ADVERTISEMENT

ಮಹದಾಯಿ ಯೋಜನೆ ಡಿಪಿಆರ್‌ಗೆ ಹಸಿರು ನಿಶಾನೆ

ಮಂಜುನಾಥ್ ಹೆಬ್ಬಾರ್‌
Published 30 ಡಿಸೆಂಬರ್ 2022, 0:00 IST
Last Updated 30 ಡಿಸೆಂಬರ್ 2022, 0:00 IST
   

ನವದೆಹಲಿ: ಕರ್ನಾಟಕ ವಿಧಾನಸಭಾ ಚುನಾವಣೆಗೆ ನಾಲ್ಕು ತಿಂಗಳುಗಳು ಉಳಿದಿರುವ ಹೊತ್ತಿನಲ್ಲಿ, ಮಹದಾಯಿ ಯೋಜನೆಯ (ಕಳಸಾ– ಬಂಡೂರಿ ನಾಲಾ ಯೋಜನೆ) ಸಮಗ್ರ ಯೋಜನಾ ವರದಿಗೆ (ಡಿಪಿಆರ್‌) ಕೇಂದ್ರ ಜಲ ಆಯೋಗ ಅನುಮೋದನೆ ನೀಡಿದೆ.

ಈ ಯೋಜನೆಯು ಅವಳಿ ನಗರಗಳಾದ ಹುಬ್ಬಳ್ಳಿ-ಧಾರವಾಡ, ಸುತ್ತಮುತ್ತಲಿನ ಪಟ್ಟಣಗಳು ಹಾಗೂ ಗ್ರಾಮಗಳಿಗೆ ಕುಡಿಯುವ ನೀರು ಒದಗಿಸುವ ಗುರಿ ಹೊಂದಿದೆ.

‌ಮಹದಾಯಿ ನದಿ ನೀರು ವಿವಾದ ನ್ಯಾಯಾಧೀಕರಣವು 2018ರ ಆಗಸ್ಟ್‌ 14ರಂದು ಕಳಸಾ– ಬಂಡೂರಿ ಯೋಜನೆಗೆ 3.90 ಟಿಎಂಸಿ ಅಡಿ ನೀರಿನ ಹಂಚಿಕೆ ಮಾಡಿತ್ತು. ಬಳಿಕ ಕರ್ನಾಟಕ ಸರ್ಕಾರವು ಯೋಜನೆಯ ಪೂರ್ವ- ಕಾರ್ಯಸಾಧ್ಯತಾ ವರದಿಗಳನ್ನು ಕೇಂದ್ರ ಜಲ ಆಯೋಗಕ್ಕೆ ಸಲ್ಲಿಸಿತ್ತು. ಇದನ್ನು ಪರಿಶೀಲಿಸಿದ ಆಯೋಗವು, ‘ನ್ಯಾಯಮೂರ್ತಿ ಬಚಾವತ್‌ ಆಯೋಗದ ವರದಿಯ ಪ್ರಕಾರ, ಈ ಯೋಜನೆಗೆ ಕೃಷ್ಣಾ ನದಿ ತೀರದ ಇತರ ರಾಜ್ಯಗಳ ಅನುಮತಿ ಕೂಡ ಅಗತ್ಯ’ ಎಂದು ಸ್ಪಷ್ಟಪಡಿಸಿತ್ತು.

ADVERTISEMENT

ಅರಣ್ಯ ಅನುಮೋದನೆಯ ಸವಾಲು

ಮಹದಾಯಿ(ಕಳಸಾ– ಬಂಡೂರಿ) ಯೋಜನೆಯ ಪರಿಷ್ಜೃತ ಪೂರ್ವ ಕಾರ್ಯಸಾಧ್ಯತಾ ವರದಿಯ ಪ್ರಕಾರ, ಯೋಜನೆಯ ಅನುಷ್ಠಾನಕ್ಕೆ 61 ಹೆಕ್ಟೇರ್ ಅರಣ್ಯ ಭೂಮಿ ಬೇಕಿದೆ. ಈ ಅರಣ್ಯ ಭೂಮಿ ಬಳಕೆಗೆ ಕೇಂದ್ರ ಅರಣ್ಯ, ಪರಿಸರ ಮತ್ತು ಹವಾಮಾನ ಬದಲಾವಣೆ ಸಚಿವಾಲಯದ ಅನುಮತಿ ಪಡೆಯಬೇಕಿದೆ.

ಕಳಸಾ ಯೋಜನೆಗೆ 16.6 ಹೆಕ್ಟೇರ್ ಅರಣ್ಯ ಹಾಗೂ 11.27 ಹೆಕ್ಟೇರ್ ಅರಣ್ಯೇತರ ಭೂಮಿ, ಬಂಡೂರಿ ಯೋಜನೆಗೆ 44 ಹೆಕ್ಟೇರ್‌ ಅರಣ್ಯ ಹಾಗೂ 11.05 ಹೆಕ್ಟೇರ್ ಅರಣ್ಯೇತರ ಭೂಮಿ ಬೇಕಿದೆ.

‘ಯೋಜನೆಗಾಗಿ ಅರಣ್ಯದ ಭೂಮಿಯನ್ನು ಪಡೆಯಬೇಕಿದೆ. ಹೀಗಾಗಿ, ಅನುಮೋದನೆ ಪಡೆಯಲು ಕರ್ನಾಟಕ ಸರ್ಕಾರದ ಮುಂದೆ ಬಹುದೊಡ್ಡ ಸವಾಲು ಇದೆ. ಇದಕ್ಕಾಗಿ ಸಚಿವಾಲಯಕ್ಕೆ ಸಾಕಷ್ಟು ವಿವರಣೆಗಳನ್ನು ನೀಡಬೇಕಾಗುತ್ತದೆ’ ಎಂದು ಜಲಶಕ್ತಿ ಸಚಿವಾಲಯದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು.

ಅಂಕಿ ಅಂಶಗಳು

2032 ಚ.ಕಿ.ಮೀ

ಮಹದಾಯಿ ಜಲಾನಯನ ಪ್ರದೇಶ

1580 ಚ.ಕಿ.ಮೀ

ಗೋವಾದಲ್ಲಿರುವ ಜಲಾನಯನ ಪ್ರದೇಶ (ಶೇ 78)

375 ಚ.ಕಿ.ಮೀ

ಕರ್ನಾಟಕದಲ್ಲಿರುವ ಜಲಾನಯನ ಪ್ರದೇಶ (ಶೇ 18)

77 ಚ.ಕಿ.ಮೀ

ಮಹಾರಾಷ್ಟ್ರದಲ್ಲಿರುವ ಜಲಾನಯನ ಪ್ರದೇಶ (ಶೇ 4)

ಮಹದಾಯಿ ನ್ಯಾಯಾಧೀಕರಣದಿಂದ ನೀರಿನ ಹಂಚಿಕೆ

24 ಟಿಎಂಸಿ

ಗೋವಾ

13.42

ಟಿಎಂಸಿ

ಕರ್ನಾಟಕ

1.33 ಟಿಎಂಸಿ

ಮಹಾರಾಷ್ಟ್ರ

ಕರ್ನಾಟಕಕ್ಕೆ ನ್ಯಾಯಾಧೀಕರಣಕ್ಕೆ ನೀರಿನ ಹಂಚಿಕೆ ಪ್ರಮಾಣ

1.72 ಟಿಎಂಸಿ

ಕಳಸಾ ನಾಲಾ ತಿರುವು ಯೋಜನೆ

2.18 ಟಿಎಂಸಿ

ಬಂಡೂರಿ ನಾಲಾ ತಿರುವು ಯೋಜನೆ

8.02 ಟಿಎಂಸಿ

ಮಹದಾಯಿ ಜಲವಿದ್ಯುತ್‌ ಯೋಜನೆ

1.50 ಟಿಎಂಸಿ

ಮಹದಾಯಿ ಕಣಿವೆಯೊಳಗಿನ ಪ್ರದೇಶಗಳ ನೀರಾವರಿ, ಕುಡಿಯುವ ನೀರಿನ ಬಳಕೆ ಮತ್ತು ಇತರೆ ಸೌಲಭ್ಯಗಳಿಗಾಗಿ.

ಜಲ ಆಯೋಗದ ಷರತ್ತುಗಳೇನು?

ಜಲಆಯೋಗವು ತಾಂತ್ರಿಕ ಮೌಲ್ಯಮಾಪನ ನಡೆಸಿ ಡಿಪಿಆರ್‌ಗೆ ಒಪ್ಪಿಗೆ ಕೊಟ್ಟಿದೆ.ಆದರೆ, ಕೆಲವೊಂದು ಷರತ್ತುಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಸೂಚಿಸಿದೆ.ಈ ಮಂಜೂರಾತಿಯು ಅರಣ್ಯ ಸಂರಕ್ಷಣಾ ಕಾಯ್ದೆ 1981 ಮತ್ತು ಪರಿಸರ ಸಂರಕ್ಷಣಾ ಕಾಯ್ದೆ 1985 ಅಡಿಯಲ್ಲಿ ಕೇಂದ್ರ ಸರ್ಕಾರದ ಅನುಮತಿಗಳನ್ನು ಪಡೆಯುವುದಕ್ಕೆ ಒಳಪಟ್ಟಿರುತ್ತದೆ.

ಷರತ್ತುಗಳೇನು:

*ಯೋಜನಾ ಪ್ರಾಧಿಕಾರವು ಕಡ್ಡಾಯವಾಗಿ ನ್ಯಾಯಾಧೀಕರಣದ ತೀರ್ಪಿನ ಅನುಸಾರ ಇತರ ತಾಂತ್ರಿಕ ಏಜೆನ್ಸಿಗಳಿಂದ ಅನುಮೋದನೆ ಪಡೆಯುವುದು ಕಡ್ಡಾಯ.

*ಜಲ ಆಯೋಗವು ನೀಡಿರುವ ಅಭಿಪ್ರಾಯಗಳನ್ನು ಯೋಜನಾ ಪ್ರಾಧಿಕಾರ ಪರಿಗಣಿಸಬೇಕು. ಯೋಜನೆಯ ಅಂತಿಮ ವಿನ್ಯಾಸ ಮಹದಾಯಿ ನ್ಯಾಯಾಧೀಕರಣದ ತೀರ್ಪಿನ ನಿರ್ದೇಶನಗಳನ್ನು ಸಂಪೂರ್ಣವಾಗಿ ಒಳಗೊಂಡಿರಬೇಕು.

*ಯೋಜನಾ ಪ್ರಾಧಿಕಾರ ಮಹದಾಯಿ ನ್ಯಾಯಾಧೀಕರಣದ ತೀರ್ಪಿನಲ್ಲಿ ಉಲ್ಲೇಖಿಸಿರುವ ಎಲ್ಲ ಕಾನೂನುಬದ್ಧವಾದ ಕಡ್ಡಾಯ ಹಾಗೂ ಶಾಸನಬದ್ಧ ನಿರಕ್ಷೇಪಣಾಪತ್ರಗಳನ್ನು ಪಡೆದಿರಬೇಕು.

*ಮಹದಾಯಿ ನದಿ ನೀರನ್ನು ಪ್ರತಿನಿತ್ಯ ಎಷ್ಟು ಬಳಸಿಕೊಳ್ಳಲಾಗಿದೆ ಎಂಬ ಬಗ್ಗೆ ಕರ್ನಾಟಕ ಸರ್ಕಾರವು ಗೋವಾ, ಮಹಾರಾಷ್ಟ್ರ ರಾಜ್ಯಗಳಿಗೆ ನಿಯಮಿತವಾಗಿ ಮಾಹಿತಿ ನೀಡಬೇಕು. ಮಹದಾಯಿ ನ್ಯಾಯಾಧೀಕರಣದ ತೀರ್ಪಿನ ನಿಯಮ 12ರಲ್ಲಿ ಉಲ್ಲೇಖಿಸಿದಂತೆ ‘ಮಹದಾಯಿ ನದಿ ನೀರು ನಿರ್ವಹಣಾ ಪ್ರಾಧಿಕಾರ’ ಸ್ಥಾಪನೆಯಾದ ನಂತರ ಈ ಯೋಜನೆಗಳಿಗಾಗಿ ನದಿ ನೀರು ಬಳಕೆ ತಿರುವು ತೀರ್ಮಾನಗಳನ್ನು ಈ ಪ್ರಾಧಿಕಾರದಿಂದ ಅನುಮೋದನೆ ಪಡೆದು ಕೈಗೊಳ್ಳಬೇಕು.

*ಈ ಯೋಜನೆಗೆ ಅನುಮತಿ ನೀಡಿರುವುದು ಸುಪ್ರೀಂ ಕೋರ್ಟ್‌ನಲ್ಲಿ ವಿಚಾರಣಾ ಹಂತದಲ್ಲಿರುವ ಮಹಾರಾಷ್ಟ್ರ, ಕರ್ನಾಟಕ ಮತ್ತು ಗೋವಾ ಸರ್ಕಾರಗಳ ಪ್ರತ್ಯೇಕ ಅರ್ಜಿಗಳ ಅಂತಿಮ ತೀರ್ಪಿಗೆ ಒಳಪಟ್ಟಿರುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.