
ನವದೆಹಲಿ: ಮಹಾದೇವ್ ಬೆಟ್ಟಿಂಗ್ ಆ್ಯಪ್‌ನ ಪ್ರಮುಖ ಪ್ರವರ್ತಕರಲ್ಲಿ ಒಬ್ಬರಾಗಿದ್ದ ರವಿ ಉಪ್ಪಲ್ ಸೇರಿದಂತೆ ಇತರ ಆರೋಪಿಗಳಿಗೆ ಸಂಬಂಧಿಸಿದ ಒಟ್ಟು ₹21 ಕೋಟಿ ಆಸ್ತಿಯನ್ನು ಮತ್ತೆ ಮುಟ್ಟುಗೋಲು ಹಾಕಿಕೊಳ್ಳಲಾಗಿದೆ ಎಂದು ಜಾರಿ ನಿರ್ದೇಶನಾಲಯ(ಇ.ಡಿ) ಮಂಗಳವಾರ ಹೇಳಿದೆ.
ಈ ಸಂಬಂಧ ಅಕ್ರಮ ಹಣ ವರ್ಗಾವಣೆ ಕಾಯ್ದೆಯಡಿ ಜನವರಿ 10ರಂದು ತಾತ್ಕಾಲಿಕ ಆದೇಶ ಹೊರಡಿಸಲಾಗಿತ್ತು.
ಆ್ಯಪ್ ಮೂಲಕ ಉಪ್ಪಲ್ ₹15 ಕೋಟಿಯಿಂದ 20 ಕೋಟಿ ಗಳಿಸಿದ್ದರು. ಉಪ್ಪಲ್‌ಗೆ ಸಂಬಂಧಿಸಿದ, ದುಬೈನಲ್ಲಿದ್ದ ₹6.75 ಕೋಟಿ ಆಸ್ತಿಯನ್ನು ಮತ್ತು ಮತ್ತೊಬ್ಬ ಪ್ರವರ್ತಕ ಸೌರಭ್ ಚಂದ್ರಕರ್ ಆಪ್ತ ಸೇರಿದಂತೆ ಇಬ್ಬರ ಆಸ್ತಿಯನ್ನು ಜಪ್ತಿ ಮಾಡಲಾಗಿದೆ ಎಂದು ಇ.ಡಿ ತಿಳಿಸಿದೆ.
ಸೌರಭ್ ಅಹುಜಾ, ವಿಶಾಲ್ ರಮಣಿ, ವಿನಯ್ ಕುಮಾರ್, ಹನಿ ಸಿಂಗ್, ಲಕ್ಕಿ ಗೋಯಲ್ ಮತ್ತು ರಾಜಾ ಗುಪ್ತಾ ಅವರಿಗೆ ಸಂಬಂಧಿಸಿ ಭಾರತದಲ್ಲಿರುವ ಆಸ್ತಿಯನ್ನೂ ಮುಟ್ಟುಗೋಲು ಹಾಕಿಕೊಳ್ಳಲಾಗಿದೆ ಎಂದು ಇ.ಡಿ ತಿಳಿಸಿದೆ.
ಸೌರಭ್ ಚಂದ್ರಕರ್‌ಗೆ ಸೇರಿದ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳುವಂತೆ ಇ.ಡಿ ಕಳೆದ ವಾರ ಆದೇಶಿಸಿತ್ತು.
ಮಹಾದೇವ್ ಬೆಟ್ಟಿಂಗ್ ಆ್ಯಪ್ ಮೂಲಕ ಅಕ್ರಮ ವರ್ಗಾವಣೆ ನಡೆದಿದೆ ಎಂಬ ಆರೋಪದ ಬಗ್ಗೆ ಇ.ಡಿ ತನಿಖೆ ನಡೆಸುತ್ತಿದೆ.