ADVERTISEMENT

ಮಹದಾಯಿ: ವನ್ಯಜೀವಿ ಅನುಮೋದನೆಗೆ ಕೇಂದ್ರ ಸಚಿವರಿಗೆ ಮನವಿ ಸಲ್ಲಿಸಿದ ಡಿಕೆಶಿ

​ಪ್ರಜಾವಾಣಿ ವಾರ್ತೆ
Published 27 ನವೆಂಬರ್ 2024, 10:25 IST
Last Updated 27 ನವೆಂಬರ್ 2024, 10:25 IST
<div class="paragraphs"><p>ಡಿ.ಕೆ. ಶಿವಕುಮಾರ್</p></div>

ಡಿ.ಕೆ. ಶಿವಕುಮಾರ್

   

ನವದೆಹಲಿ: ಮಹದಾಯಿ ಕಳಸಾ ನಾಲಾ ತಿರುವು ಯೋಜನೆಗೆ ವನ್ಯಜೀವಿ ಅನುಮೋದನೆ ನೀಡುವ ಪ್ರಸ್ತಾವನೆಯ ಕಾರ್ಯಸೂಚಿಯನ್ನು ರಾಷ್ಟ್ರೀಯ ವನ್ಯಜೀವಿ ಮಂಡಳಿಯ ಸ್ಥಾಯಿ ಸಮಿತಿ ಮತ್ತೆ ಮುಂದೂಡಿದ ಬೆನ್ನಲ್ಲೇ, ಕೇಂದ್ರ ಅರಣ್ಯ ಸಚಿವ ಭೂಪೇಂದರ್‌ ಯಾದವ್‌ ಅವರನ್ನು ಜಲಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ್ ಬುಧವಾರ ಭೇಟಿಯಾಗಿ ಮನವಿ ಸಲ್ಲಿಸಿದ್ದಾರೆ.

ಸಚಿವ ಭೂಪೇಂದರ್ ಯಾದವ್‌ ಅಧ್ಯಕ್ಷತೆಯಲ್ಲಿ ಅಕ್ಟೋಬರ್ 9ರಂದು ನಡೆದ ಸ್ಥಾಯಿ ಸಮಿತಿಯ 80ನೇ ಸಭೆಯಲ್ಲಿ ಪ್ರಸ್ತಾವನೆ ಬಗ್ಗೆ ವಿಸ್ತೃತವಾಗಿ ಚರ್ಚಿಸಲಾಗಿತ್ತು. ಈ ಯೋಜನೆ ಬಗ್ಗೆ ಲಿಖಿತ ರೂಪದಲ್ಲಿ ಪ್ರತಿಕ್ರಿಯೆ ನೀಡುವಂತೆ ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರಕ್ಕೆ (ಎನ್‌ಟಿಸಿಎ) ನಿರ್ದೇಶಿಸಲಾಗಿತ್ತು. ಇದರಿಂದಾಗಿ ವನ್ಯಜೀವಿ ಅನುಮೋದನೆ ಪ್ರಕ್ರಿಯೆ ಮತ್ತಷ್ಟು ವಿಳಂಬವಾಗಿದೆ.

ADVERTISEMENT

ಕರ್ನಾಟಕ, ಗೋವಾ ಸರ್ಕಾರ ಹಾಗೂ ಎನ್‌ಟಿಸಿಎ ಅಧಿಕಾರಿಗಳ ಅಭಿಪ್ರಾಯ ಆಲಿಸಿದ ಬಳಿಕ ಕಾರ್ಯಸೂಚಿ ಮುಂದೂಡಲು ಸಮಿತಿ ನಿರ್ಧರಿಸಿತು. ಜತೆಗೆ, ಕಾನೂನಾತ್ಮಕ ಹಾಗೂ ಯೋಜನೆಯ ವಾಸ್ತವಾಂಶದ ವಿಷಯಗಳನ್ನು ಒಳಗೊಂಡ ಲಿಖಿತ ಅಭಿಪ್ರಾಯವನ್ನು ಸಲ್ಲಿಸುವಂತೆ ಕರ್ನಾಟಕ ಸರ್ಕಾರಕ್ಕೆ ಸ್ಥಾಯಿ ಸಮಿತಿ ಸೂಚಿಸಿತ್ತು. 

ಅಗತ್ಯವಿರುವ ವಿವರಣೆಯನ್ನು ಕರ್ನಾಟಕ ಸರ್ಕಾರವು ಅ. 10 ಹಾಗೂ 16ರಂದು ಸಲ್ಲಿಸಿತ್ತು. ಈ ಯೋಜನೆಗೆ ಬೆಳಗಾವಿ ಜಿಲ್ಲೆಯ ಖಾನಾಪುರ ತಾಲ್ಲೂಕಿನ ಏಳು ಗ್ರಾಮಗಳ ಅರಣ್ಯ ಬಳಕೆಗೆ (ಜಾಕ್‌ವೆಲ್‌ ನಿರ್ಮಾಣ, ಪಂಪ್‌ ಹೌಸ್‌, ಎಲೆಕ್ಟ್ರಿಕಲ್‌ ಸಬ್‌ ಸ್ಟೇಷನ್‌, ಪೈಪ್‌ಲೈನ್‌) ಒಪ್ಪಿಗೆ ನೀಡುವಂತೆ ರಾಜ್ಯ ಸರ್ಕಾರವು ಮಂಡಳಿಗೆ ಪ್ರಸ್ತಾವನೆ ಸಲ್ಲಿಸಿತ್ತು. ಈ ಯೋಜನೆಗೆ ಕಾಳಿ ಹಾಗೂ ಸಹ್ಯಾದ್ರಿ ಹುಲಿ ಸಂರಕ್ಷಿತ ಪ್ರದೇಶದ 10.68 ಹೆಕ್ಟೇರ್ ಅರಣ್ಯ ಬಳಸಿಕೊಳ್ಳಲಾಗುತ್ತದೆ ಎಂದು ಹೇಳಲಾಗಿದೆ.

ಕಳಸಾ ನಾಲಾ ತಿರುವು ಯೋಜನೆ ಕೈ‌ಗೆತ್ತಿಕೊಳ್ಳದಂತೆ ಗೋವಾ ಸರ್ಕಾರದ ಪ್ರಧಾನ ಮುಖ್ಯ ವನ್ಯಜೀವಿ ವಾರ್ಡನ್‌ ಅವರು ವನ್ಯಜೀವಿ ಸಂರಕ್ಷಣಾ ಕಾಯ್ದೆ 1972ರ ಅಡಿಯಲ್ಲಿ ಆದೇಶ ಹೊರಡಿಸಿದ್ದರು. ಈ ಆದೇಶ ಪ್ರಶ್ನಿಸಿ ಕರ್ನಾಟಕ ಸರ್ಕಾರ ಸುಪ್ರೀಂ ಕೋರ್ಟ್‌ಗೆ ಮಧ್ಯಂತರ ಅರ್ಜಿ ಸಲ್ಲಿಸಿತ್ತು. ಈ ನಡುವೆ, ಯೋಜನೆ ಪರಿಶೀಲಿಸಲು ತಜ್ಞರ ಸಮಿತಿಯನ್ನು ಎನ್‌ಟಿಸಿಎ ರಚಿಸಿತ್ತು. ಯೋಜನೆ ಅನುಷ್ಠಾನ ಮಾಡಬಹುದು ಎಂದು ತಜ್ಞರ ತಂಡ ಶಿಫಾರಸು ಮಾಡಿತ್ತು. ಆದಾಗ್ಯೂ, ಗೋವಾದ ಪ್ರಧಾನ ಮುಖ್ಯ ವನ್ಯಜೀವಿ ವಾರ್ಡನ್‌ ಆದೇಶವನ್ನು ಉಲ್ಲೇಖಿಸಿ ಎನ್‌ಟಿಸಿಎ ತನ್ನ ವರದಿಯನ್ನು ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿದೆ ಎಂಬ ಅಂಶವನ್ನು ಡಿ.ಕೆ. ಶಿವಕುಮಾರ್ ಅವರು ತಮ್ಮ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.