.

ಎನ್‌ಸಿಪಿ ಮುಖ್ಯಸ್ಥ ಶರದ್‌ ಪವಾರ್‌ ಅವರ ಅಣ್ಣನ ಮಗ ಅಜಿತ್‌ ಪವಾರ್‌ ಅವರು ಉಪ ಮುಖ್ಯಮಂತ್ರಿಯಾಗಿದ್ದಾರೆ. ಶಿವಸೇನಾ ಮುಖ್ಯಸ್ಥ ಮತ್ತು ಮುಖ್ಯಮಂತ್ರಿ ಉದ್ಧವ್‌ ಠಾಕ್ರೆ ಮಗ 29 ವರ್ಷ ವಯಸ್ಸಿನ ಆದಿತ್ಯ ಠಾಕ್ರೆ ಅವರು ಸಂಪುಟ ದರ್ಜೆಯ ಸಚಿವರಾಗಿದ್ದಾರೆ. ಅಜಿತ್ ಅವರು ನಾಲ್ಕನೇ ಬಾರಿ ಉಪಮುಖ್ಯಮಂತ್ರಿಯಾಗಿದ್ದಾರೆ. ವಿಧಾನಸಭೆ ಚುನಾವಣಾ ಪ್ರಚಾರದಲ್ಲಿ ಆದಿತ್ಯ ಅವರನ್ನು ಮುಖ್ಯಮಂತ್ರಿ ಅಭ್ಯರ್ಥಿ ಎಂಬಂತೆ ಶಿವಸೇನಾ ಬಿಂಬಿಸಿತ್ತು. ಈಗ ಅವರು ಸಚಿವರಾಗಿದ್ದಾರೆ. ವರ್ಲಿಯ ಶಾಸಕರಾಗಿರುವ ಅವರು ಠಾಕ್ರೆ ಕುಟುಂಬದಿಂದ ಸಕ್ರಿಯ ರಾಜಕಾರಣಕ್ಕೆ ಬಂದ ಮೊದಲ ವ್ಯಕ್ತಿ.

ಅಶೋಕ್‌ ಚವಾಣ್‌ ಅವರು ಮಹಾರಾಷ್ಟ್ರದ ಮುಖ್ಯಮಂತ್ರಿಯಾಗಿದ್ದವರು. ಅವರ ತಂದೆ ಶಂಕರರಾವ್‌ ಚವಾಣ್‌ ಅವರೂ ಮಹಾರಾಷ್ಟ್ರದ ಮುಖ್ಯಮಂತ್ರಿ ಮತ್ತು ಕೇಂದ್ರದಲ್ಲಿ ಸಚಿವ ಆಗಿದ್ದವರು. 2008ರಿಂದ 2010ರವರೆಗೆ ಅಶೋಕ್‌ ಅವರು ಮುಖ್ಯಮಂತ್ರಿಯಾಗಿದ್ದರು. ‘ಆದರ್ಶ’ ಗೃಹ ನಿರ್ಮಾಣ ಯೋಜನೆಯ ಹಗರಣ ಆರೋಪದ ಕಾರಣಕ್ಕೆ ಅವರು ಮುಖ್ಯಮಂತ್ರಿ ಹುದ್ದೆಗೆ ರಾಜೀನಾಮೆ ನೀಡಿದ್ದರು.

ADVERTISEMENT

ಮಾಜಿ ಉಪ ಮುಖ್ಯಮಂತ್ರಿ ಗೋಪಿನಾಥ ಮುಂಢೆ ಅವರ ಸೋದರ ಸಂಬಂಧಿ ಧನಂಜಯ ಮುಂಢೆ ಅವರಿಗೂ ಸ್ಥಾನ ಸಿಕ್ಕಿದೆ. ಧನಂಜಯ ಅವರು ಈಗ ಎನ್‌ಸಿಪಿಯಲ್ಲಿದ್ದಾರೆ. ಗೋಪಿನಾಥ್‌ ಅವರ ಮಗಳು ಪಂಕಜಾ ಅವರನ್ನು ಕಳೆದ ವಿಧಾನಸಭಾ ಚುನಾವಣೆಯಲ್ಲಿ ಧನಂಜಯ್‌ ಸೋಲಿಸಿದ್ದಾರೆ.

ಕಾಂಗ್ರೆಸ್‌ ನೇತೃತ್ವದ ಸರ್ಕಾರದ ಮುಖ್ಯಮಂತ್ರಿಯಾಗಿದ್ದ ವಿಲಾಸ್‌ರಾವ್‌ ದೇಶಮುಖ್‌ ಅವರ ಮಗ ಅಮಿತ್‌ ಅವರಿಗೂ ಉದ್ಧವ್‌ ಸಚಿವ ಸಂಪುಟದಲ್ಲಿ ಸ್ಥಾನ ಸಿಕ್ಕಿದೆ.

ರಾಯಗಡ ಲೋಕಸಭಾ ಸದಸ್ಯ, ಎನ್‌ಸಿಪಿ ಮುಖಂಡ ಸುನಿಲ್‌ ತತ್ಕರೆ ಅವರ ಮಗಳು ಅದಿತಿ ತತ್ಕರೆ ಅವರು ಸಹಾಯಕ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಕಾಂಗ್ರೆಸ್‌ ಮುಖಂಡ ಪತಂಗರಾವ್‌ ಕದಂ ಅವರ ಮಗ ವಿಶ್ವಜಿತ್‌ ಕದಂ ಅವರೂ ಸಹಾಯಕ ಸಚಿವರಾಗಿದ್ದಾರೆ. ಎನ್‌ಸಿಪಿ ಮುಖಂಡ ಯಶವಂತ ರಾವ್‌ ಗಡಖ್‌ ಅವರ ಮಗ ಕ್ರಾಂತಿಕಾರಿ ಶೇತ್ಕರಿ ಪಕ್ಷದ ನಾಯಕ ಶಂಕರರಾವ್‌ ಗಡಖ್‌ ಅವರಿಗೆ ಸಂಪುಟ ಸಚಿವ ಸ್ಥಾನ ಸಿಕ್ಕಿದೆ. ಎನ್‌ಸಿಪಿಯಲ್ಲಿದ್ದ ಶಂಕರ್‌ ರಾವ್‌ ಅವರು 2017ರಲ್ಲಿ ತಮ್ಮದೇ ಆದ ಪಕ್ಷ ಸ್ಥಾಪಿಸಿ, ಸೇನಾ ಜತೆಗೆ ಮೈತ್ರಿ ಮಾಡಿಕೊಂಡಿದ್ದರು.

ತನಗೆ ಸಡ್ಡು ಹೊಡೆದು, ವ್ಯತಿರಿಕ್ತ ಸೈದ್ಧಾಂತಿಕ ನಿಲುವಿನ ಎನ್‌ಸಿಪಿ–ಕಾಂಗ್ರೆಸ್‌ ಜತೆ ಕೈಜೋಡಿಸಿರುವ ಉದ್ಧವ್‌ ನೇತೃತ್ವದ ಸರ್ಕಾರ ಏನು ತಪ್ಪು ಮಾಡುತ್ತದೆ ಎಂಬುದನ್ನು ಬಿಜೆಪಿ ಹದ್ದಿನ ಕಣ್ಣಿಟ್ಟು ಕಾಯಲಿದೆ. 80 ತಾಸಿನ ಸರ್ಕಾರ ರಚನೆಯ ಮೂಲಕ ಆಗಿರುವ ಮುಖಭಂಗವನ್ನು ಬಿಜೆಪಿ ಸುಲಭಕ್ಕೆ ಮರೆಯುವುದು ಸಾಧ್ಯವಿಲ್ಲ. ಉದ್ಧವ್‌ ಅವರು ತಮ್ಮ ಆಳ್ವಿಕೆಯ ಮೊದಲ ಒಂದು ತಿಂಗಳಲ್ಲಿ ಎಡವಟ್ಟುಗಳನ್ನೇನೂ ಮಾಡಿಲ್ಲ. ಆದರೆ, ರಾಜಕೀಯ ಪ‍್ರಾಬಲ್ಯದ ಕುಟುಂಬಗಳಿಂದ ಬಂದ ಹಲವರು ಸಚಿವರಾಗಿರುವುದು ಬಿಜೆಪಿಗೆ ಅಸ್ತ್ರವಾಗಬಹುದು. ವಂಶ ರಾಜಕಾರಣದ ಆರೋಪವನ್ನು ಈ ಸರ್ಕಾರದ ಮೇಲೆ ಬಿಜೆಪಿ ಮಾಡಬಹುದು. ಮಹಾ ವಿಕಾಸ ಆಘಾಡಿಯ ಅಂಗ ಪಕ್ಷಗಳಲ್ಲಿ ಈವರೆಗೆ ಸಮನ್ವಯ ಇದೆ. ಜತೆಗೆ, ಕಾಂಗ್ರೆಸ್‌ ಮತ್ತು ಎನ್‌ಸಿಪಿಯ ಹಿರಿಯ ಮುಖಂಡರ ಅನುಭವದ ಲಾಭವೂ ಉದ್ಧವ್‌ಗೆ ದೊರೆಯಬಹುದು.

ಪಕ್ಷ ’ಒಡೆದ‘ ಅಜಿತ್‌ಗೆ ಉಡುಗೊರೆ
ಅಜಿತ್‌ ಪವಾರ್‌ ಅವರು ಮತ್ತೆ ಉಪಮುಖ್ಯಮಂತ್ರಿಯಾಗಿ ಮರಳಿರುವುದು ರಾಜಕೀಯವಾಗಿ ಹಲವು ಊಹಾಪೋಹಗಳಿಗೆ ಕಾರಣವಾಗಿದೆ. 288 ಸದಸ್ಯ ಬಲದ ವಿಧಾನಸಭೆಯಲ್ಲಿ 105 ಸ್ಥಾನಗಳನ್ನು ಗೆದ್ದಿರುವ ಬಿಜೆಪಿ ಅತಿ ದೊಡ್ಡ ಪಕ್ಷವಾಗಿ ಮೂಡಿಬಂದಿತ್ತು. ಬಹುಕಾಲದ ಮಿತ್ರಪಕ್ಷ ಶಿವಸೇನಾ ದೂರಸರಿದ ಕಾರಣ ಬಿಜೆಪಿಗೆ ಸರ್ಕಾರ ರಚಿಸವುದು ಸಾಧ್ಯವಾಗಿರಲಿಲ್ಲ.

ಆದರೆ, ಬಿಜೆಪಿಗೆ ಅಜಿತ್‌ ಪವಾರ್‌ ಅವರು ಬೆಂಬಲ ನೀಡಿದ ಕಾರಣ ನ. 23ರಂದು ಬಿಜೆಪಿಯ ದೇವೇಂದ್ರ ಫಡಣವೀಸ್‌ ಅವರು ಮುಖ್ಯಮಂತ್ರಿಯಾಗಿ ಬೆಳ್ಳಂಬೆಳಗ್ಗೆ ಪ್ರಮಾಣ ವಚನ ಸ್ವೀಕರಿಸಿದ್ದರು. ಅಜಿತ್‌ ಅವರು ಉಪಮುಖ್ಯಮಂತ್ರಿಯಾಗಿದ್ದರು. ಅಜಿತ್‌ಗೆ ಎನ್‌ಸಿಪಿ ಶಾಸಕರ ಬೆಂಬಲ ಪಡೆಯಲು ಸಾಧ್ಯವಾಗದ ಕಾರಣ 80 ತಾಸುಗಳಲ್ಲಿ ಫಡಣವೀಸ್‌ ಸರ್ಕಾರ ಪತನವಾಗಿತ್ತು.

ಆದರೆ, ‘ಬಿಜೆಪಿ ಸರ್ಕಾರ ರಚಿಸುವಂತೆ ಮಾಡಿ, ಆ ಪಕ್ಷಕ್ಕೆ ಮುಖಭಂಗ ಮಾಡುವ ಕಾರ್ಯತಂತ್ರದ ಭಾಗವಾಗಿಯೇ ಅಜಿತ್‌ ಅವರು ಬಿಜೆಪಿಗೆ ಬೆಂಬಲ ನೀಡಿದ್ದರು. ಇದು ಶರದ್‌ ಪವಾರ್‌ ಅವರಿಗೂ ಗೊತ್ತಿತ್ತು’ ಎಂಬ ಮಾತುಗಳು ಆಗ ಹರಿದಾಡಿದ್ದವು. ಈಗ, ಪಕ್ಷ ‘ಒಡೆದ’ ಅಜಿತ್‌ ಅವರಿಗೆ ಉಪಮುಖ್ಯಮಂತ್ರಿ ಸ್ಥಾನದ ಉಡುಗೊರೆ ಸಿಕ್ಕಿದೆ. ಹಾಗಾಗಿ, ಆಗ ಹರಿದಾಡಿದ್ದ ಮಾತುಗಳಿಗೆ ಈಗ ಪುಷ್ಟಿ ದೊರೆತಿದೆ ಎಂಬ ಚರ್ಚೆ ರಾಜಕೀಯ ವಲಯದಲ್ಲಿ ನಡೆಯುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.